ಮಾಯಾವತಿ ಭಾಷಣದ ಬಗ್ಗೆ ವರದಿ ಕೇಳಿದ ಚುನಾವಣಾ ಆಯೋಗ

Update: 2019-04-08 17:00 GMT

ಹೊಸದಿಲ್ಲಿ,ಎ.8: ರವಿವಾರ ಉತ್ತರ ಪ್ರದೇಶದ ಸಹಾರನ್‌ಪುರ ಜಿಲ್ಲೆಯ ದೇವಬಂದ್‌ನಲ್ಲಿ ಚುನಾವಣಾ ಪ್ರಚಾರದ ವೇಳೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿಯವರು ಮಾಡಿದ ಭಾಷಣದ ಕುರಿತು ವರದಿಯೊಂದನ್ನು ಸಲ್ಲಿಸುವಂತೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಎಲ್.ವೆಂಕಟೇಶ್ವರಲು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಿತ್ರಪಕ್ಷಗಳಾದ ಎಸ್‌ಪಿ ಮತ್ತು ಆರ್‌ಎಲ್‌ಡಿ ಜೊತೆ ಜಂಟಿ ರ್ಯಾಲಿಯಲ್ಲಿ ಭಾಷಣ ಮಾಡಿದ್ದ ಮಾಯಾವತಿ ಅವರು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಮತಗಳ ವಿಭಜನೆಗೆ ಅವಕಾಶ ನೀಡದಂತೆ ಮುಸ್ಲಿಂ ಸಮುದಾಯವನ್ನು ಆಗ್ರಹಿಸಿದ್ದರು. ‘‘ಪಶ್ಚಿಮ ಉತ್ತರ ಪ್ರದೇಶದಲ್ಲಿ ಎಲ್ಲ ಸಮುದಾಯಗಳ ಜನರಿದ್ದಾರೆ. ಸಹಾರನ್‌ಪುರ,ಬರೇಲಿಗಳಲ್ಲಿ ಮುಸ್ಲಿಮರು ಭಾರೀ ಸಂಖ್ಯೆಯಲ್ಲಿದ್ದಾರೆ. ನಿಮ್ಮ ಮತಗಳನ್ನು ವಿಭಜಿಸಬೇಡಿ ಮತ್ತು ಅವುಗಳನ್ನು ಬಿಎಸ್‌ಪಿ-ಎಸ್‌ಪಿ-ಆರ್‌ಎಲ್‌ಡಿ ಮೈತ್ರಿಕೂಟಕ್ಕೆ ನೀಡಿ’’ಎಂದು ಅವರು ಹೇಳಿದ್ದರು.

ಭಾಷಣದ ಕುರಿತು ಹಲವಾರು ದೂರುಗಳನ್ನು ತಾನು ಸ್ವೀಕರಿಸಿದ್ದಾಗಿ ತಿಳಿಸಿದ ವೆಂಕಟೇಶ್ವರಲು,ಎಲ್ಲ ಮೂರೂ ಪಕ್ಷಗಳ ಮುಖ್ಯಸ್ಥರು ಮಾಡಿದ್ದ ಭಾಷಣಗಳ ಧ್ವನಿಮುದ್ರಣವನ್ನು ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು. ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ ಮತ್ತು ಆರ್‌ಎಲ್‌ಡಿ ವರಿಷ್ಠ ಅಜಿತ್ ಸಿಂಗ್ ಅವರೂ ಮಾಯಾವತಿ ಜೊತೆಯಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಾಯವತಿಯವರ ಭಾಷಣವು ಕೋಮು ಭಾವನೆಯನ್ನು ಕೆರಳಿಸುವ ಸ್ವರೂಪದ್ದಾಗಿದೆ ಹಾಗೂ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವಲ್ಲಿ ತೊಡಕಾಗಿದೆ ಎಂದು ಆರೋಪಿಸಿ ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಜೆಪಿಎಸ್ ರಾಠೋಡ್ ಅವರೂ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News