ಗಡಿಪಾರು ಆದೇಶ ವಿರುದ್ಧ ಮೇಲ್ಮನವಿ: ಮಲ್ಯ ಮನವಿ ತಳ್ಳಿ ಹಾಕಿದ ಬ್ರಿಟನ್ ನ್ಯಾಯಾಲಯ

Update: 2019-04-08 17:20 GMT

ಲಂಡನ್,ಎ.8: ಬ್ರಿಟನ್ ಗೃಹ ಕಾರ್ಯದರ್ಶಿ ಸಾಜಿದ್ ಜಾವಿದ್ ಫೆಬ್ರವರಿ 4ರಂದು ನೀಡಿದ್ದ ಭಾರತಕ್ಕೆ ಗಡಿಪಾರು ಮಾಡುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅನುಮತಿ ಕೋರಿ ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ ಮಾಡಿದ ಮನವಿಯನ್ನು ಬ್ರಿಟನ್‌ನ ಉಚ್ಚ ನ್ಯಾಯಾಲಯದ ಮನವಿಗಳ ನ್ಯಾಯಾಲಯದ ನ್ಯಾಯಾಧೀಶರು ತಳ್ಳಿಹಾಕಿದ್ದಾರೆ.

ಆ ಮೂಲಕ ಭಾರತ ಈ ವಿಷಯದಲ್ಲಿ ಮತ್ತೊಮ್ಮೆ ಕಾನೂನಾತ್ಮಕ ಜಯಗಳಿಸಿದೆ. ಮಲ್ಯ ಫೆಬ್ರವರಿ 14ರಂದು ಮನವಿ ಸಲ್ಲಿಸಿದ್ದರು ಮತ್ತು ಗೃಹ ಕಚೇರಿ ತನ್ನ ಪ್ರತಿಕ್ರಿಯೆಯನ್ನು ನಿಗದಿತ 20 ದಿನಗಳೊಳಗೆ ನೀಡಿತ್ತು. ಕೆಳ ನ್ಯಾಯಾಲಯದಲ್ಲಿ ಈ ಹಿಂದೆ ಪರಿಗಣಿಸಲಾಗದ ಸಾಕ್ಷಿಗಳು ಅಥವಾ ಹೊಸ ವಿಷಯದ ಬಗ್ಗೆ ತಿಳಿಸುವಂತಿದ್ದಲ್ಲಿ ಮಾತ್ರ ಪ್ರಕರಣವನ್ನು ಮತ್ತೊಮ್ಮೆ ಸಂಪೂರ್ಣವಾಗಿ ಆಲಿಸಲು ಅವಕಾಶ ನೀಡಲಾಗುತ್ತದೆ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ.

ನ್ಯಾಯಾಧೀಶ ವಿಲಿಯಂ ಡೇವಿಸ್ ಎಪ್ರಿಲ್ 5ರಂದು ಮಲ್ಯಾರ ಮನವಿಯನ್ನು ತಳ್ಳಿಹಾಕಿದ್ದಾರೆ. ಮನವಿದಾರರ ಬಳಿ ಈ ಬಗ್ಗೆ ವೌಖಿಕ ಪರಿಗಣನೆಗೆ ಅರ್ಜಿ ಸಲ್ಲಿಸಲು ಐದು ವ್ಯವಹಾರ ದಿನಗಳಿವೆ ಎಂದು ನ್ಯಾಯಾಂಗದ ವಕ್ತಾರ ಸೋಮವಾರ ತಿಳಿಸಿದ್ದಾರೆ. ಸದ್ಯ ಮಲ್ಯರ ಬಳಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸುವ ಅವಕಾಶವಿದೆ. ಪ್ರಕರಣವು ಸಾರ್ವಜನಿಕ ಹಿತಾಸಕ್ತಿಯ ವಿಷಯವಾಗಿದ್ದರೆ ಶ್ರೇಷ್ಠ ನ್ಯಾಯಾಲಯ ಮೇಲ್ಮನವಿಗೆ ಅನುಮತಿ ನೀಡಬಹುದು. ಜೊತೆಗೆ ಗೃಹ ಕಾರ್ಯದರ್ಶಿಗೆ ಪ್ರಾತಿನಿಧ್ಯ ಸಲ್ಲಿಸುವ ಅವಕಾಶವೂ ಅವರ ಮುಂದಿದೆ ಎಂದು ಕಾನೂನು ಅಧಿಕಾರಿಗಳು ತಿಳಿಸಿದ್ದಾರೆ.

ಮಾನವ ಹಕ್ಕುಗಳ ಆಧಾರದಲ್ಲಿ ಗಡಿಪಾರನ್ನು ತಡೆಯಲು ಪ್ರಾತಿನಿಧ್ಯ ಅವಕಾಶವನ್ನು ಈ ಹಿಂದೆ ಟೈಗರ್ ಹನೀಫ್ ಬಳಸಿಕೊಂಡಿದ್ದ. ಈತ 1993ರ ಸೂರತ್ ಸ್ಫೋಟ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿದ್ದ. 2013ರಲ್ಲಿ ಎಲ್ಲ ಕಾನೂನು ಸಮರದಲ್ಲಿ ಸೋತ ಹನೀಫ್ ನಂತರ ತನ್ನ ಗಡಿಪಾರು ತಡೆಯಲು ಗೃಹ ಕಾರ್ಯದರ್ಶಿಗೆ ಪ್ರಾತಿನಿಧ್ಯ ಸಲ್ಲಿಸಿದ್ದ. ಗೃಹ ಕಾರ್ಯದರ್ಶಿ ಈ ವಿಷಯದಲ್ಲಿ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. 9,000 ಕೋಟಿ ರೂ. ವಂಚಿಸಿದ ಆರೋಪದಲ್ಲಿ ಭಾರತಕ್ಕೆ ಬೇಕಾಗಿರುವ ಮಲ್ಯ ಇತ್ತೀಚಿನ ದಿನಗಳಲ್ಲಿ ಈ ವಿಷಯದ ಬಗ್ಗೆ ತನ್ನ ನಿಲುವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ.

ಇತ್ತೀಚಿನ ಟ್ವೀಟ್‌ವೊಂದರಲ್ಲಿ ಮಲ್ಯ ಜೆಟ್ ಏರ್‌ವೇಸ್‌ನ ಆರ್ಥಿಕ ಸಮಸ್ಯೆ ಕುರಿತು ಉಲ್ಲೇಖಿಸಿದ್ದರು. ಜೆಟ್ ಏರ್‌ವೇಸ್‌ಅನ್ನು ಉಳಿಸಲು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿರುವ ತನ್ನ ಸೊತ್ತನ್ನು ಬಳಸಿಕೊಳ್ಳುವಂತೆ ಮಲ್ಯ ಆಗ್ರಹಿಸಿದ್ದರು. ಜೆಟ್ ಏರ್‌ವೇಸನ್ನು ಉಳಿಸಲು ಬ್ಯಾಂಕ್‌ಗಳು ಕಾರ್ಯತತ್ಪರವಾಗಿವೆ ಎಂದು ತಿಳಿಸಿದ ಮಲ್ಯ, ನಾನು ಕಿಂಗ್‌ಫಿಶರ್ ಏರ್‌ಲೈನ್ಸ್ ಮತ್ತು ಅದರ ಉದ್ಯೋಗಿಗಳನ್ನು ಉಳಿಸಲು 4,000 ಕೋಟಿ ರೂ. ಹೂಡಿಕೆ ಮಾಡಿದೆ. ಆದರೆ ನನ್ನ ಶ್ರಮವನ್ನು ಯಾರೂ ಗಮನಿಸಲೇ ಇಲ್ಲ ಮತ್ತು ಅದರ ಬದಲು ನನ್ನನ್ನು ಎಲ್ಲ ರೀತಿಯಲ್ಲೂ ತುಳಿದರು ಎಂದು ಮಲ್ಯ ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News