ಲೋಕಸಭಾ ಚುನಾವಣೆಯಲ್ಲಿ ಯುವ ಮತದಾರರೇ ನಿರ್ಣಾಯಕ

Update: 2019-04-08 18:24 GMT

ಬೆಂಗಳೂರು, ಎ.8: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ನಡೆಯುತ್ತಿರುವ 17 ನೆ ಸಂಸತ್ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಯುವ ಮತದಾರರೇ ನಿರ್ಣಾಯಕವಾಗಿದ್ದು, ಅಂದಾಜು ಶೇ.50 ರಷ್ಟು ಯುವ ಮತದಾರರು ಈ ಬಾರಿ ಮತದಾನಕ್ಕೆ ಅರ್ಹರಾಗಿದ್ದಾರೆ.

ಹೌದು, ರಾಜ್ಯದ ಒಟ್ಟು ಮತದಾರರಲ್ಲಿ ಶೇ.50 ರಷ್ಟು ಯುವಜನರು ಮತ ಚಲಾವಣೆ ಮಾಡಲಿದ್ದಾರೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಲು 5.10 ಕೋಟಿ ಜನರು ನೋಂದಾಯಿಸಿಕೊಂಡಿದ್ದು, ಅದರಲ್ಲಿ 2.5 ಕೋಟಿಯಷ್ಟು 18 ರಿಂದ 40 ವರ್ಷದೊಳಗಿನವರಿದ್ದಾರೆ. ಹೀಗಾಗಿ, ಯುವ ಸಮುದಾಯ ಯಾರ ಕಡೆ ಒಲವು ತೋರುತ್ತದೆಯೋ ಅವರೇ ಅಧಿಕಾರದ ಗದ್ದುಗೆ ಏರಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಾಜ್ಯಾದ್ಯಂತ ಕೋಟ್ಯಂತರ ಸಂಖ್ಯೆಯಲ್ಲಿರುವ ಯುವ ಮತದಾರರು ಈ ಬಾರಿಯ ಲೋಕಸಭಾ ಚುನಾವಣೆಗೆ ಸರಿಸುಮಾರು 2,51,61,536 ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ 18-19 ವರ್ಷದೊಳಗಿನವರು 1,00,9,167, 20-29 ವರ್ಷದೊಳಗಿನವರು 1,07,65,072 ಜನರು ನೋಂದಣಿ ಮಾಡಿಕೊಂಡಿದ್ದಾರೆ. ಇನ್ನುಳಿದಂತೆ 30-39 ವರ್ಷದೊಳಗಿನವರಲ್ಲಿ 1,33,87,297 ಜನರು ನೋಂದಾಯಿಸಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಈ ಬಾರಿ ಯುವ ಮತದಾರರು ನಿರ್ಣಾಯಕ ಪಾತ್ರ ವಹಿಸಲಿದ್ದು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾವಣೆ ಮಾಡಿದಲ್ಲಿ ಅರ್ಹ ಅಭ್ಯರ್ಥಿಯನ್ನು ಲೋಕಸಭೆಗೆ ಚುನಾಯಿಸುವಲ್ಲಿ ಯುವ ಸಮುದಾಯದ ಪಾತ್ರ ಮಹತ್ವದ್ದಾಗಿರುತ್ತದೆ.

ಇದೇ ಸಂದರ್ಭದಲ್ಲಿ ನೂರು ವರ್ಷಗಳನ್ನು ದಾಟಿದ್ದು, ತಮ್ಮ ಹಕ್ಕು ಚಲಾಯಿಸಲು 5580 ಹಿರಿಯ ಮತದಾರರು ನೋಂದಣಿ ಮಾಡಿಕೊಂಡಿದ್ದು, ಅವರಿಗೆ ಚುನಾವಣಾ ಆಯೋಗ ವಿಶೇಷ ಸೌಲಭ್ಯವನ್ನೂ ಕಲ್ಪಿಸಿದೆ. ಮತಗಟ್ಟೆಗೆ ತೆರಳಲು ವಾಹನ ವ್ಯವಸ್ಥೆಯನ್ನು ಮಾಡುವುದಾಗಿ ತಿಳಿಸಿದೆ.
ಅಲ್ಲದೆ, ಈ ಬಾರಿ ಮತ ಚಲಾಯಿಸಲು 40-49 ವರ್ಷದೊಳಗಿನ 1,04,28,996 ಮತದಾರರಿದ್ದಾರೆ. 50-59 ವರ್ಷದೊಳಗಿನ 73,79,542 ಮತದಾರರಿದ್ದಾರೆ. 60-69 ವರ್ಷದೊಳಗಿನ 47,29,332 ಮತದಾರರಿದ್ದಾರೆ. 70-79 ವರ್ಷದೊಳಗಿನ 24,19,011 ಮತದಾರರು ಇದ್ದಾರೆ. 80-89 ವರ್ಷದೊಳಗಿನ 7,87,893 ಮತದಾರರಿದ್ದು, 90-99 ವರ್ಷದೊಳಗಿನ 1,47,213 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಉತ್ಸುಹಕರಾಗಿದ್ದಾರೆ.
ರಾಜ್ಯದಲ್ಲಿ ಅತಿಹೆಚ್ಚು ಯುವ ಮತದಾರರು ಬೆಳಗಾವಿ ಜಿಲ್ಲೆಯಲ್ಲಿದ್ದು, 18-19 ವರ್ಷದೊಳಗಿನವರು 81,575, 20-29 ವರ್ಷದೊಳಗಿನವರು 8,33,321 ಹಾಗೂ 30-39 ವರ್ಷದೊಳಗಿನವರು 9,32,342 ರಷ್ಟಿದ್ದಾರೆ. ಅತಿ ಕಡಿಮೆ ಸಂಖ್ಯೆಯಲ್ಲಿ ಕೊಡಗು ಜಿಲ್ಲೆಯಲ್ಲಿದ್ದು, 18-19 ವರ್ಷದೊಳಗಿನವರು 8,187, 20-29 ವರ್ಷದೊಳಗಿನವರು 84,510 ಹಾಗೂ 30-39 ವರ್ಷದೊಳಗಿನವರು 1,00,870 ಮತದಾರರಿದ್ದಾರೆ.

ಯುವ ಸಮುದಾಯಕ್ಕೆ ಈ ಬಾರಿಯ ಲೋಕಸಭಾ ಚುನಾವಣೆ ಅತ್ಯಂತ ಮಹತ್ವರವಾದ ಹಾಗೂ ಬದುಕಿನ ನಿರ್ಣಾಯಕ ಘಟ್ಟವನ್ನು ಪ್ರತಿನಿಧಿಸುವಂತಾಗಿದೆ. ಈ ಸಂದರ್ಭದಲ್ಲಿ ಯುವ ಸಮುದಾಯ ಸುಭದ್ರ ಉದ್ಯೋಗ ಸೃಷ್ಟಿ ಮಾಡುವ, ದೇಶದ ಅಭಿವೃದ್ಧಿಗಾಗಿ ಜನಪರ ಯೋಜನೆ ಜಾರಿ ಮಾಡುವ, ಶಾಂತಿ, ಸಮಾನತೆ, ಸೌರ್ಹಾದತೆ, ಬಹುತ್ವವನ್ನು ಕಾಪಾಡುವವರನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಅದೇ ರೀತಿ ಸಂವಿಧಾನ ಗೌರವಿಸುವವರನ್ನು ಚುನಾಯಿಸಬೇಕಿದೆ. ಹಾಗೆಯೇ ಯುವಜನತೆ ಸಕ್ರಿಯ ರಾಜಕಾರಣಕ್ಕೆ ಬರಬೇಕಿದೆ.
-ಮುತ್ತುರಾಜ್, ಉದ್ಯೋಗಕ್ಕಾಗಿ ಯುವಜನರು ವೇದಿಕೆ ಸಂಚಾಲಕ

ಇಂದಿನ ಚುನಾವಣೆ ಯುವ ಸಮುದಾಯದ ಮುಂದೆ ದೊಡ್ಡ ಸವಾಲೊಂದನ್ನು ತಂದು ನಿಲ್ಲಿಸಿದೆ. ಈ ವೇಳೆ ಯುವಜನತೆ ಯೋಚನೆ ಮಾಡಿ ಮತ ಚಲಾಯಿಸಬೇಕು. ಉದ್ಯೋಗ ಸೃಷ್ಟಿ ಪ್ರಧಾನವಾಗಿರುವ ಕಡೆಗೆ ಮತ ಮಾಡುವಂತಾಗಬೇಕು. ಅದೇ ರೀತಿ ಯುವಜನತೆ ರಾಜಕೀಯ ಪಕ್ಷಗಳು ಸೃಷ್ಟಿಸಿರುವ ದೇಶಪ್ರೇಮ, ಧರ್ಮ ರಕ್ಷಣೆಯಂತಹ ಉನ್ಮಾದಗಳಿಂದ ಹೊರಬರಬೇಕು. ಎಲ್ಲ ರಾಜಕೀಯ ಪಕ್ಷಗಳ ಪ್ರಣಾಳಿಕೆ, ಆರ್ಥಿಕ, ಶೈಕ್ಷಣಿಕ ನೀತಿಗಳನ್ನು ಗಮನಿಸಿ, ರಾಜಕೀಯ ಚರ್ಚೆ ಮಾಡುವ ಮೂಲಕ ಅರ್ಹ ಅಭ್ಯರ್ಥಿಯನ್ನು ಚುನಾಯಿಸಬೇಕಾದ ಅಗತ್ಯವಿದೆ.
-ಮುನೀರ್ ಕಾಟಿಪಳ್ಳ, ಡಿವೈಎಫ್‌ಐ ರಾಜ್ಯಾಧ್ಯಕ್ಷ

ದೇಶದಲ್ಲಿ ಶಿಕ್ಷಣ, ಉದ್ಯೋಗ, ಆರೋಗ್ಯ ಭದ್ರತೆ ನೀಡುವ ಪ್ರಾಮಾಣಿಕ ಭರವಸೆ ನೀಡುವವರಿಗೆ ಯುವ ಸಮುದಾಯ ತಮ್ಮ ಮತ ಚಲಾವಣೆ ಮಾಡುವ ಮೂಲಕ ದೇಶದ ರಕ್ಷಣೆಗೆ ಮುಂದಾಗಬೇಕು. ದೇಶದ ಎರಡು ಪ್ರಮುಖ ರಾಜಕೀಯ ಪಕ್ಷಗಳು ಪೈಪೋಟಿಗೆ ಬೀಳುವ ಮೂಲಕ ದೇಶದ ವಿದ್ಯಾರ್ಥಿ, ಯುವಜನರ ಕಡೆಗೆ ಗಮನ ನೀಡುವಲ್ಲಿ ವಿಫಲವಾಗಿವೆ.
-ಅಂಬರೀಶ್, ಎಸ್‌ಎಫ್‌ಐ ರಾಜ್ಯಾಧ್ಯಕ್ಷ

Writer - -ಬಾಬುರೆಡ್ಡಿ ಚಿಂತಾಮಣಿ

contributor

Editor - -ಬಾಬುರೆಡ್ಡಿ ಚಿಂತಾಮಣಿ

contributor

Similar News