ಮಾವೋವಾದಿಗಳಿಂದ ಸ್ಫೋಟ: ಬಿಜೆಪಿ ಶಾಸಕ ಸೇರಿ ಐವರು ಮೃತ್ಯು

Update: 2019-04-09 17:50 GMT

ದಾಂತೆವಾಡ, ಎ. 9: ಮತದಾನ ನಡೆಯಲಿರುವ 36 ಗಂಟೆಗಳಿಗೆ ಮುನ್ನ ಚತ್ತೀಸ್‌ಗಢದ ದಾಂತೆವಾಡದಲ್ಲಿ ಮಂಗಳವಾರ ನಕ್ಸಲೀಯರು ಬೆಂಗಾವಲು ವಾಹನಗಳ ಮೇಲೆ ನಡೆಸಿದ ಬಾಂಬ್ ದಾಳಿಯಲ್ಲಿ ಬಿಜೆಪಿ ಶಾಸಕ ಹಾಗೂ ಇತರ ನಾಲ್ವರು ಮೃತಪಟ್ಟಿದ್ದಾರೆ.

ಬಾಂಬ್ ದಾಳಿಯಲ್ಲಿ ಮೃತಪಟ್ಟ ಶಾಸಕರನ್ನು ಭೀಮಾ ಮಾಂಡವಿ (40) ಎಂದು ಗುರುತಿಸಲಾಗಿದೆ. ಇವರು ದಾಂತೆವಾಡದ ಶಾಸಕ.

ಬಸ್ತಾರ್‌ನಲ್ಲಿ ಮತದಾನ ನಡೆಯುವ ದಿನಗಳಿಗಿಂತ ಮುನ್ನ ಕುವಾಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ ಶ್ಯಾಮ್‌ಗಿರಿಯಲ್ಲಿ ಈ ಘಟನೆ ನಡೆದಿದೆ.

ಘಟನೆಯಲ್ಲಿ ಮೃತಪಟ್ಟ ಇತರರು ಮಾಂಡವಿ ಅವರ ಕಾರು ಚಾಲಕ ಹಾಗೂ ಮೂವರು ಭದ್ರತಾ ಅಧಿಕಾರಿಗಳು ಎಂದು ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ನಕ್ಸಲ್ ಕಾರ್ಯಾಚರಣೆ) ಪಿ. ಸುಂದರ್ ರಾಜ್ ಹೇಳಿದ್ದಾರೆ.

ಶ್ಯಾಮ್‌ಗಿರಿ ಬೆಟ್ಟಗಳ ಸಮೀಪದ ಪ್ರದೇಶದಲ್ಲಿ ಬೆಂಗಾವಲು ವಾಹನಗಳು ಹಾದು ಹೋಗುತ್ತಿದ್ದಾಗ ನಕ್ಸಲೀಯರು ಐಇಡಿ (ಸುಧಾರಿತ ಸ್ಪೋಟ) ಬಳಸಿ ಸ್ಫೋಟ ನಡೆಸಿದರು. ಐಇಡಿಯನ್ನು ರಸ್ತೆಯಲ್ಲಿ ಹುಗಿದು ಇರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಂಡವಿ ಅವರು ಎರಡನೇ ಕಾರಿನಲ್ಲಿ ಇದ್ದರು. ಕಿರಾಂದುಲ್‌ನಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಸಭೆಯಲ್ಲಿ ಪಾಲ್ಗೊಂಡ ಬಳಿಕ ಅವರು ಕುವಾಕೊಂಡದತ್ತ ತೆರಳುತ್ತಿದ್ದರು. ಪಕ್ಷದ ಕಾರ್ಯಕರ್ತರ ಚುನಾವಣಾ ಸಿದ್ಧತೆ ಪರಿಶೀಲಿಸುವ ಉದ್ದೇಶದಿಂದ ಅವರು ಅಲ್ಲಿಗೆ ಹೋಗಿದ್ದರು.

 ಘಟನೆಯಲ್ಲಿ ಪಾರಾದವರು ಕಾರಿನಿಂದ ಹೊರಗೆ ಬರಲು ಯತ್ನಿಸಿದ ಸಂದರ್ಭ ಅಡಗಿ ನಿಂತ ನಕ್ಸಲೀಯರು ಗುಂಡಿನ ದಾಳಿ ನಡೆಸಿದರು. ಇದರಿಂದ ಭದ್ರತಾ ಸಿಬ್ಬಂದಿ ಹಾಗೂ ನಕ್ಸಲೀಯರ ನಡುವೆ ಗುಂಡಿನ ಚಕಮಕಿ ನಡೆಯಿತು. ಕೂಡಲೇ ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿತು.

 ಮುಖ್ಯ ರಸ್ತೆಯಲ್ಲಿ ಪ್ರಯಾಣಿಸುವಂತೆ ಈ ವಾಹನಗಳಿಗೆ ಪೊಲೀಸರು ಸಲಹೆ ನೀಡಿದ್ದರು. ಕೊನೆಯ ದಿನದ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಸಮಯ ಉಳಿತಾಯ ಮಾಡುವ ಉದ್ದೇಶದಿಂದ ಈ ವಾಹನಗಳು ಬಛೇಲಿಯಿಂದ ನಾಕುಲ್ನಾಡ್‌ಗೆ ಕುವಾಕೊಂಡ ಮೂಲಕ ಅಡ್ಡ ದಾರಿಯಲ್ಲಿ ಸಂಚರಿಸಿದವು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀ ಭೀಮಾ ಮಾಂಡವಿ ಬಿಜೆಪಿಯ ಪ್ರಾಮಾಣಿಕ ಕಾರ್ಯಕರ್ತ. ಶ್ರದ್ಧಾವಂತ, ಧೈರ್ಯಶಾಲಿ. ಅವರು ಚತ್ತೀಸ್‌ಗಢದ ಜನರಿಗೆ ಕಾಳಜಿಯಿಂದ ಸೇವೆ ನೀಡಿದ್ದಾರೆ. ಅವರ ನಿಧನ ದುಃಖ ತಂದಿದೆ. ಅವರ ಕುಟುಂಬ ಹಾಗೂ ಬೆಂಬಲಿಗೆರಿಗೆ ಸಂತಾಪ ವ್ಯಕ್ತಪಡಿಸುತ್ತೇನೆ.

ನರೇಂದ್ರ ಮೋದಿ, ಪ್ರದಾನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News