ಶ್ರೀನಗರದಲ್ಲಿ ಉಗ್ರರ ದಾಳಿ: ಆರೆಸ್ಸೆಸ್ ಮುಖಂಡ , ಅಂಗರಕ್ಷಕ ಸಾವು
ಶ್ರೀನಗರ, ಎ.9: ಜಮ್ಮುಕಾಶ್ಮೀರದ ಕಿಸ್ತ್‌ವಾರ್ ಜಿಲ್ಲೆಯಲ್ಲಿ ಮಂಗಳವಾರ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಆರೆಸ್ಸೆಸ್ ಮುಖಂಡ ಹಾಗೂ ಅವರ ವೈಯಕ್ತಿಕ ಭದ್ರತಾ ಅಧಿಕಾರಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೆಸ್ಸೆಸ್ ಮುಖಂಡ, ಆರೋಗ್ಯ ಇಲಾಖೆಯ ಸಿಬ್ಬಂದಿ ಚಂದ್ರಕಾಂತ್ ಶರ್ಮ ಸ್ಥಳೀಯ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆಸ್ಪತ್ರೆಗೆ ಬಂದ ಭಯೋತ್ಪಾದಕರು ಏಕಾಏಕಿ ಭದ್ರತಾ ಅಧಿಕಾರಿಯ ಮೇಲೆ ಮುಗಿಬಿದ್ದು ಅವರ ಕೈಯಲ್ಲಿದ್ದ ಆಯುಧವನ್ನು ಕಿತ್ತುಕೊಂಡರು ಹಾಗೂ ಸಮೀಪದಿಂದ ಇಬ್ಬರ ಮೇಲೆ ಗುಂಡು ಹಾರಿಸಿದರು. ಗುಂಡಿನ ದಾಳಿಯಲ್ಲಿ ಭದ್ರತಾ ಅಧಿಕಾರಿ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರ ಗಾಯಗೊಂಡ ಚಂದ್ರಕಾಂತ್ ಶರ್ಮರನ್ನು ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆಯ ಬಳಿಕ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದು ಉನ್ನತ ಭದ್ರತಾಧಿಕಾರಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಮುಂಜಾಗೃತಾ ಕ್ರಮವಾಗಿ ಕಿಸ್ತ್‌ವಾರ್ ಪಟ್ಟಣದಲ್ಲಿ ಕರ್ಫ್ಯೂ ವಿಧಿಸಲಾಗಿದೆ ಹಾಗೂ ಕಿಶ್ತ್‌ವಾರ್, ದೋಡ ಹಾಗೂ ಭದರ್‌ವಾ ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಘಟನೆಗೆ ಸರಕಾರ ಹಾಗೂ ಪೊಲೀಸರ ನಿಷ್ಕ್ರಿಯತೆ ಕಾರಣ ಎಂದು ಆರೋಪಿಸಿ ಕಿಶ್ತ್‌ವಾರ್‌ನಲ್ಲಿ ಜನರು ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ಹೆಚ್ಚುವರಿ ಸೇನಾಪಡೆಗಳನ್ನು ನಿಯೋಜಿಸಲಾಗಿದ್ದು ಉಗ್ರರ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕಿಶ್ತ್‌ವಾರ್ ಹಿರಿಯ ಪೊಲೀಸ್ ಅಧೀಕ್ಷಕ ಶಕ್ತಿ ಪಾಠಕ್ ತಿಳಿಸಿದ್ದಾರೆ.