×
Ad

ಅಮಿತ್ ಶಾ ನೇತೃತ್ವದಲ್ಲಿ ಬೃಹತ್ ಪ್ರಮಾಣದ ಹಳೆನೋಟು ವಿನಿಮಯ: ವಿಡಿಯೋ ಬಿಡುಗಡೆಗೊಳಿಸಿ ಕಾಂಗ್ರೆಸ್ ಆರೋಪ

Update: 2019-04-09 22:57 IST

ಹೊಸದಿಲ್ಲಿ, ಎ.9: ಕೇಂದ್ರ ಸರಕಾರದ ಸಂಪುಟ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಎನ್ನಲಾದ ವ್ಯಕ್ತಿಯೊಬ್ಬರು, ಅಮಾನ್ಯಗೊಂಡ ಕರೆನ್ಸಿ ನೋಟುಗಳ ಬದಲಿಗೆ ಬೃಹತ್ ಪ್ರಮಾಣದ 2 ಸಾವಿರ ರೂ. ನೋಟುಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವ ದೃಶ್ಯವನ್ನು ತೋರಿಸುವ ವೀಡಿಯೊವನ್ನು ಕಾಂಗ್ರೆಸ್ ಬಹಿರಂಗಪಡಿಸಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಅದು ಒತ್ತಾಯಿಸಿದೆ.

ಹೊಸದಿಲ್ಲಿಯ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ, ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಈ ವಿಡಿಯೋವನ್ನು ಪ್ರದರ್ಶಿಸಿದರು. ಆಡಳಿತ ಬಿಜೆಪಿಯ ವಿರುದ್ಧ ಹಲವಾರು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ವರದಿಯಾಗಿದ್ದರೂ ಚುನಾವಣಾ ಆಯೋಗವು ಅದರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ. ವೀಡಿಯೊವೊಂದನ್ನೂ ಪ್ರದರ್ಶಿಸಿದ ಪಕ್ಷವು,ಇದು ನೋಟು ನಿಷೇಧದ ಬಳಿಕ ಸರಕಾರವು ನಡೆಸಿದ್ದ ನೋಟು ವಿನಿಮಯದ ಹಿಂದಿನ ಕಪಟವನ್ನು ಬಯಲಿಗೆಳೆದಿದೆ ಎಂದು ಪ್ರತಿಪಾದಿಸಿದೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ನೇತೃತ್ವದಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡಿದ್ದ ವಿಶೇಷ ತಂಡವು ಈ ನೋಟು ವಿನಿಮಯ ವನ್ನು ನಡೆಸಿತ್ತು. ಈ ಕಾರ್ಯಾಚರಣೆಯಲ್ಲಿ ವಿವಿಧ ಸಚಿವರು ಮತ್ತು ಉದ್ಯಮ ಸಂಸ್ಥೆಗಳಿಂದ ಸಂಗ್ರಹಿಸಲಾಗಿದ್ದ ಹಳೆಯ ನೋಟುಗಳನ್ನು ವಿಮಾನಗಳಲ್ಲಿ ಹಿಂಡೋನ್ ವಾಯು ನೆಲೆಗೆ ತರಲಾಗಿತ್ತು ಮತ್ತು ಶೇ.35ರಿಂದ 40ರಷ್ಟು ಶುಲ್ಕವನ್ನು ವಿಧಿಸಿ ಆರ್‌ಬಿಐಗೆ ಸಾಗಿಸಲಾಗಿತ್ತು ಎಂದು ಹೇಳಿದರು.

ನೋಟು ನಿಷೇಧವು ಭಾರತದ ಇತಿಹಾಸ ದಲ್ಲಿಯೇ ಅತ್ಯಂತ ದೊಡ್ಡ ಹಗರಣವಾಗಿದೆ. ನಮ್ಮ ತನಿಖಾ ಸಂಸ್ಥೆಗಳು ಪ್ರತಿಪಕ್ಷಗಳನ್ನು ತನಿಖೆಗೊಳಪಡಿಸುತ್ತವೆಯೇ ಹೊರತು ಅಧಿಕಾರದಲ್ಲಿರುವವರನ್ನಲ್ಲ ಎನ್ನುವುದು ವಿಷಾದನೀಯ ವಾಗಿದೆ ಎನ್ನುವ ಮೂಲಕ ಸಿಬಲ್ ಕಳೆದ ಕೆಲವು ವಾರಗಳಿಂದ ನಡೆಯುತ್ತಿರುವ ಸರಣಿ ತನಿಖೆಗಳು ಮತ್ತು ದಾಳಿಗಳನ್ನು ಬೆಟ್ಟು ಮಾಡಿದರು.

ಆದರೆ ಇಂತಹ ಹಲವು ಕುಟುಕು ಕಾರ್ಯಾ ಚರಣೆಯ ವೀಡಿಯೊಗಳಿದ್ದರೂ ಯಾವುದೇ ತನಿಖಾ ಸಂಸ್ಥೆಯು ತನಿಖೆಯನ್ನು ನಡೆಸುತ್ತಿಲ್ಲ ಎಂದರು. ಚುನಾವಣಾ ಆಯೋಗ ಸೇರಿದಂತೆ ದೇಶದ ಎಲ್ಲ ಸಂಸ್ಥೆಗಳ ಕಥೆಯೂ ಇದೇ ಆಗಿದೆ ಎಂದರು.

ನಾವು ಚುನಾವಣಾ ಆಯೋಗಕ್ಕೆ ಲೆಕ್ಕವಿಲ್ಲದಷ್ಟು ದೂರುಗಳನ್ನು ಸಲ್ಲಿಸಿದ್ದೇವೆ. ಆದರೆ ಅದು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಮತ್ತು ನಮಗೆ ನ್ಯಾಯಾಲಯದ ಮೆಟ್ಟಿಲನ್ನೇರಲು ಸಮಯಾವಕಾಶವಿಲ್ಲ ಎಂದು ಸಿಬಲ್ ತಿಳಿಸಿದರು. ಮೊದಲ ಹಂತದ ಸಾರ್ವತ್ರಿಕ ಚುನಾವಣೆಗಳು ಗುರುವಾರ ನಡೆಯಲಿವೆ.

ಪ್ರತಿಪಕ್ಷಗಳು ತನಿಖಾ ಸಂಸ್ಥೆಗಳಿಂದ ನಿರಂತರ ಸರಣಿ ದಾಳಿಗಳನ್ನು ಎದುರಿಸುತ್ತಿವೆ. ಕಳೆದ ತಿಂಗಳು ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ನಾಯಕರೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿಗಳ ವಿರುದ್ಧ ಆದಾಯ ತೆರಿಗೆ ಇಲಾಖೆ ಮುಗಿಬೀಳುವುದರೊಂದಿಗೆ ಈ ಸರಣಿ ದಾಳಿಗಳು ಆರಂಭ ಗೊಂಡಿದ್ದವು. ಇತ್ತೀಚಿನ ದಾಳಿಗಳು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ಅವರ ನಿಕಟವರ್ತಿಗಳ ಆಸ್ತಿಗಳನ್ನು ಗುರಿಯಾಗಿಸಿಕೊಂಡು ನಡೆದಿದ್ದವು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News