×
Ad

ಯೋಧರ ಹೆಸರಲ್ಲಿ ಮತ ಕೇಳಿದ ಪ್ರಧಾನಿ ಭಾಷಣವನ್ನು ಗಂಭೀರವಾಗಿ ಪರಿಗಣಿಸಿದ ಚು.ಆಯೋಗ

Update: 2019-04-10 14:28 IST

ಔರಂಗಾಬಾದ್, ಎ.10: ತಮ್ಮ ಮೊದಲ ಮತವನ್ನು ಬಾಲಕೋಟ್ ವಾಯುದಾಳಿಗೆ ಹಾಗೂ ಪುಲ್ವಾಮ ಹುತಾತ್ಮರಿಗೆ ಮುಡಿಪಾಗಿಡಬೇಕೆಂದು ಈ ಚುನಾವಣೆಯಲ್ಲಿ ಮೊದಲ ಬಾರಿ ಮತದಾನ ಮಾಡುವ ಯುವ ಮತದಾರರಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಅಪೀಲು ಮಾಡಿದ್ದನ್ನು ಆಕ್ಷೇಪಿಸಿ ವಿಪಕ್ಷಗಳು ಚುನಾವಣಾ ಆಯೋಗದ ಮೊರೆಹೋಗಿವೆ.

ಆಯೋಗ ಕೂಡ ಮಂಗಳವಾರ ತಡ ರಾತ್ರಿಯೇ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪ್ರಧಾನಿ ಈ ನಿರ್ದಿಷ್ಟ ರ್ಯಾಲಿಯಲ್ಲಿ ಮಾಡಿರುವ ಭಾಷಣದ ಬಗ್ಗೆ  ಶೀಘ್ರ ವರದಿ ಸಲ್ಲಿಸುವಂತೆ ಮಹಾರಾಷ್ಟ್ರ ಮುಖ್ಯ ಚುನಾವಣಾಧಿಕಾರಿಗೆ ಸೂಚಿಸಿದೆ.

“ನೀವು ನಿಮ್ಮ ಮೊದಲ ವೇತನ ಪಡೆಯುವಾಗ ಸಾಮಾನ್ಯವಾಗಿ ಅದನ್ನು ನಿಮಗಾಗಿ ಉಪಯೋಗಿಸದೆ ಅದನ್ನು ನಿಮ್ಮ ತಾಯಿ ಅಥವಾ ಸೋದರಿಗೆ ನೀಡುತ್ತೀರೇ?. ಅಂತೆಯೇ ನಿಮ್ಮ ಮೊದಲ ಮತವನ್ನು ಪುಲ್ವಾಮ ಉಗ್ರ ದಾಳಿಯ  ಹುತಾತ್ಮರಿಗೆ, ಉತ್ತಮ ಮನೆಗಳಿಗಾಗಿ, ಕುಡಿಯುವ ನೀರಿಗಾಗಿ ಹಾಗೂ ಬಡವರಲ್ಲಿ ಬಡವರಿಗೆ ಉತ್ತಮ ಆರೋಗ್ಯ ಸೇವಾ ಸೌಲಭ್ಯಗಳಿಗಾಗಿ ಮುಡಿಪಾಗಿಡಬಹುದೇ'' ಎಂದು ಪ್ರಧಾನಿ ಹೇಳಿದ್ದರು.

ಬಿಜೆಪಿಯ ಪುಲ್ವಾಮ ಉಗ್ರ ದಾಳಿಯನ್ನು ಹಾಗೂ ನಂತರ ನಡೆದ ಬಾಲಕೋಟ್ ವಾಯು ದಾಳಿಯನ್ನು ರಾಜಕೀಯ ಲಾಭಕ್ಕಾಗಿ ಬಳಸುತ್ತಿದೆ ಎಂಬ ವಿಪಕ್ಷಗಳ ದೂರಿನ ನಡುವೆಯೇ ಪ್ರಧಾನಿಯ ಮಂಗಳವಾರದ ಭಾಷಣ ಬಂದಿದೆ. ದೇಶದ ರಕ್ಷಣಾ ಪಡೆಗಳ ಬಲಿದಾನವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುವುದು ಖಂಡನಾರ್ಹ, ಪ್ರಧಾನಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಪಕ್ಷಗಳ ಆಗ್ರಹದ ಹಿನ್ನೆಲೆಯಲ್ಲಿ ಆಯೋಗ ಮಹಾರಾಷ್ಟ್ರ ಮುಖ್ಯ ಚುನಾವಣಾಧಿಕಾರಿಗಳಿಂದ ವರದಿ ಕೇಳಿದೆ.

ಮಾರ್ಕಿಸ್ಟ್ ಕಮ್ಯುನಿಸ್ಟ್ ಪಕ್ಷವೂ  ಚುನಾವಣಾ ಆಯೋಗಕ್ಕೆ ಪತ್ರ ಬರೆದು ಚುನಾವಣಾ ಪ್ರಚಾರದಲ್ಲಿ ಧ್ರುವೀಕರಣಕ್ಕೆ ಆಸ್ಪದವಿರದಂತೆ ಕ್ರಮ ಕೈಗೊಳ್ಳಬೇಕು ಎಂದು  ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News