ಇಮ್ರಾನ್ ಖಾನ್ ಜತೆ ರಾಹುಲ್, ಮಮತಾ: ಕೆಟ್ಟ ಫೋಟೊಶಾಪ್ ನಿಂದ ನಗೆಪಾಟಲಿಗೀಡಾದ ಬಿಜೆಪಿ ಪರ ಟ್ರೋಲ್ ಗಳು

Update: 2019-04-10 10:18 GMT

ಹೊಸದಿಲ್ಲಿ, ಎ.10: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಮ್ಮ ದೇಶದ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ಅವರ ಜತೆ ಮಾತುಕತೆ ನಡೆಸುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಈ ಚಿತ್ರದಲ್ಲಿ ಇಮ್ರಾನ್ ಮತ್ತು ಖಮರ್ ಜಾವೇದ್ ಅವರು ಮಾತುಕತೆ ನಡೆಸುತ್ತಿರುವ ಕೊಠಡಿಯ ಒಂದು ಮೂಲೆಯಲ್ಲಿರುವ ಕುರ್ಚಿಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಕಾಂಗ್ರೆಸ್ ನಾಯಕರಾದ ಶತ್ರುಘ್ನ ಸಿನ್ಹಾ ಹಾಗೂ ನವಜೋತ್ ಸಿಂಗ್ ಸಿಧು ಕುಳಿತುಕೊಂಡಿರುವುದು ಕಾಣಿಸುತ್ತದೆ.

ದೇವರಾಜ್ ಕೊಟ್ಲ ಎಂಬ ವ್ಯಕ್ತಿಯ ಖಾತೆಯಿಂದ ಪೋಸ್ಟ್ ಮಾಡಲ್ಪಟ್ಟ ಈ ಚಿತ್ರವನ್ನು 4,200ಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ. ಚಿತ್ರದ ಕೆಳಗೆ ಹೀಗೆ ಬರೆಯಲಾಗಿದೆ. “ನೀವು ಕಾಂಗ್ರೆಸ್ ಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದ ಹಾಗೆ. ಚಿತ್ರ ನೋಡಿ ಪಾಕಿಸ್ತಾನದ ಪರ ಗುಲಾಮರು ಮೂಲೆಯಲ್ಲಿ ಹೇಗೆ ಕುಳಿತಿದ್ದಾರೆ''.

ಈ ಚಿತ್ರವನ್ನು ಕೂಲಂಕಷವಾಗಿ ಗಮನಿಸಿದರೆ ಇದು ಫೋಟೋಶಾಪ್ ಮಾಡಲ್ಪಟ್ಟ ಚಿತ್ರವೆಂದು ಸ್ಪಷ್ಟವಾಗುತ್ತದೆ. ಗೂಗಲ್ ರಿವರ್ಸ್ ಸರ್ಚ್ ಮಾಡಿದಾಗ ಮೂಲ ಚಿತ್ರ ಕಂಡುಬರುವುದಲ್ಲದೆ ಅದರಲ್ಲಿ ರಾಹುಲ್, ಮಮತಾ, ಸಿಧು, ಸಿನ್ಹಾ ಎಲ್ಲೂ ಕುಳಿತಿರುವುದು ಕಾಣಿಸುವುದಿಲ್ಲ.

ಟ್ವಿಟರ್ ಹ್ಯಾಂಡಲ್ @ಏಥಿಸ್ಟ್_ಕೃಷ್ಣ ಎಂಬ ಖಾತೆಯಿಂದ ಎಪ್ರಿಲ್ 5ರಂದು ಈ ಚಿತ್ರವನ್ನು ಫೋಟೋಶಾಪ್ ಮಾಡಿ ಪೋಸ್ಟ್ ಮಾಡಲಾಗಿದೆ ಎನ್ನಲಾಗಿದ್ದು, “ಬಾಲಕೋಟ್ ನಲ್ಲಿ  ಉಗ್ರರು ಸತ್ತಿರುವ ಬಗ್ಗೆ ಪುರಾವೆ ಸಂಗ್ರಹಿಸಲು ವಿಪಕ್ಷಗಳು ಪಾಕಿಸ್ತಾನ ತಲುಪಿವೆ'' ಎಂದು ವಿಪಕ್ಷಗಳನ್ನು ವ್ಯಂಗ್ಯವಾಡಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಅನ್ನು 7,000ಕ್ಕೂ ಅಧಿಕ ಮಂದಿ ರಿಟ್ವೀಟ್ ಮಾಡಿದ್ದಾರೆ.

ಕೃಪೆ: altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News