ದೇಶ ಸೇವೆ ನನ್ನ ಗುರಿ : ಡಾ. ರಿಹಾನ ಬಷೀರ್

Update: 2019-04-10 15:04 GMT
ಡಾ. ರಿಹಾನ ಬಷೀರ್ 

ಇತ್ತೀಚಿಗೆ ಪ್ರಕಟವಾದ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ )ಪರೀಕ್ಷಾ ಫಲಿತಾಂಶ ದೇಶದ ವಿವಿಧೆಡೆಗಳಿಂದ  ಸ್ಪೂರ್ತಿದಾಯಕ ಯಶೋಗಾಥೆಯನ್ನು ಒಂದೊಂದಾಗಿ ಜನರೆದುರು ತರುತ್ತಿದೆ. ಈ ಪೈಕಿ ಒಬ್ಬರು   ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಪ್ರಪ್ರಥಮ ಯುಪಿಎಸ್ಸಿ ಸಾಧಕಿ ಡಾ. ರಿಹಾನ ಬಷೀರ್.

ಪೂಂಚ್ ಜಿಲ್ಲೆಯ ಸಲ್ವಾಹ್ ಗ್ರಾಮದ ಡಾ. ರಿಹಾನ ಶ್ರೀನಗರದ ಶೇರ್ ಕಾಶ್ಮೀರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕಲಿತವರು. ಈ ಬಾರಿ ಪ್ರತಿಷ್ಠಿತ ಯುಪಿಎಸ್ಸಿ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 187 ನೇ ಸ್ಥಾನ ಪಡೆದು ಆಯ್ಕೆಯಾಗಿದ್ದಾರೆ.  ಅವರ ಸೋದರ ಅಮೀರ್ ಬಶೀರ್ ಈಗಾಗಲೇ ಭಾರತೀಯ ಕಂದಾಯ ಸೇವೆಯ ಅಧಿಕಾರಿಯಾಗಿದ್ದಾರೆ. 

 ರಿಹಾನ ಎರಡನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪಾಸಾಗಿದ್ದಾರೆ. ಈ ಮೊದಲು 2017 ರಲ್ಲಿ ಅವರು ಪರೀಕ್ಷೆಗೆ ಹಾಜರಾಗಿದ್ದರು. "ಇದು ಸುಲಭ ಇರಲಿಲ್ಲ. ಕೆಲವೊಮ್ಮೆ ಒತ್ತಡ ಆಗುತ್ತಿತ್ತು. ಆದರೆ ನನ್ನ ಸೋದರ ನನಗೆ ತುಂಬಾ ಪ್ರೋತ್ಸಾಹ ನೀಡಿದರು. ನನ್ನ ಕುಟುಂಬ ಸದಸ್ಯರು ಹಾಗು ಮಿತ್ರರು ನನಗೆ ಸದಾ ನನ್ನ ಗುರಿಯತ್ತ ಮುನ್ನುಗ್ಗಲು ಪ್ರೋತ್ಸಾಹ ನೀಡುತ್ತಿದ್ದರು" ಎಂದು ಹೇಳುತ್ತಾರೆ ಡಾ. ರಿಹಾನ. 

 "2016 ರಲ್ಲಿ ನಾನು ವೈದ್ಯಕೀಯ ಇಂಟರ್ನ್ ಶಿಪ್ ಮಾಡುತ್ತಿದ್ದಾಗ ಆಡಳಿತ ರಂಗದಲ್ಲಿ ಜನರ ಸೇವೆಗೆ ಹೆಚ್ಚು ಅವಕಾಶ ಇದೆ ಎಂದು ಗೊತ್ತಾಯಿತು. ಸೇವೆ ಸಲ್ಲಿಸುವ ಅದಮ್ಯ ಉತ್ಸಾಹವೇ ನನ್ನನ್ನು ಇಲ್ಲಿವರೆಗೆ ತಂದು ನಿಲ್ಲಿಸಿದೆ. ವೈದ್ಯಕೀಯದಲ್ಲಿ ನಾನು ಕೇವಲ ಅರೋಗ್ಯ ಸೇವೆ ನೀಡಬಹುದು, ಆದರೆ ಇಲ್ಲಿ ನಾನು ಅವರಿಗೆ ಇನ್ನೂ ಹಲವಾರು ರೀತಿಯಲ್ಲಿ ಸಹಾಯ ಮಾಡಬಹುದು ಎಂಬ ಯೋಚನೆ ಬಂತು" ಎಂದಿದ್ದಾರೆ ಡಾ. ರಿಹಾನ. 

"ನಾನು ಈ ದೇಶಕ್ಕೆ ಸೇವೆ ಸಲ್ಲಿಸಬಯಸುತ್ತೇನೆ. ಕೇವಲ ಕಾಶ್ಮೀರಕ್ಕೆ ನಾನು ಸೀಮಿತವಾಗಿರಲು ಬಯಸುವುದಿಲ್ಲ. ದೇಶದ ಯಾವುದೇ ರಾಜ್ಯಕ್ಕೆ ಕಳಿಸಿದರೂ ನಾನು ಅಲ್ಲಿಗೆ ಹೋಗುತ್ತೇನೆ" ಎಂದು ಡಾ. ರಿಹಾನ ಹೇಳಿದ್ದಾರೆ. 

ಯುಪಿಎಸ್ಸಿಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದ ಜಮ್ಮು ಕಾಶ್ಮೀರದ ಷಾ ಫೈಸಲ್ ಅವರು ಇತ್ತೀಚಿಗೆ ಐಎಎಸ್ ಗೆ ರಾಜೀನಾಮೆ ನೀಡಿದ ಬೆನ್ನಿಗೇ ಅವರದೇ ರಾಜ್ಯದ ಯುವತಿಯೊಬ್ಬಳು ಐಎಎಸ್ ಗೆ ಆಯ್ಕೆಯಾಗಿ ದೇಶದ ಯಾವುದೇ ಭಾಗದಲ್ಲಿ ಸೇವೆ ಸಲ್ಲಿಸಲು ಸಿದ್ಧ ಎಂದು ಹೇಳಿದ್ದಾಳೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News