ಅಮೇಥಿಯಲ್ಲಿ ರಾಹುಲ್ ಗಾಂಧಿ ಮೇಲೆ ಗುರಿಯಿಟ್ಟನೇ ಬಂದೂಕುಧಾರಿ?: ಗೃಹ ಸಚಿವಾಲಯ ಹೇಳಿದ್ದು ಹೀಗೆ..
ಅಮೇಥಿ, ಎ.11: ನಾಮಪತ್ರ ಸಲ್ಲಿಸಲು ಅಮೇಥಿಯಲ್ಲಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೇಲೆ ಬಂದೂಕಿನಿಂದ ಗುರಿಯಿಡಲಾಗಿತ್ತು ಎನ್ನುವ ವರದಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವಾಲಯ, ಅದು ಮೊಬೈಲ್ ಕ್ಯಾಮರಾದಿಂದ ಬಂದಿರುವ ಗ್ರೀನ್ ಲೈಟ್ ಆಗಿರುವ ಸಾಧ್ಯತೆ ಇದೆ. ಆ ಹಸಿರು ಗುರುತು ಕಾಂಗ್ರೆಸ್ ನ ಅಧಿಕೃತ ಫೋಟೋಗ್ರಾಫರ್ ನ ಮೊಬೈಲ್ ನಿಂದಲೇ ಬಂದಿರಬಹುದು ಎಂದು ಹೇಳಿದೆ.
“ಬುಧವಾರ ಅಮೇಥಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಿರುವಾಗ ರಾಹುಲ್ ಗಾಂಧಿ ಹಣೆಯ ಬಳಿ ಹಸಿರು ಬಣ್ಣದ ಲೇಸರ್ ಗುರುತೊಂದು ಏಳು ಬಾರಿ ಕಂಡು ಬಂದಿದೆ. ಈ ಬಗ್ಗೆ ವಿಡಿಯೋಗಳನ್ನು ಪರಿಶೀಲಿಸಿ ನೋಡಿದಾಗ ಇದು ದೂರದಿಂದ ಗುರಿಯಿಟ್ಟು ಗುಂಡು ಹಾರಿಸುವ ಬಂದೂಕುಧಾರಿ ಮೂಡಿಸಿರುವ ಗುರುತುಗಳಾಗಿರುವ ಸಾಧ್ಯತೆ ಇದೆ. ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ ( ಎಸ್ಪಿಜಿ) ನಿಂದ ರಕ್ಷಣೆ ಪಡೆಯುವ ರಾಹುಲ್ ಗಾಂಧಿ ಅವರ ಸುರಕ್ಷತೆಯಲ್ಲಿ ಉತ್ತರ ಪ್ರದೇಶ ಸರಕಾರ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ” ಎಂದು ಕಾಂಗ್ರೆಸ್ ಗುರುವಾರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿತ್ತು. ಈ ಪತ್ರಕ್ಕೆ ಅಹ್ಮದ್ ಪಟೇಲ್, ಜೈರಾಮ್ ರಮೇಶ್ ಹಾಗು ರಣದೀಪ್ ಸಿಂಗ್ ಸುರ್ಜೆವಾಲ ಅವರು ಸಹಿ ಮಾಡಿದ್ದರು.