ಮತಗಟ್ಟೆಯಲ್ಲಿ ‘ನಮೋ ಫುಡ್ಸ್’ ಆಹಾರ ಪ್ಯಾಕೆಟ್ ವಿತರಣೆ: ವರದಿ ಕೋರಿದ ಚು. ಆಯೋಗ
ನೋಯ್ಡ, ಎ. 11: ನೋಯ್ಡಾದ ಮತಗಟ್ಟೆಯೊಂದರಲ್ಲಿ ಬುಧವಾರ ‘ನಮೋ’ ಬ್ರಾಂಡ್‌ನ ಆಹಾರದ ಪ್ಯಾಕೆಟ್‌ಗಳನ್ನು ಪೊಲೀಸರಿಗೆ ವಿತರಿಸಲಾಗಿದೆ. ಚುನಾವಣೆ ದಿನ ಮತಗಟ್ಟೆಯಿಂದ 200 ಮೀಟರ್‌ಗಳ ಅಂತರದಲ್ಲಿ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ನಿಷೇಧಿಸಬೇಕು ಎಂದು ಚುನಾವಣಾ ನೀತಿ ಸಂಹಿತೆ ಪ್ರತಿಪಾದಿಸುವುದರಿಂದ ಈ ಘಟನೆ ವಿವಾದಕ್ಕೆ ಕಾರಣವಾಗಿದೆ.
ಇದು ಮಾದರಿ ನೀತಿ ಸಂಹಿತೆ ಉಲ್ಲಂಘಿಸುತ್ತದೆಯೇ ಎಂಬ ಬಗ್ಗೆ ವರದಿ ನೀಡುವಂತೆ ಉತ್ತರಪ್ರದೇಶದ ಮುಖ್ಯ ಚುನಾವಣಾಧಿಕಾರಿ ಗೌತಮ್ ಬುದ್ಧ ನಗರದ ಜಿಲ್ಲಾ ದಂಡಾಧಿಕಾರಿಗೆ ಸೂಚಿಸಿದ್ದಾರೆ.
ಹಲವು ಪ್ರಚಾರ ಹಾಗೂ ಜಾಹೀರಾತುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ನಮೋ’ ಎಂದು ಉಲ್ಲೇಖಿಸುತ್ತಿರುವುದರಿಂದ ಬಿಜೆಪಿ ಹಾಗೂ ಈ ಆಹಾರ ಪ್ಯಾಕೇಟ್‌ಗೆ ಸಂಬಂಧ ಇದೆ ಎಂಬ ಪ್ರತಿಪಾದನೆಯನ್ನು ಗೌತಮ್ ಬುದ್ಧ ನಗರದ ಎಸ್‌ಎಸ್‌ಪಿ ನಿರಾಕರಿಸಿದ್ದಾರೆ.
ಕೆಲವು ಪೊಲೀಸರು ರಾಜಕೀಯ ಪಕ್ಷದ ಆಹಾರದ ಪ್ಯಾಕೆಟ್‌ಗಳನ್ನು ವಿತರಣೆ ಮಾಡುತ್ತಿದ್ದಾರೆ ಎಂಬ ತಪ್ಪು ಮಾಹಿತಿ ಹರಡಿದೆ. ಇದು ಪೂರ್ಣ ಸುಳ್ಳು. ಸ್ಥಳೀಯ ‘ನಮೋ ಫುಡ್ ಶಾಪ್’ನಿಂದ ಈ ಆಹಾರದ ಪ್ಯಾಕೆಟ್‌ಗಳನ್ನು ತರಿಸಲಾಗಿದೆ. ಇದರೊಂದಿಗೆ ಯಾವುದೇ ರಾಜಕೀಯ ಪಕ್ಷಗಳಿಗೆ ಸಂಬಂಧ ಇಲ್ಲ. ಕೆಲವು ವ್ಯಕ್ತಿಗಳು ತಪ್ಪು ಹಾಗೂ ರಾಜಕೀಯವಾಗಿ ಉತ್ತೇಜಿಸುವ ಹೇಳಿಕೆ ಹರಡುತ್ತಿದ್ದಾರೆ. ನಿರ್ದಿಷ್ಟ ಶಾಪ್‌ನಿಂದ ಆಹಾರ ತರಬೇಕು ಎಂದು ಯಾವುದೇ ಅಧಿಕೃತ ಆದೇಶ ಇಲ್ಲ ಎಂದು ಎಸ್‌ಎಸ್‌ಪಿ ವೈಭವ್ ಕೃಷ್ಣಾ ಹೇಳಿದ್ದಾರೆ.
“ಇದು ದೊಡ್ಡ ವಿಚಾರವಲ್ಲ. ಸಿಬ್ಬಂದಿ ಊಟ ಮಾಡಬೇಡವೇ ?, ಬಹುಶಃ ಶಾಪ್‌ನ ಹೆಸರು ಪ್ಯಾಕೆಟ್‌ನಲ್ಲಿ ಮುದ್ರಿಸಿರಬೇಕು. ಇದರಲ್ಲಿ ಬೇರೆ ಯಾವ ಉದ್ದೇಶವೂ ಇಲ್ಲ” ಎಂದು ಜಿಲ್ಲಾ ದಂಡಾಧಿಕಾರಿ ಹೇಳಿದ್ದಾರೆ.
ನಾವು ಪೂರೈಸಿಲ್ಲ ಎಂದ ‘ನಮೋ ಫುಡ್ಸ್’
ಕುತೂಹಲಕಾರಿ ವಿಚಾರವೆಂದರೆ, ‘‘ನಾವು ಯಾವುದೇ ಆಹಾರದ ಪ್ಯಾಕೆಟ್‌ಗಳನ್ನು ಪೂರೈಸಿಲ್ಲ’’ ಎಂದು ‘ನಮೋ ಫುಡ್ಸ್’ ಹೇಳಿದೆ. ‘‘ನಮ್ಮ ಶಾಪ್ ಬುಧವಾರ ಸಂಜೆಯಿಂದ ಮುಚ್ಚಿದೆ. ಯಾವುದೇ ಆರ್ಡರ್ ಬಗ್ಗೆ ನಮಗೆ ಗೊತ್ತಿಲ್ಲ’’ ಎಂದು ‘ನಮೋ ಫುಡ್ಸ್’ನ ಸಿಬ್ಬಂದಿ ಹೇಳಿದ್ದಾರೆ.