ಮೋದಿಗೆ ಬೆಂಬಲಿಸಿ ಹೇಳಿಕೆ ನೀಡಿಲ್ಲ: ಖ್ಯಾತ ಭರತನಾಟ್ಯ ಕಲಾವಿದೆ ಗೀತಾಚಂದ್ರನ್ ಸ್ಪಷ್ಟನೆ

Update: 2019-04-12 09:24 GMT

ಹೊಸದಿಲ್ಲಿ, ಎ.12: ಕೇಂದ್ರದಲ್ಲಿ ಮೋದಿ ಸರ್ಕಾರ ಮತ್ತೆ ಮುಂದುವರಿಯುವುದನ್ನು ಬೆಂಬಲಿಸುವ ಹೇಳಿಕೆ ನೀಡಿದ 907 ಕಲಾವಿದರ ತಂಡದಲ್ಲಿ ತಾವು ಇಲ್ಲ ಎಂದು ಖ್ಯಾತ ಭರತನಾಟ್ಯ ಕಲಾವಿದೆ ಗೀತಾಚಂದ್ರನ್ ಸ್ಪಷ್ಟಪಡಿಸಿದ್ದಾರೆ.

"ಮೋದಿ ಪರ ಪ್ರಚಾರದಿಂದ ನಾನು ಅಂತರ ಕಾಯ್ದುಕೊಂಡಿದ್ದೇನೆ. ನಾನೆಂದೂ ಇಂಥ ಪ್ರಚಾರಕ್ಕೆ ಒಪ್ಪಿಗೆ ನೀಡಿರಲಿಲ್ಲ" ಎಂದು ಹೇಳಿದ್ದಾರೆ.

ನಾಸಿರುದ್ದೀನ್ ಶಾ, ರತ್ನ ಪಾಠಕ್ ಶಾ, ಕೊಂಕಣ್ ಸೇನ್ ಶರ್ಮಾ, ಅನುರಾಗ್ ಕಶ್ಯಪ್, ವಿನಯ್ ಪಾಟಕ್, ಅಮೋಲ್ ಪಾಲೇಕರ್ ಸೇರಿದಂತೆ 600ಕ್ಕೂ ಹೆಚ್ಚು ಮಂದಿ ರಂಗ ಕಲಾವಿದರು, ದ್ವೇಷಸಾಧಕರನ್ನು ಅಧಿಕಾರದಿಂದ ದೂರವಿಡಿ ಎಂಬ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಇದಕ್ಕೆ ಪ್ರತಿಯಾಗಿ ನೇಷನ್ ಫಸ್ಟ್ ಕಲೆಕ್ಟಿವ್ ಎಂಬ ಅಭಿಯಾನ ರೂಪುಗೊಂಡಿತ್ತು.

ದ್ವೇಷಸಾಧಕರ ವಿರುದ್ಧದ ಅಭಿಯಾನಕ್ಕೆ ಆನಂದ್ ಪಟವರ್ಧನ್, ಸನಾಲ್ ಕುಮಾರ್ ಶಶಿಧರನ್, ವೆಟ್ರಿ ಮಾರನ್ ಮತ್ತು ಪಾ ರಂಜಿತ್ ಸೇರಿದಂತೆ 100ಕ್ಕೂ ಹೆಚ್ಚು ಚಿತ್ರ ನಿರ್ಮಾಪಕರು, ಅರುಂಧತಿ ರಾಯ್, ಗಿರೀಶ್ ಕಾರ್ನಾಡ್ ಮತ್ತು ಅಮಿತವ್ ಘೋಷ್ ಸೇರಿದಂತೆ 200ಕ್ಕೂ ಹೆಚ್ಚು ಸಾಹಿತಿಗಳು ಧ್ವನಿಗೂಡಿಸಿದ್ದರು. ಕಲೆಕ್ಟಿವ್ ಆರ್ಟಿಸ್ಟ್ ಯುನೈಟ್ ಇಂಡಿಯಾ ಹೆಸರಿನಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ವಿರುದ್ಧ ಮತ ಚಲಾಯಿಸುವಂತೆ ಕೋರಿದ್ದರು.

ಇದಕ್ಕೆ ವಿರುದ್ಧವಾಗಿ ಹುಟ್ಟಿಕೊಂಡ ಅಭಿಯಾನದಲ್ಲಿ 907 ಕಲಾವಿದರು, ಯಾವುದೇ ಒತ್ತಡ ಅಥವಾ ಪೂರ್ವಾಗ್ರಹ ಇಲ್ಲದೇ, ಹೊಸ ಸರ್ಕಾರವನ್ನು ಚುನಾಯಿಸಲು ಮತ ಚಲಾಯಿಸಿ ಎಂದು ಜನತೆಗೆ ಮನವಿ ಮಾಡಿಕೊಂಡಿದ್ದಾರೆ. "ಕಳೆದ ಐದು ವರ್ಷಗಳಲ್ಲಿ ಭ್ರಷ್ಟಾಚಾರ ಮುಕ್ತ ಮತ್ತು ಅಭಿವೃದ್ಧಿ ನಿರ್ದೇಶಿತ ಆಡಳಿತವನ್ನು ದೇಶ ನೋಡಿದೆ. ಜಾಗತಿಕವಾಗಿಯೂ ಈ ಅವಧಿಯಲ್ಲಿ ಭಾರತಕ್ಕೆ ಹೆಚ್ಚಿನ ಗೌರವ ಸಿಕ್ಕಿದೆ. ಮೋದಿ ಸರ್ಕಾರವನ್ನು ಮುಂದುವರಿಸುವುದು ಅನಿವಾರ್ಯ" ಎಂದು ಪ್ರತಿಪಾದಿಸಿದ್ದರು

ಈ 907 ಕಲಾವಿದರ ಪಟ್ಟಿಯಲ್ಲಿ ಗೀತಾ ಚಂದ್ರನ್ ಹೆಸರೂ ಇತ್ತು. ಆದರೆ ತನ್ನ ಹೆಸರನ್ನು ಬಳಸಿಕೊಳ್ಳಲು ಯಾವುದೇ ಒಪ್ಪಿಗೆ ನೀಡಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. “ಎಪ್ರಿಲ್ 8ರಂದು ಭಾರತದ ಸಾಂಸ್ಕೃತಿಕ ಸಂಬಂಧಗಳ ಮಂಡಳಿ ಅಧ್ಯಕ್ಷರು, ಹಿಂದೂ ಹೊಸ ವರ್ಷ ಆಚರಣೆಗೆ ಹಿರಿಯ ಕಲಾವಿದರಿಗೆ ಆಹ್ವಾನ ಕಳುಹಿಸಿದ್ದರು. ನಾವು ಹಲವು ಮಂದಿ ಹೋಗಿ ಅವರಿಗೆ ಶುಭ ಹಾರೈಸಿದ್ದೆವು. ಎಲ್ಲ ಮತದಾರರೂ ಮತ ಚಲಾಯಿಸಬೇಕು ಎಂದು ಕಲಾವಿದರು ಹೇಳಿಕೆ ನೀಡಬೇಕೆಂಬ ಬಗ್ಗೆ ಚರ್ಚೆ ನಡೆದಿತ್ತು. ಇದು ಪವಿತ್ರ ಕರ್ತವ್ಯ ಎಂಬ ಕಾರಣಕ್ಕೆ ಒಪ್ಪಿದೆವು" ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಬಳಿಕ ಮೋದಿ ಸರ್ಕಾರಕ್ಕೆ ಒಪ್ಪಿಗೆ ಮುದ್ರೆ ಹಾಕುವ ಬಗ್ಗೆ ಕೆಲವರು ಉಲ್ಲೇಖಿಸಿದರು. ಆದರೆ ಪ್ರಜಾಸತ್ತಾತ್ಮಕ ಮೌಲ್ಯವಾದ ರಹಸ್ಯ ಮತದಾನದಲ್ಲಿ ನಮಗೆ ನಂಬಿಕೆ ಇದೆ ಎಂದು ಅಲ್ಲಿದ್ದ ಹಲವರು ಸ್ಪಷ್ಟಪಡಿಸಿದೆವು. ನಾವ್ಯಾರೂ ರಾಜಕೀಯ ಪಕ್ಷಗಳ ಸದಸ್ಯರಲ್ಲ; ಆದ್ದರಿಂದ ಹಾಗೆ ಮಾಡಿದರೆ ಅದು ರಹಸ್ಯ ಮತದಾನದ ತತ್ವವನ್ನು ಉಲ್ಲಂಘಿಸಿದಂತಾಗುತ್ತದೆ. ಯಾರೂ ಅಧಿಕೃತವಾಗಿ ಇಂಥ ಹೇಳಿಕೆಗೆ ಸಹಿ ಮಾಡಿಲ್ಲ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News