ಬೆಂಗಳೂರು ಉತ್ತರಕ್ಕೆ ನಾನೇ ಮತ್ತೊಮ್ಮೆ ಉತ್ತರಾಧಿಕಾರಿ: ಡಿ.ವಿ ಸದಾನಂದಗೌಡ

Update: 2019-04-12 14:45 GMT

ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿರುವ ಕೇಂದ್ರ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ, ‘ವಾರ್ತಾಭಾರತಿ’ಗೆ ನೀಡಿದ ಸಂದರ್ಶನದಲ್ಲಿ ಜನತೆಯ ಆಶೀರ್ವಾದದೊಂದಿಗೆ ಬೆಂಗಳೂರು ಉತ್ತರಕ್ಕೆ ನಾನೇ ಮತ್ತೊಮ್ಮೆ ಉತ್ತರಾಧಿಕಾರಿಯಾಗಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರ: ಚುನಾವಣಾ ಪ್ರಚಾರ ಹೇಗೆ ನಡೆಯುತ್ತಿದೆ, ಜನರ ಸ್ಪಂದನೆ ಯಾವ ರೀತಿ ಇದೆ?

ಡಿವಿಎಸ್: 2014ರ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಇನ್ನೂ ಉತ್ತಮವಾದ ಸ್ಪಂದನೆ ಸಿಗುತ್ತಿದೆ. ಕಳೆದ ಚುನಾವಣೆಯಲ್ಲಿ ನಾವು ಜನತೆಗೆ ಭರವಸೆಗಳನ್ನು ನೀಡಿ ಗೆಲುವು ಸಾಧಿಸಿದೆವು. ಈ ಬಾರಿ ನಮ್ಮ ಕಾರ್ಯನಿರ್ವಹಣೆಯ ಆಧಾರದಲ್ಲಿ ಮತ ಕೇಳುತ್ತಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಭರವಸೆಗಳು, ಪ್ರಣಾಳಿಕೆಗಳ ಆಧಾರದ ಮೇಲೆ ನಡೆಯುತ್ತವೆ.

ಪ್ರ: ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕಳೆದ ಬಾರಿ ತ್ರಿಕೋನ ಸ್ಪರ್ಧೆ ಇತ್ತು. ಈ ಬಾರಿ ನೇರ ಸ್ಪರ್ಧೆಯಿದೆ. ಹೇಗೆ ಚುನಾವಣೆಯನ್ನು ಎದುರಿಸುತ್ತೀರಾ?

ಡಿವಿಎಸ್: ಹಿಂದೆಲ್ಲ ತ್ರಿಕೋನ ಸ್ಪರ್ಧೆಗಳು ಇಡೀ ಜಗತ್ತಿನಲ್ಲೆ ನಡೆಯುತ್ತಿದ್ದವು. ಈಗ ನೇರ ಹೋರಾಟವಿದೆ ಪಾಕಿಸ್ತಾನ ಹಾಗೂ ಭಾರತದ ನಡುವೆ. ಅದೇ ರೀತಿ ನಮ್ಮದು ಕೂಡ. ಬಿಜೆಪಿ-ಇಂಡಿಯಾ, ಪಾಕಿಸ್ತಾನದ ಮನಸ್ಥಿತಿ ಹೊಂದಿರುವ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇದೆ.

ಪ್ರ: ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಶಕ್ತಿ ಕುಂದಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸುತ್ತಿದ್ದಾರಲ್ಲ?

ಡಿವಿಎಸ್: ಕಾಂಗ್ರೆಸ್ ಪಕ್ಷದ ಯಾರೋ ನಾಲ್ಕು ಜನ ಮುಖಂಡರು ಮತದಾರರಲ್ಲ. ಈ ದೇಶದಲ್ಲಿ ನಾವು ಬದುಕಬೇಕು, ಈ ದೇಶದಲ್ಲಿ ರಕ್ಷಣೆ ಇರಬೇಕು. ದೇಶ ಉಳಿದರೆ ನಾವು ಉಳಿಯುತ್ತೇವೆ ಎಂದು ಹೇಳುವವರು ಬಹಳ ಮಂದಿಯಿದ್ದಾರೆ. ಮತದಾರರು ಇದನ್ನು ಅರ್ಥ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ನವರು ನಾವು ಉಳಿದರೆ ದೇಶ ಉಳಿಯುತ್ತದೆ ಎನ್ನುತ್ತಾರೆ. ಆದರೆ, ನಾವು ಹೇಳುವುದು ದೇಶ ಉಳಿದರೆ ನಾವು ಉಳಿಯುತ್ತೇವೆ ಎಂದು. ಇದೇ ನಮಗೂ ಹಾಗೂ ಅವರಿಗೂ ಇರುವ ವ್ಯತ್ಯಾಸ.

ಪ್ರ: ಮೋದಿ ಮುಖವಾಡ ಇಟ್ಟುಕೊಂಡು ಪ್ರಚಾರ ಮಾಡುತ್ತಿರುವ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆಯಲ್ಲ?

ಡಿವಿಎಸ್: ಪ್ರಧಾನಿ ನರೇಂದ್ರಮೋದಿ ಇಡೀ ವಿಶ್ವವೇ ಮೆಚ್ಚುವ ನಾಯಕರಾಗಿ ಹೊರಹೊಮ್ಮಿದ್ದಾರೆ. ದೇಶವು ಇಂದು ಬಲಿಷ್ಠ, ಸಮರ್ಥ ನಾಯಕತ್ವವನ್ನು ಹೊಂದಿದೆ. ಅವರ ಸಾಧನೆಗಳು, ಅಭಿವೃದ್ಧಿ ಕಾರ್ಯಗಳನ್ನು ಆಧರಿಸಿ, ಅವರ ಮುಖ ಮುಂದಿಟ್ಟುಕೊಂಡು ನಾವು ಮತ ಯಾಚನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ.

10 ವರ್ಷಗಳ ಕಾಲ ಮನಮೋಹನ್ ಸಿಂಗ್ ದೇಶದ ಪ್ರಧಾನಿಯಾಗಿದ್ದರು. ಆದರೆ, ಕಾಂಗ್ರೆಸ್ ಪಕ್ಷದ ಒಬ್ಬ ಮನುಷ್ಯನು ಮನಮೋಹನ್ ಸಿಂಗ್ ಹೆಸರು ಹೇಳುವುದಿಲ್ಲ. ಬಹುಷಃ ಈ ದೇಶದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು ಎಂಬುದನ್ನು ಕಾಂಗ್ರೆಸ್‌ನವರೇ ಮರೆತು ಬಿಟ್ಟಿದ್ದಾರೆ.

ಪ್ರ: ಬೆಂಗಳೂರಿನ ಅಭಿವೃದ್ಧಿಗೆ ಸದಾನಂದಗೌಡರ ಕೊಡುಗೆ ಶೂನ್ಯ ಎಂದು ಕಾಂಗ್ರೆಸ್‌ನವರು ಆರೋಪಿಸುತ್ತಿದ್ದಾರಲ್ಲ?

ಡಿವಿಎಸ್: ರಾಜ್ಯಕ್ಕೆ ಕಾಂಗ್ರೆಸ್ ಸರಕಾರವು 2009-14ರವರೆಗೆ 74.5 ಸಾವಿರ ಕೋಟಿ ರೂ. ನೀಡಿದ್ದರೆ, ನಮ್ಮ ಸರಕಾರವು 2014-19ರವರೆಗೆ 2.42 ಲಕ್ಷ ಕೋಟಿ ರೂ.ಗಳನ್ನು ನೀಡಿದೆ. ಇಲ್ಲಿ ಕಾಂಗ್ರೆಸ್‌ನವರಿಗೆ ತಿಂದು ತೇಗಲಿಕ್ಕೆ ಪುರುಸೊತ್ತಿಲ್ಲ. ಇನ್ನು ಜನರ ಕೆಲಸ ಎಲ್ಲಿ ಮಾಡುತ್ತಾರೆ.

ನಾನು ಕೇಂದ್ರ ರೈಲ್ವೆ ಸಚಿವನಾಗಿದ್ದಾಗ ಬೆಂಗಳೂರಿಗೆ ಉಪನಗರ ರೈಲು ಯೋಜನೆ ಜಾರಿಗೆ ತಂದೆ. ಅದನ್ನು ಎಲ್ಲಿಯೂ ನಾನು ಮಾಡಿದ್ದು ಎಂದು ಹೇಳಿಕೊಳ್ಳಲಿಲ್ಲ. ರೈಲ್ವೆ ಇಲಾಖೆಯಲ್ಲಿ ನೂತನ ತಂತ್ರಜ್ಞಾನ ಜಾರಿ ಮಾಡಲಾಯಿತು. ಇದರಿಂದ ಯಾವ ರೈಲು ಎಲ್ಲಿದೆ, ಎಷ್ಟು ಹೊತ್ತಿಗೆ ಬರುತ್ತದೆ ಎಂಬುದನ್ನು ಕಂಡು ಹಿಡಿಯಲು ಸಾಧ್ಯವಾಯಿತು. ಮೆಟ್ರೋ ಮೊದಲನೇ ಹಂತ ಪೂರ್ಣಗೊಳ್ಳುವ ಮೊದಲೇ, ಎರಡನೆ ಹಂತದ ಯೋಜನೆಗೆ ಬಜೆಟ್‌ನಲ್ಲಿ 17 ಸಾವಿರ ಕೋಟಿ ರೂ.ಗಳನ್ನು ಘೋಷಿಸಿದ್ದೇವೆ. ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂಕೋರ್ಟ್‌ಗೆ ಕೇಂದ್ರ ಸರಕಾರ ಪ್ರಮಾಣಪತ್ರ ಸಲ್ಲಿಸುವ ವೇಳೆ ಬೆಂಗಳೂರಿಗೆ ಕುಡಿಯುವ ನೀರು ಬೇಕು ಎಂಬ ಅಂಶ ಸೇರಿಸಿದ್ದರಿಂದ, ಇಂದು ಬೆಂಗಳೂರಿಗೆ 4 ಟಿಎಂಸಿ ನೀರು ಸಿಗುವಂತೆ ಆಗಿದೆ.

ಬೆಂಗಳೂರಿನಲ್ಲಿ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅಗತ್ಯವಿದ್ದ ರಕ್ಷಣಾ ಇಲಾಖೆಗೆ ಸಂಬಂಧಿಸಿದ 28 ಜಾಗಗಳನ್ನು ಗುರುತಿಸಿ, ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್‌ರನ್ನು ಇಲ್ಲಿಗೆ ಕರೆಸಿ ಸಮಸ್ಯೆಯನ್ನು ಬಗೆಹರಿಸಿದೆ. ಇತ್ತೀಚೆಗಷ್ಟೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಆ ಭೂಮಿಯನ್ನು ಸರಕಾರಕ್ಕೆ ಹಸ್ತಾಂತರಿಸಿದ್ದಾರೆ.

ಪ್ರ: ನಿಮ್ಮ ಪ್ರತಿಸ್ಪರ್ಧಿ ಕೃಷ್ಣಭೈರೇಗೌಡ ನಿಮ್ಮ ವಿರುದ್ಧ ಮಾಡುತ್ತಿರುವ ಆರೋಪಗಳಿಗೆ ನಿಮ್ಮ ಪ್ರತಿಕ್ರಿಯೆ ಏನು?

ಡಿವಿಎಸ್: ಅಭಿವೃದ್ಧಿ ವಿಚಾರದಲ್ಲಿ ನಾನು ಯಾರ ಜೊತೆಯಲ್ಲಿಯೂ ತಿಕ್ಕಾಟ ಮಾಡಿಲ್ಲ. ಕೃಷ್ಣಭೈರೇಗೌಡ ಪ್ರಧಾನಿ ಬಳಿ ಅನುದಾನ ಕೋರಲು ನನ್ನ ಹೊಸದಿಲ್ಲಿಯ ಮನೆಗೆ ಬಂದಿದ್ದಾಗ, ನಾನು ಅವರನ್ನು ಕಡೆಗಣಿಸಿಲ್ಲ. ಊಟ ಹಾಕಿಸಿ ಒಕ್ಕೂಟದ ಜೊತೆಗೆ ಹೋಗಿ, ಅನುದಾನವನ್ನು ತಂದಿದ್ದೇನೆ. ಇದರ ಮಾಹಿತಿ ರಾಜ್ಯ ಸರಕಾರದ ವೆಬ್‌ಸೈಟ್‌ನಲ್ಲಿಯೂ ಲಭ್ಯವಿದೆ.

ಪ್ರ: ಕೇಂದ್ರ ಸಚಿವರಾಗಿ ನಿಮ್ಮ ಕಾರ್ಯವೈಖರಿ ಹೇಗಿತ್ತು?

ಡಿವಿಎಸ್: ಪ್ರಧಾನಿ ನರೇಂದ್ರಮೋದಿ ನನ್ನ ಮೇಲೆ ವಿಶ್ವಾಸವಿಟ್ಟು ಕೊಟ್ಟ ಎಲ್ಲ ಜವಾಬ್ದಾರಿಗಳನ್ನು ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದೇನೆ. ರೈಲ್ವೆ ಸಚಿವ ಹಾಗೂ ಸಾಂಖ್ಯಿಕ, ಯೋಜನಾ ಅನುಷ್ಠಾನ ಸಚಿವ, ಅನಂತ್ ಕುಮಾರ್ ನಿಧನದಿಂದ ತೆರವಾದ ರಸಗೊಬ್ಬರ ಖಾತೆಯನ್ನು ನನಗೆ ಕೊಟ್ಟಿದ್ದರು. ಯಾರೊಬ್ಬರೂ ತಲೆ ತಗ್ಗಿಸುವಂತೆ ಕೆಲಸ ಮಾಡಿಲ್ಲ. ಜನರ ಕೆಲಸ ಮಾಡುವುದು ನಮ್ಮ ಜವಾಬ್ದಾರಿ, ಅದನ್ನು ಗುರುತಿಸುವುದು ಜನ. ಜಾಲಹಳ್ಳಿಯಲ್ಲಿ ಹೊಸ ಪಾಸ್‌ಪೋರ್ಟ್ ಕಚೇರಿ ಆರಂಭಿಸಿದೆ. ಯಶವಂತಪುರದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಆರಂಭಿಸಲಾಗಿದೆ. ಜನಸಾಮಾನ್ಯರ ಕಲ್ಯಾಣ, ರಾಜ್ಯದ ಹಿತಾಸಕ್ತಿಯಲ್ಲಿ ಯಾವುದೇ ರಾಜಕಾರಣ ಮಾಡುವುದಿಲ್ಲ.

ಪ್ರ: ಸಂಸದರ ಆದರ್ಶ ಗ್ರಾಮ ಯೋಜನೆಯ ಪ್ರಗತಿ ಹೇಗಿದೆ?

ಡಿವಿಎಸ್: ಬಿ-ಪ್ಯಾಕ್ ಸಂಸ್ಥೆ ಬಿಡುಗಡೆ ಮಾಡಿರುವ ಮಾಹಿತಿಯನ್ನೇ ನೋಡಿ, ರಾಜ್ಯದ 28 ಸಂಸದರ ಪೈಕಿ, ಅತೀ ಹೆಚ್ಚು ಅನುದಾನವನ್ನು ಒಳ್ಳೆಯ ಕೆಲಸಗಳಿಗೆ ಬಳಕೆ ಮಾಡಿರುವುದು ನಾನು. ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ನಾನು ಆಯ್ಕೆ ಮಾಡಿಕೊಂಡ ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲೂಕಿನ ಜಾಲ ಹೋಬಳಿಯ ಮೀನುಕುಂಟೆ ಗ್ರಾಮವು ಇಡೀ ದೇಶದಲ್ಲೆ ಮೊದಲ ಸ್ಥಾನದಲ್ಲಿದೆ.

Writer - -ಅಮ್ಜದ್‌ ಖಾನ್ ಎಂ.

contributor

Editor - -ಅಮ್ಜದ್‌ ಖಾನ್ ಎಂ.

contributor

Similar News