ರಫೇಲ್ ಕುರಿತು ಕಡಿಮೆ ಮಾತನಾಡಲು ಬಿಜೆಪಿಗೆ ಶಿವಸೇನೆ ಸಲಹೆ

Update: 2019-04-12 15:54 GMT

ಮುಂಬೈ,ಎ.12: ರಫೇಲ್ ಒಪ್ಪಂದದ ಕುರಿತು ಕಡಿಮೆ ಮಾತನಾಡುವಂತೆ ತನ್ನ ಮಿತ್ರಪಕ್ಷ ಬಿಜೆಪಿಗೆ ಶುಕ್ರವಾರ ಸಲಹೆ ನೀಡಿರುವ ಶಿವಸೇನೆಯು,ಅನಗತ್ಯ ಹೇಳಿಕೆಗಳು ಪಕ್ಷಕ್ಕೆ ತೊಂದರೆಗಳನ್ನು ಹೆಚ್ಚಿಸಬಹುದು ಎಂದು ಎಚ್ಚರಿಕೆ ನೀಡಿದೆ.

ವಿದ್ಯುನ್ಮಾನ ವಾಹಿನಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಚಾರ ರ್ಯಾಲಿಗಳಿಗೆ ನೀಡಲಾಗುತ್ತಿರುವ ಕವರೇಜ್ ಬಗ್ಗೆ ಬಿಜೆಪಿಯು ತೃಪ್ತಿಪಟ್ಟುಕೊಂಡಿದ್ದರೆ ನಮೋ ಟಿವಿಯ ಮೇಲಿನ ನಿಷೇಧವನ್ನು ನಿವಾರಿಸಬಹುದಿತ್ತು ಎಂದೂ ಶಿವಸೇನೆಯು ಹೇಳಿದೆ.

ಕನಿಷ್ಠ ರಫೇಲ್ ವಿಷಯದಲ್ಲಾದರೂ ಧಿಮಾಕನ್ನು ತೊರೆಯುವ ಮತ್ತು ತಾಳ್ಮೆಯಿಂದ ಮಾತನಾಡುವ ಅಗತ್ಯವಿದೆ. ರಕ್ಷಣಾ ಸಚಿವರಿಂದ ಹಿಡಿದು ಇತರ ನಾಯಕರವರೆಗೆ ಬಿಜೆಪಿಯಲ್ಲಿನ ಜನರು ತಮಗೆ ಬೇಕಾದಂತೆ ಮಾತನಾಡುತ್ತಿದ್ದಾರೆ ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿಯ ಸಂಪಾದಕೀಯದಲ್ಲಿ ಕುಟುಕಿರುವ ಶಿವಸೇನೆಯು,ಇದು ಆ ಪಕ್ಷಕ್ಕೆ ತೊಂದರೆಗಳನ್ನು ಹೆಚ್ಚಿಸಬಹುದು. ಆದ್ದರಿಂದ ಆ ಬಗ್ಗೆ ಕಡಿಮೆ ಮಾತನಾಡಿದಷ್ಟೂ ಒಳ್ಳೆಯದು ಎಂದು ನಾವು ಸಲಹೆ ನೀಡುತ್ತಿದ್ದೇವೆ ಎಂದು ಹೇಳಿದೆ.

ಮೋದಿ ಬಯೋಪಿಕ್ ಜೊತೆಗೆ ನಮೋ ಟಿವಿಯ ಮೇಲೂ ಚುನಾವಣಾ ಆಯೋಗವು ನಿಷೇಧ ಹೇರಿರುವದನ್ನು ಬೆಟ್ಟು ಮಾಡಿರುವ ಅದು,ಪ್ರಧಾನಿಯವರ ಪ್ರಚಾರಕ್ಕೆ ಬಿಜೆಪಿಗೆ ಪ್ರತ್ಯೇಕ ಟಿವಿ ವಾಹಿನಿಯು ಅಗತ್ಯವಿದ್ದರೆ ಅದು ಆ ಪಕ್ಷದ ಆಂತರಿಕ ವಿಷಯ. ಒಂದೆರಡು ವಾಹಿನಿಗಳನ್ನು ಹೊರತುಪಡಿಸಿದರೆ ಪ್ರತಿ ವಾಹಿನಿಯೂ ‘ನಮೋ ಟಿವಿ’ ಆಗಿಬಿಟ್ಟಿದೆ. ಮೋದಿಯವರ ಭಾಷಣಗಳಿಗೆ ಆದ್ಯತೆಯನ್ನು ನೀಡಲಾಗುತ್ತಿದೆ ಮತ್ತು ನಮೋ ಟಿವಿ ಮೇಲಿನ ನಿಷೇಧವನ್ನು ನಿವಾರಿಸಬಹುದಿತ್ತು ಎಂದಿದೆ.

ಬಿಜೆಪಿಯು ವಿದ್ಯುನ್ಮಾನ ವಾಹಿನಿಗಳ ಮೇಲೆ ಪ್ರಭಾವವನ್ನು ಹೊಂದಿದೆ ಮತ್ತು ಅದರ ಲಾಭಗಳನ್ನು ಪಡೆದುಕೊಳ್ಳುತ್ತಿದೆ ಎಂದೂ ಶಿವಸೇನೆಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News