ಪ.ಬಂಗಾಳದಲ್ಲಿ ಏನೋ ಗಂಭೀರವಾಗಿರುವುದು ನಡೆಯುತ್ತಿದೆ: ಸರ್ವೋಚ್ಚ ನ್ಯಾಯಾಲಯ

Update: 2019-04-12 16:24 GMT

  ಹೊಸದಿಲ್ಲಿ,ಎ.12: ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕನ ಪತ್ನಿಯ ಲಗೇಜ್‌ನ್ನು ತಪಾಸಣೆ ಮಾಡಿದ್ದಕ್ಕಾಗಿ ಕಸ್ಟಮ್ಸ್ ಅಧಿಕಾರಿಗಳಿಗೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ನಡೆಸಲು ಶುಕ್ರವಾರ ಒಪ್ಪಿಕೊಂಡ ಸರ್ವೋಚ್ಚ ನ್ಯಾಯಾಲಯವು,ಪಶ್ಚಿಮ ಬಂಗಾಳದಲ್ಲಿ ಏನೋ ಗಂಭೀರವಾದದ್ದು ನಡೆಯುತ್ತಿರುವಂತಿದೆ ಎಂದು ಹೇಳಿತು. ನಾಲ್ಕು ವಾರಗಳಲ್ಲಿ ಅರ್ಜಿಗೆ ಉತ್ತರಿಸುವಂತೆ ಅದು ಪ.ಬಂಗಾಳ ಸರಕಾರಕ್ಕೆ ಸೂಚಿಸಿತು.

ಏನೋ ಅತ್ಯಂತ ಗಂಭೀರವಾಗಿರುವುದರ ಕಡೆಗೆ ಯಾರೋ ನಮ್ಮ ಗಮನವನ್ನು ಸೆಳೆದಿದ್ದಾರೆ. ಯಾರ ಹೇಳಿಕೆ ಸತ್ಯ ಎನ್ನುವುದು ನಮಗಿನ್ನೂ ಗೊತ್ತಿಲ್ಲ,ಆದರೆ ವಿಷಯದ ಬೇರನ್ನು ತಲುಪಲು ನಾವು ಬಯಸಿದ್ದೇವೆ ಎಂದು ಮು.ನ್ಯಾ.ರಂಜನ ಗೊಗೊಯಿ ಮತ್ತು ನ್ಯಾ.ಸಂಜೀವ ಖನ್ನಾ ಅವರ ಪೀಠವು ಹೇಳಿತು.

  ಅರ್ಜಿಯು ಮಾ.15-16ರಂದು ನಡೆದಿದ್ದ ಘಟನೆಗೆ ಸಂಬಂಧಿಸಿದೆ. ಟಿಎಂಸಿ ಸಂಸದ ಹಾಗೂ ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸೋದರಳಿಯ ಅಭಿಷೇಕ ಬ್ಯಾನರ್ಜಿ ಅವರ ಪತ್ನಿ ರುಜಿರಾ ನರೂಲಾ ಬ್ಯಾನರ್ಜಿ ಸೇರಿದಂತೆ ಇಬ್ಬರು ಮಹಿಳೆಯರು ನಸುಕಿನ 1:40ರ ಸುಮಾರಿಗೆ ವಿದೇಶದಿಂದ ಆಗಮಿಸಿದ್ದರು. ಅವರ ಲಗೇಜ್ ತಪಾಸಣೆಗೆ ಕಸ್ಟಮ್ಸ್ ಅಧಿಕಾರಿಗಳು ಮುಂದಾದಾಗ ಅವರು ಪ್ರತಿರೋಧಿಸಿದ್ದರು. ಪಾಸ್‌ಪೋರ್ಟ್‌ಗಳನ್ನು ತೋರಿಸುವಂತೆ ಕೇಳಿದಾಗ ಮಹಿಳೆಯರಿಬ್ಬರೂ ಕಸ್ಟಮ್ಸ್ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಮಹಿಳೆೆಯರು ನಿಲ್ದಾಣದಿಂದ ತೆರಳಿದ ಬೆನ್ನಿಗೇ ಭಾರೀ ಸಂಖ್ಯೆಯಲ್ಲಿ ಬಂದಿದ್ದ ಪೊಲೀಸರು ಮಹಿಳೆಯರು ಕಿರುಕುಳದ ದೂರನ್ನು ನೀಡಿದ್ದಾರೆ ಎಂಬ ಕಾರಣವೊಡ್ಡಿ ಅಧಿಕಾರಿಗಳನ್ನು ಬಂಧಿಸಲು ಪ್ರಯತ್ನಿಸಿದ್ದರು. ಕಸ್ಟಮ್ಸ್ ಅಧಿಕಾರಿಗಳು ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಬಗ್ಗೆ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಲ್ಲಿಸಲು ಪ್ರಯತ್ನಿದ್ದರೂ ಯಾವುದೇ ಪ್ರಕರಣವನ್ನು ದಾಖಲು ಮಾಡಿಕೊಂಡಿರಲಿಲ್ಲ ಎಂದು ಕಸ್ಟಮ್ಸ್ ಇಲಾಖೆಯ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ಪೀಠಕ್ಕೆ ತಿಳಿಸಿದರು.

ಪ.ಬಂಗಾಳ ಸರಕಾರಕ್ಕೆ ನೋಟಿಸ್ ಜಾರಿಯನ್ನು ಆಕ್ಷೇಪಿಸಿದ ಹಿರಿಯ ವಕೀಲ ಅಭಿಷೇಕ ಎಂ.ಸಿಂಘ್ವಿ ಅವರು,ಅರ್ಜಿದಾರ ರಾಜಕುಮಾರ ಬರ್ಥ್ವಾಲ್ ಅವರು ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯ ಸದಸ್ಯರಾಗಿದ್ದಾರೆ ಮತ್ತು ಅವರಿಗೆ ಅರ್ಜಿ ಸಲ್ಲಿಸಲು ಅಧಿಕಾರ ಸ್ಥಾನವಿಲ್ಲ,ಹೀಗಾಗಿ ಅರ್ಜಿಯು ಸ್ವೀಕಾರಾರ್ಹವಲ್ಲ ಎಂದು ಪ್ರತಿಪಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು,ಪ.ಬಂಗಾಲದಲ್ಲಿ ನಡೆಯುತ್ತಿರುವುದನ್ನು ನಾವು ಕಡೆಗಣಿಸುವಂತಿಲ್ಲ. ಅಗತ್ಯವಾದರೆ ನಾವು ಸ್ವತಃ ಘಟನೆಗಳನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡು ವಿಷಯದ ಆಳವನ್ನು ತಲುಪುತ್ತೇವೆ ಎಂದು ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News