ಅಭಿವೃದ್ಧಿಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಿಥುನ್ ರೈ ಸ್ಪರ್ಧೆ

Update: 2019-04-14 14:32 GMT

ಪುತ್ತೂರು: ಕಳೆದ 5 ವರ್ಷಗಳ ಮೋದಿ ಸರ್ಕಾರದ ಆಡಳಿತ ವೈಖರಿಯಿಂದ ದೇಶದ ಜನತೆ ತತ್ತರಿಸಿ ಹೋಗಿದ್ದು, ಬಿಜೆಪಿಯಿಂದ ದೇಶಕ್ಕೆ ಮುಕ್ತಿ ನೀಡುವುದರೊಂದಿಗೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ  ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಿಥುನ್ ರೈ ಸ್ಪರ್ಧಿಸುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ಜೊತೆ ಕಾರ್ಯದರ್ಶಿ ಇಬ್ರಾಹಿಂ ಗೋಳಿಕಟ್ಟೆ ತಿಳಿಸಿದ್ದಾರೆ.

ಅವರು ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಎರಡು ಬಾರಿ ಜಿಲ್ಲೆಯಲ್ಲಿ ಗೆಲುವು ಪಡೆದಿರುವ ನಳಿನ್ ಕುಮಾರ್ ಕಟೀಲ್ ಅವರ ಸಾಧನೆ ಶೂನ್ಯ ವಾಗಿದೆ. ಬೂಟಾಟಿಕೆಯ ಮಾತುಗಳು ಹಾಗೂ ಜಿಲ್ಲೆಯನ್ನು ಹೊತ್ತಿ ಉರಿಸುವ ಹೇಳಿಕೆಗಳು, ಗಲಭೆ ಗದ್ದಲಗಳಿಗೆ ಉತ್ತೇಜಿಸುವ ದಿನಚರಿಯ ಸಂಸದ ರಾಗಿದ್ದಾರೆ ಹೊರತು ಜಿಲ್ಲೆಯ ಅಗತ್ಯತೆ, ಅಭಿವೃದ್ಧಿಯ ಬಗ್ಗೆ ಅವರು ಎಂದೂ ಕೆಲಸ ಮಾಡಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಏರುವ ಮುನ್ನ ನೀಡಿರುವ ಯಾವುದೇ ಭರವಸೆಯನ್ನು ಈಡೇರಿಸಿಲ್ಲ. ವಿದೇಶದಿಂದ ಕಪ್ಪು ಹಣ ತರುವುದು ಸಾಧ್ಯವಾಗಿಲ್ಲ. ಇಲ್ಲಿನ ಹಣವೇ ವಿದೇಶಕ್ಕೆ ಹಾರಿ ಹೋಗುವುದನ್ನು ಕಾಣಬೇಕಾಯಿತು. ಬಡವರ ಸಾಲ ಮನ್ನಾ ಮಾಡುವುದನ್ನು ಬಿಟ್ಟು ಅಂಬಾನಿ, ಅದಾನಿಗಳ ಸಾಲ ಮನ್ನಾ ಮಾಡಿದರು. ನೋಟು ಅಮಾನೀಕರಣದಿಂದಾಗಿ 179 ಜನರು ಮೃತಪಡುವಂತಾಯಿತು. ಪೊಲೀಸರ ಲಾಠಿ ಏಟು ತಿನ್ನಬೇಕಾಯಿತು. ಆಹಾರ ಸಾಮಗ್ರಿಗಳ ಬೆಲೆ ಗಗನಕ್ಕೇರಿತು. ರೈತರ ಬೆಳೆಗಳಿಗೆ ಬೆಲೆ ಇಲ್ಲದಂತಾಯಿತು. ಪೆಟ್ರೋಲ್, ಡಿಸೇಲ್, ಗ್ಯಾಸ್ ದರಗಳು ಹೆಚ್ಚಾಗಿ ಜನರು ಬವಣೆ ಪಡುವಂತಾಯಿತು. 

ದೇಶದ ಸೈನಿಕರ ಸೇವೆಯನ್ನು ಮೋದಿಯ ಸೇವೆಯೆಂದು ಬಿಜೆಪಿ ಪರಿವರ್ತಿಸಿ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದೆ. ಚಾ ವಾಲಾ, ಚೌಕೀದಾರ ಎನ್ನುತ್ತಿರುವ ಮೋದಿ 3 ಕೋಟಿಯ ಕಾರಲ್ಲಿ ಸಂಚರಿಸುತ್ತಿದ್ದು, ದಿನಕ್ಕೆ 5 ಬಾರಿ ಬಟ್ಟೆ ಬದಲಾಯಿಸುತ್ತಿದ್ದಾರೆ. ಅಲ್ಲದೆ 90 ದೇಶಗಳನ್ನು ಸುತ್ತಿಕೊಂಡು ಐಶಾರಾಮಿ ಜೀವನ ನಡೆಸುತ್ತಿದ್ದಾರೆ. ಅವರು ಹೇಳಿರುವ ಅಚ್ಚೇ ದಿನ್ ದೇಶದ ಜನತೆಗೆ ಬಂದಿಲ್ಲ. ಪುಲ್ವಾಮ ಘಟನೆಯನ್ನು 15 ದಿನಗಳಲ್ಲಿಯೇ ಮರೆ ಮಾಚುವ ಕೆಲಸ ನಡೆದಿದೆ. ಇದೀಗ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಹೇಳಿರುವ ಬಗ್ಗೆ ಸಂಶಯವಿದೆ. ಸೈನಿಕರ ಸಾವನ್ನು ರಾಜಕೀಯ ಲಾಭಕ್ಕೆ ಬಿಜೆಪಿ ಬಳಕೆ ಮಾಡಿಕೊಳ್ಳುತ್ತಿದ್ದು, ಇವೆಲ್ಲದರ ಸತ್ಯಾಸತ್ಯತೆಯ ಬಗ್ಗೆ ತನಿಖೆಯಾಗಬೇಕಾಗಿದೆ ಎಂದು ಆಗ್ರಹಿಸಿದರು.

ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಮಾತನಾಡಿ ಬಿಜೆಪಿಯ ಸಂಸದರಿಗೆ ಹೆಸರಿಲ್ಲ ಮತ್ತು ಮುಖವಿಲ್ಲ, ಅದಕ್ಕಾಗಿ ಅವರು ಮೋದಿಯ ಹೆಸರು ಮತ್ತು ಮುಖವನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ. ಎಲ್ಲಾ ರೀತಿಯಲ್ಲಿಯೂ ದೇಶದ ಜನತೆಗೆ ಮೋಸ ಮಾಡಿರುವ ಮೋದಿಯ ಹೆಸರಿನಲ್ಲಿ ಮತ ಯಾಚಿಸುವ ಬಿಜೆಪಿಯವರು ಯಾವ ಕಾರ್ಯಕ್ಕಾಗಿ ಮೋದಿಯ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ ಎಂಬುದನ್ನು ಜನತೆಗೆ ತಿಳಿಸಬೇಕು ಎಂದು ಒತ್ತಾಯಿಸಿದರು. 

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಂ ಡಿಸೋಜ, ಜೆಡಿಎಸ್ ಕಾರ್ಮಿಕ ಘಟಕದ ಅಧ್ಯಕ್ಷ ಮಹಾವೀರ ಜೈನ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News