ಕುತ್ತಾರು ಘರ್ಷಣೆ ಹಿಂದೆ ಸಚಿವ ಖಾದರ್ ಕುಮ್ಮಕ್ಕು: ಸುಲೋಚನಾ ಭಟ್ ಆರೋಪ

Update: 2019-04-14 14:47 GMT

ಮಂಗಳೂರು, ಎ.14: ಕುತ್ತಾರು ಮದನಿನಗರ ಪ್ರದೇಶದಲ್ಲಿ ನಡೆದ ಘರ್ಷಣೆಯ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರ ಕುಮ್ಮಕ್ಕು ಇದೆ ಎಂದು ರಾಜ್ಯ ಬಿಜೆಪಿಯ ಮಹಿಳಾ ಘಟಕದ ಸಹವಕ್ತಾರೆ ಜಿ.ಕೆ.ಸುಲೋಚನಾ ಭಟ್ ಗಂಭೀರ ಆರೋಪ ಮಾಡಿದ್ದಾರೆ.

ನಗರದ ಬಂಟ್ಸ್‌ಹಾಸ್ಟೆಲ್‌ನಲ್ಲಿರುವ ಬಿಜೆಪಿ ಚುನಾವಣಾ ಕಚೇರಿಯಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆ ನಡೆದಿರುವುದು ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರವಾಗಿದ್ದು, ಘರ್ಷಣೆ ಹಿಂದೆ ಸಚಿವರ ಕುಮ್ಮಕ್ಕು ಇದೆ. ಇಲ್ಲದಿದ್ದಲ್ಲಿ ತಕ್ಷಣವೇ ಅವರು ಘಟನೆಯನ್ನು ಖಂಡಿಸುತ್ತಿದ್ದರು. ಆದರೆ ಮಹಿಳೆಯರ ಮೇಲಿನ ಹಲ್ಲೆ ಘಟನೆಯ ಬಗ್ಗೆ ಸಚಿವರು ಒಂದು ಮಾತನ್ನೂ ಆಡಿಲ್ಲ. ಪೊಲೀಸ್ ಇಲಾಖೆ ತಪ್ಪಿತಸ್ಥರನ್ನು ಕೂಡಲೇ ಬಂಧಿಸುವ ಕೆಲಸವಾಗಬೇಕು ಎಂದು ಅವರು ಆಗ್ರಹಿಸಿದರು.

ಮಂಗಳೂರಿನ ನೆಹರೂ ಮೈದಾನದಲ್ಲಿ ಶನಿವಾರ ಜರುಗಿದ ಬಿಜೆಪಿಯ ವಿಜಯ ಸಂಕಲ್ಪ ರ್ಯಾಲಿಯಲ್ಲಿ ಭಾಗವಹಿಸಿ ಬಿಜೆಪಿ ಕಾರ್ಯಕರ್ತೆಯರು ವಾಪಸಾಗುತ್ತಿದ್ದರು. ಕಾರ್ಯಕರ್ತೆಯರ ಮೇಲೆ ಕುತ್ತಾರು ಸಮೀಪದ ಮದನಿನಗರದಲ್ಲಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.

ವಿಧಾನಸಭೆ ಚುನಾವಣೆ ನಡೆದು ಎಂಟು ತಿಂಗಳು ಸರಿಯಿತು. ಇಲ್ಲಿಯವರೆಗೂ ಯಾವುದೇ ಗಲಾಟೆ, ಕೋಮುಗಲಭೆಗಳು ನಡೆದಿಲ್ಲ. ಆದರೆ ಶನಿವಾರ ಬಿಜೆಪಿಯ ರ್ಯಾಲಿಯನ್ನು ನೋಡಿ ನಮ್ಮ ವಿರೋಧಿಗಳು ಹತಾಶಗೊಂಡು ನಡೆದುಕೊಂಡ ರೀತಿ ಅಸಹನೀಯ. ವ್ಯವಸ್ಥಿತವಾಗಿ ಮಹಿಳೆಯರಿದ್ದ ಬಸ್‌ನ ಒಳಗೆ ನುಗ್ಗಿ ಕಾರ್ಯಕರ್ತೆಯರ ದುಪ್ಪಟ್ಟಾ ಎಳೆದು, ಕೂದಲಿಗೆ ಕೈಹಾಕಿ ಅಮಾನವೀಯವಾಗಿ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕಸ್ತೂರಿ ಪಂಜ, ಪೂಜಾ ಪೈ ಮತ್ತಿತರರು ಉಪಸ್ಥಿತರಿದ್ದರು.

ಕಾಂಗ್ರೆಸ್ ಶಾಸಕರಿದ್ದಲ್ಲಿ ಮಾತ್ರ ಗೂಂಡಾಗಿರಿ: ಸಚಿವರು ಉತ್ತರಿಸಲಿ-ಸಂಜೀವ ಮಠಂದೂರು

ಪುತ್ತೂರು: ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದ 8 ಶಾಸಕರ ಪೈಕಿ 7 ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಆದರೆ ಕಾಂಗ್ರೆಸ್ ಶಾಸಕರಾದ ಸಚಿವ ಯು.ಟಿ. ಖಾದರ್ ಪ್ರತಿನಿಧಿಸುತ್ತಿರುವ ಮಂಗಳೂರು(ಉಳ್ಳಾಲ) ಕ್ಷೇತ್ರದಲ್ಲಿ ಮಾತ್ರ ಪ್ರಧಾನಿ ಕಾರ್ಯಕ್ರಮ ಮುಗಿಸಿ ಹಿಂದಿರುಗುತ್ತಿದ್ದ ಬಿಜೆಪಿ ಕಾರ್ಯಕರ್ತರು ತೆರಳುತ್ತಿದ್ದ ಬಸ್ಸಿಗೆ ಕಲ್ಲು ಎಸೆದು, ಹಲ್ಲೆ, ಗೂಂಡಾಗಿರಿ ನಡೆಸಲಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮತ್ತು ಮೈತ್ರಿ ಕೂಟದ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಉತ್ತರಿಸಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶಾಸಕ ಸಂಜೀವ ಮಠಂದೂರು ಒತ್ತಾಯಿಸಿದ್ದಾರೆ.

ಪುತ್ತೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಉಳ್ಳಾಲದಲ್ಲಿ ಬಸ್‍ನೊಳಗೆ ನುಗ್ಗಿ ಬಿಜೆಪಿ ಕಾರ್ಯಕರ್ತರು ಮತ್ತು ಮಹಿಳೆಯರ ಮೇಲೆ ಹಲ್ಲೆ ನಡೆಸಿದವರು ಯಾರು ? ಇವರು ಕಾಂಗ್ರೆಸ್ ಕಾರ್ಯಕರ್ತರಲ್ಲವೇ ?. ಕಾಂಗ್ರೆಸ್‍ನ ಇಂತಹ ಗೂಂಡಾಗಿರಿಗೆ ಬಿಜೆಪಿ ಕಾರ್ಯಕರ್ತರು ಮತ್ತು ಮತದಾರರು ಎಂದೂ ಹೆದರುವುದಿಲ್ಲ. ಗೂಂಡಾಗಿರಿಯ ವಿರುದ್ಧ ಕಾನೂನು ಬದ್ಧ ಹೋರಾಟ ಮಾಡಲು ಬಿಜೆಪಿ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

ಮದನಿ ನಗರ ಹಲ್ಲೆ ಪ್ರಕರಣ: ಉಸ್ತುವಾರಿ ಸಚಿವರು ನೇರ ಹೊಣೆ - ಶರಣ್ ಪಂಪುವೆಲ್ ಆರೋಪ

ಮದನಿನಗರದಲ್ಲಿ ಬಿಜೆಪಿಯ ಸಂಕಲ್ಪ ಯಾತ್ರೆ ಮುಗಿಸಿ ಮನೆಗೆ ವಾಪಸ್ಸಾಗುತಿದ್ದಾಗ ಕ್ಷುಲಕ ವಿಷಯಕ್ಕೆ ಸಂಬಂಧಿಸಿ ಯುವಕರ ಗುಂಪೊಂದು ಬಸ್‍ನ್ನು ಅಡ್ಡಗಟ್ಟಿ ಗಾಜು ಹೊಡೆದು, ಮಕ್ಕಳು, ಮಹಿಳೆಯರು ಮತ್ತು ಯುವಕರ ಮೇಲೆ ಹಲ್ಲೆ ನಡೆಸಿರುವುದು ಗಂಭೀರ ಪ್ರಕರಣವಾಗಿದ್ದು, ಈ ಪ್ರಕರಣಕ್ಕೆ ಕ್ಷೇತ್ರದ ಶಾಸಕರೇ ನೇರ ಹೊಣೆಯಾಗಿದ್ದಾರೆ ಎಂದು ವಿಶ್ವ  ಹಿಂದೂ ಪರಿಷತ್‍ನ ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ ಆರೋಪಿಸಿದರು.

ಅವರು ತೊಕ್ಕೊಟ್ಟುವಿನಲ್ಲಿ ರವಿವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಬೇರೆಲ್ಲೂ ಇಂತಹ ಘಟನೆ ನಡೆದಿಲ್ಲ . ಅದಕ್ಕೆ ಮುಸ್ಲಿಂ ಓಟುಬ್ಯಾಂಕ್ ರಾಜಕೀಯ ಕಾರಣ. ಈ ಕ್ಷೇತ್ರದಲ್ಲಿ ಈ ಹಿಂದೆಯೂ ಚೂರಿ ಇರಿತ, ಹಲ್ಲೆ, ಗಲಭೆ ಪ್ರಕರಣಗಳು ನಡೆದಿವೆ. ಇಂತಹ ಪ್ರಕರಣಗಳಿಗೆ ಈ ಕ್ಷೇತ್ರದ ಶಾಸಕರು ಉತ್ತರಿಸಬೇಕಿದೆ ಎಂದರು.

ಹಲ್ಲೆಯ ಬಳಿಕ ಪೊಲೀಸ್ ಇಲಾಖೆ ಕೈಗೊಂಡ ಕ್ರಮ ಶ್ಲಾಘನೀಯವಾಗಿದೆ. ಪ್ರತಿಭಟನೆ ಸಂದರ್ಭ ಪೊಲೀಸರು ನುಡಿದಂತೆ ಏಳು ಮಂದಿ ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಗಾಂಜಾ, ಡ್ರಗ್ಸ್ ಮಾಫಿಯಾ ಬಗ್ಗೆಯೂ ಪೊಲೀಸರು ಕ್ರಮ ಕೈಗೊಳ್ಳಬೇಕಿದೆ ಎಂದರು.
 ಪತ್ರಿಕಾಗೋಷ್ಠಿಯಲ್ಲಿ ಹರಿದಾಸ ಮಾಡೂರು, ಗೋಪಾಲ್ ಕುತ್ತಾರ್, ನಾರಾಯಣ ಮಾಡೂರು, ರವಿ ಅಸೈಗೋಳಿ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News