ಮತದಾನ ದಿನ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ: ವೀಕ್ಷಕ ಕೃಷ್ಣ ಕುನಾಲ್

Update: 2019-04-14 16:00 GMT

ಉಡುಪಿ, ಎ.14: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಎ.18ರಂದು ನಡೆಯುವ ಮತದಾನದ ದಿನ, ಸೂಕ್ಷ್ಮ ಮತ್ತು ಸಮಸ್ಯಾತ್ಮಕ ಮತಗಟ್ಟೆಗಳಿರುವ ಕಡೆಗಳಲ್ಲಿ ಎಲ್ಲಾ ಸೆಕ್ಟರ್ ಅಧಿಕಾರಿಗಳು ಮತ್ತು ನೋಡೆಲ್ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ವೀಕ್ಷಕ ಕೃಷ್ಣ ಕುನಾಲ್ ತಿಳಿಸಿದ್ದಾರೆ.

ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ ದಲ್ಲಿ ರವಿವಾರ ನಡೆದ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸೆಕ್ಟರ್ ಅಧಿಕಾರಿಗಳು ಹಾಗೂ ವಿವಿಧ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಮತದಾನದ ದಿನ ಸೂಕ್ಷ್ಮ ಮತ್ತು ಸಮಸ್ಯಾತ್ಮಕ ಮತಗಟ್ಟೆಗಳಿರುವ ಕಡೆಗಳಲ್ಲಿ ಮಧ್ಯಾಹ್ನ 3ರ ವರೆಗೂ ಮತದಾನ ಪ್ರಮಾಣ ಕಡಿಮೆ ಕಂಡುಬಂದಲ್ಲಿ ಆ ಭಾಗದ ಮತದಾರರನ್ನು ಯಾರಾದರೂ ಮತಕೇಂದ್ರಕ್ಕೆ ಬಾರದಂತೆ ತಡೆಯುತ್ತಿ ದ್ದಾರೆಯೇ ಎಂಬುದರ ಕುರಿತು ಪರಿಶೀಲಿಸಬೇಕು. ಮತಗಟ್ಟೆಯಲ್ಲಿನ ಪಕ್ಷ/ಅಭ್ಯರ್ಥಿಗಳ ಏಜೆಂಟ್ ಮೊಬೈಲ್ ಬಳಸುವ ಮತ್ತು ಮತಗಟ್ಟೆಯ 200 ಮೀ. ಒಳಗೆ ಅನಧಿಕೃತವಾಗಿ ಪ್ರವೇಶಿಸುವವರ ವಿರುದ್ದ ಕೂಡಲೇ ಕ್ರಮ ಕೈಗೊಳ್ಳ ಬೇಕು ಎಂದರು.

ಮತದಾನಕ್ಕೆ 48 ಗಂಟೆಗಳ ಮುಂಚೆ ಬಹಿರಂಗ ಪ್ರಚಾರ ಅಂತ್ಯಗೊಂಡು, ಅಭ್ಯರ್ಥಿಗಳು ಮನೆ ಮನೆ ಭೇಟಿ ನೀಡಲು ಅವಕಾಶವಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರಿಗೆ ಆಮಿಷ ಒಡ್ಡುವ ಸಾದ್ಯತೆಗಳಿದ್ದು ಈ ಕುರಿತು ಜಾಗೃತರಾಗಬೇಕು. ಎಲ್ಲಾ ಸೆಕ್ಟರ್ ಅಧಿಕಾರಿಗಳು ಯಾವುದೇ ದೂರು ಬಂದ ಕೂಡಲೇ ಸಂಬಂದಪಟ್ಟ ತಂಡಗಳೊಂದಿಗೆ ತೆರಳಿ ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣ ಕುನಾಲ್ ತಿಳಿಸಿದರು.

ಮತಗಟ್ಟೆಯ 100 ಮೀ. ಒಳಗೆ ಮೊಬೈಲ್ ಬಳಕೆ ನಿಷೇಧಿಸಲಾಗಿದ್ದು, ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಮಾತ್ರ ಅನುಮತಿ ನೀಡಲಾಗಿದೆ. ಆದರೆ ಮತಗಟ್ಟೆ ಒಳಗೆ ಯಾರೂ ಮೊಬೈಲ್ ಬಳಸುವಂತಿಲ್ಲ. 1400ಕ್ಕೂ ಅಧಿಕ ಮತದಾರರು ಇರುವ ಕಡೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸ ಲಾಗುವುದು. ಚುನಾವಣಾ ಕರ್ತವ್ಯಕ್ಕೆ ತೆರಳುವ ಮಹಿಳಾ ಮತದಾರರಿಗೆ ಉಳಿಯಲು ಪ್ರತ್ಯೇಕ ಕೊಠಡಿ ಮತ್ತು ಶೌಚಾಲಯ ಮತ್ತು ಸ್ನಾನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ಅವರು ಹೇಳಿದರು.

 ಎಸ್ಪಿ ನಿಷಾ ಜೇಮ್ಸ್ ಮಾತನಾಡಿ, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿ ರುವ ಪೊಲೀಸ್ ಸಿಬ್ಬಂದಿಗೆ ಅಗತ್ಯ ಸಾಮಗ್ರಿಗಳ ಕಿಟ್ ಮತ್ತು ಚುನಾವಣಾ ಕರ್ತವ್ಯದಲ್ಲಿ ನಿರ್ವಹಿಸಬೇಕಾದ ಜವಾಬ್ದಾರಿ ಕುರಿತು ಕೈಪಿಡಿಯನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ. ಮತಗಟ್ಟೆಯ ಸಮೀಪ ನಡೆಯುವ ನೀತಿ ಸಂಹಿತೆ ಉಲ್ಲಂಘನೆ ಕುರಿತಂತೆ ತಕ್ಷಣ ಕಂಟ್ರೋಲ್ ರೂಂ ಗೆ ಮಾಹಿತಿ ನೀಡಬೇಕು ಎಂದರು.

ಜಿಲ್ಲಾ ಚುನಾವಣಾದಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲ ಪಾಟಿ ಮಾತನಾಡಿ, ಮತಗಟ್ಟೆಯಿಂದ 200 ಮೀಟರ್ ಹೊರಗೆ ಮಾತ್ರ ಪಕ್ಷಗಳ ಬೂಥ್ ಹಾಕಿಕೊಳ್ಳಲು ಅವಕಾಶ ನೀಡಬೇಕು. ಮತಗಟ್ಟೆಗೆ ಪದೇ ಪದೇ ಒಂದೇ ವಾಹನದಲ್ಲಿ ಮತದಾರರು ಬರುತ್ತಿದ್ದರೆ ಈ ಬಗ್ಗೆ ಕ್ರಮ ಕೈಗೊಳ್ಳ ಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ, ಕಾರ್ಕಳ ವಿಭಾಗದ ಎಎಸ್ಪಿ ಕೃಷ್ಣಕಾಂತ್, ಉಪಸ್ಥಿತರಿದ್ದರು. ಜಿಲ್ಲಾ ಮಾಸ್ಟರ್ ಟ್ರೈನರ್ ಅಶೋಕ್ ಕಾಮತ್ ತರಬೇತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News