ಸೌಹಾರ್ದ, ಅಭಿವೃದ್ಧಿಗೆ ಎಸ್‌ಡಿಪಿಐ ಆದ್ಯತೆ: ಮಹಮ್ಮದ್ ಇಲ್ಯಾಸ್ ತುಂಬೆ

Update: 2019-04-14 16:23 GMT

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ ಮತ್ತು ಅಭಿವೃದ್ಧಿಗೆ ಆದ್ಯತೆಯಲ್ಲಿ ಎಸ್‌ಡಿಪಿಐ ಕೆಲಸ ಮಾಡಲಿದೆ. 3 ದಶಕಗಳಿಂದ ಜುಜುಬಿ ಓಟಿಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಕೋಮು ಸೌಹಾರ್ದತೆಗೆ ಧಕ್ಕೆ ಯಾಗುವ ಕೆಲಸ ಮಾಡುತ್ತಿದೆ. ಜಿಲ್ಲೆಯ ಹಿಂದೂ- ಮುಸ್ಲಿಂ- ಕ್ರೈಸ್ತ ಬಾಂಧವರು ಅಣ್ಣ ತಂಮ್ಮಂದಿರಂತೆ ಬಾಳಬೇಕು. ಎಸ್‌ಡಿಪಿಐ ಎಲ್ಲಾ ಧರ್ಮಗಳ ಅವಕಾಶ ವಂಚಿತ ಜನ ಸಮುದಾಯಗಳ ಸಬಲೀಕರಣಕ್ಕೆ 10 ವರ್ಷದಿಂದ ಕೆಲಸ ಮಾಡುತ್ತಿದೆ ಎಂದು ಎಸ್‌ಡಿಪಿಐ ಪಕ್ಷದ ಲೋಕಸಭಾ ಅಭ್ಯರ್ಥಿ ಮಹಮ್ಮದ್ ಇಲ್ಯಾಸ್ ತುಂಬೆ ತಿಳಿಸಿದರು.

ಅವರು ಕೆ.ಸಿ ರೊಡ್ ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು. 

ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ಮಾತನಾಡಿ, ಎಸ್‌ಡಿಪಿಐ ಜಿಲ್ಲೆಯಲ್ಲಿ ಹಲವಾರು ಹಿಂದೂ ಕುಟುಂಬಗಳಿಗೆ ಸಂಕಷ್ಟಕ್ಕೆ ನೆರವಾಗಿದೆ ಎಂದರು. ರಾಜ್ಯ ಕಾರ್ಯದರ್ಶಿ ಅಕ್ರಮ್ ಹಸಮ್ ಮಾತನಾಡಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಮುಸ್ಲಿಮರಿಗೆ ನೀಡಿದ ಭರವಸೆ ಈಡೇರಿಸಲಿಲ್ಲ. ಸಾಚಾರ್ ವರದಿ ಅನುಷ್ಠಾನವಾಗಿಲ್ಲ, ಕೋಮುಗಲಭೆ ನಿಯಂತ್ರಣ ಮಸೂದೆ ಜಾರಿ ಮಾಡಲಿಲ್ಲ, ಖಾಸಗಿ ವಲಯದಲ್ಲಿ ಅಹಿಂದಾ ವರ್ಗಗಳಿಗೆ ಮೀಸಲಾತಿ ತಂದಿಲ್ಲ ಎಂದರು.

ಎ.ಕೆ. ಅಶ್ರಫ್ ಮಾತನಾಡಿ ಎಸ್‌ಡಿಪಿಐ ದೇಶದಲ್ಲಿ ಮೌಲ್ಯಾಧಾರಿತ ರಾಜಕಾರಣಕ್ಕೆ ಬುನಾದಿ ಹಾಕಿದೆ ಎಂದರು. ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಮಾತನಾಡಿ ಮುಸ್ಲಿಂ ಮತ್ತು ದಳಿತ ವರ್ಗಗಳಿಗೆ ಕಾಂಗ್ರೆಸ್ - ಬಿಜೆಪಿ ನಿರಂತರ ತಾರತಮ್ಯ ಮಾಡಿದೆ ಎಂದರು.

ಜಿಲ್ಲಾ ಸಮಿತಿ ಸದಸ್ಯರು ಹನೀಫ್ ಖಾನ್ ಮಾತನಾಡಿ ಜಿಲ್ಲೆಯ ಉಸ್ತುವಾರಿ ಸಚಿವರು ಅಲ್ಲಲ್ಲಿ ಎಸ್‌ಡಿಪಿಐ ವಿರುದ್ಧ ಸುಳ್ಳು ಆರೋಪ ಮಾಡಿ ಪಕ್ಷದ ಕಾರ್ಯಕರ್ತರನ್ನು ಉದ್ರೇಕಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಪಕ್ಷದ ಮುಖಂಡರಾದ ಅಬ್ಬಾಸ್ ಕಿನ್ಯಾ, ರಶೀದ್ ಇಂಜಿನಿಯರ್, ಶಾಫಿ ಬಬ್ಬುಕಟ್ಟೆ, ಇಕ್ಬಾಲ್ ಐ.ಎಮ್.ಆರ್, ಹಕೀಮ್, ಮುಶರಫ್, ಇರ್ಶಾದ್ ಕೆ.ಸಿ ರೋಡ್, ಲತೀಫ್ ಕೋಡಿಜಾಲ್ ಮತ್ತಿತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News