ಅದಾನಿಗಳ ಸಂಪತ್ತು ಕಾಯುತ್ತಿರುವ ಚೌಕಿದಾರ್ ಮೋದಿ: ವಸಂತ ಆಚಾರಿ

Update: 2019-04-14 16:45 GMT

ಮಂಗಳೂರು, ಎ.14: ಚಹಾ ಮಾರುವವನೊಬ್ಬ ದೇಶದ ಪ್ರಧಾನಿಯಾಗಲಿದ್ದಾರೆ ಎಂಬ ಹಸಿಹಸಿ ಸುಳ್ಳನ್ನು ಹಬ್ಬಿಸಿ, ಅಧಿಕಾರಕ್ಕೇರಿದ ಬಳಿಕ ತನ್ನನ್ನು ತಾನು ಫಕೀರನೆಂದು ಕರೆಸಿಕೊಂಡು ಶೋಕಿ ಜೀವನದಲ್ಲೇ ನರೇಂದ್ರ ಮೋದಿ ಕಾಲ ಕಳೆದಿದ್ದರು. ಈಗ ಚೌಕಿದಾರನ ಹೆಸರಲ್ಲಿ ಅದಾನಿಗಳ ಸಂಪತ್ತು ಕಾಯುತ್ತಿದ್ದಾರೆ ಎಂದು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಟೀಕಿಸಿದ್ದಾರೆ.

ಸಿಪಿಎಂ ನೇತೃತ್ವದಲ್ಲಿ ರವಿವಾರ ಜರುಗಿದ ಮಂಗಳೂರು ನಗರ ಮಟ್ಟದ ರಾಜಕೀಯ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಈಗ ಮತ್ತೆ ಚುನಾವಣೆಯನ್ನು ಎದುರಿಸಲು ಚೌಕಿದಾರನ ವೇಷ ಧರಿಸಿ ಜನರನ್ನು ಮರಳುಗೊಳಿಸುತ್ತಿದ್ದಾರೆ ಎಂದು ತಿಳಿಸಿದರು.

ನರೇಂದ್ರ ಮೋದಿ ಸರಕಾರದಲ್ಲಿ ಮಹಿಳೆಯರಿಗೆ, ದಲಿತ ಆದಿವಾಸಿ, ಅಲ್ಪಸಂಖ್ಯಾತರಿಗೆ ರಕ್ಷಣೆಯಿಲ್ಲ. ಒಂದು ಕಡೆ ‘ಬೇಟಿ ಬಚಾವೋ ಬೇಟಿ ಪಡಾವೋ’ ಘೋಷಣೆ ನೀಡಿದರೆ, ಮತ್ತೊಂದು ಕಡೆ ಹಸಿಗೂಸಿನಿಂದ ಹಿಡಿದು ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ, ಅತ್ಯಾಚಾರ, ಕೊಲೆಗಳು ನಡೆಯುತ್ತಿದೆ. ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಅಧಿಕಾರಕ್ಕೇರಿದ ನರೇಂದ್ರ ಮೋದಿ ಸರಕಾರವು ಇತ್ತೀಚಿನ ರಫೇಲ್ ಹಗರಣ ಸೇರಿದಂತೆ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇಂತಹ ಫ್ಯಾಸಿಸ್ಟ್ ಸ್ವರೂಪದ ಎನ್‌ಡಿಎ ಕೂಟವನ್ನು ಹೀನಾಯವಾಗಿ ಸೋಲಿಸಬೇಕು ಎಂದು ಕರೆ ನೀಡಿದರು.

ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ.ಬಾಲಕ್ರಷ್ಣ ಶೆಟ್ಟಿ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತಾಪಿ ಜನತೆ, ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕ ವರ್ಗ, ಸೇವೆ ನೀಡುವ ನೌಕರರು, ಕೂಲಿ ಕೆಲಸ ಮಾಡುವ ಕೃಷಿ ಕೂಲಿ ಕಾರ್ಮಿಕರು ಮೋದಿ ಸರಕಾರದಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ‘ಮನ್ ಕಿ ಬಾತ್’ ಕಾರ್ಯಕ್ರಮದ ಮೂಲಕ ಅವರ ಮನಸ್ಸಿನಲ್ಲಿ ಇದ್ದುದ್ದನ್ನು ಹೇಳುತ್ತಾರೆಯೇ ಹೊರತು, ಜನಸಾಮಾನ್ಯರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿಯಲು ಆಸಕ್ತಿ ಇಲ್ಲ ಎಂದು ಹೇಳಿದರು.

ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಸಿಪಿಎಂ ಮಂಗಳೂರು ನಗರ ಉತ್ತರ ಕಾರ್ಯದರ್ಶಿ ದಯಾನಂದ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯೆ ಜಯಂತಿ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News