ರಾಜಕೀಯ ಪಕ್ಷಗಳಿಂದ ಮತಕ್ಕಾಗಿ ಲಂಚ ಸ್ವೀಕರಿಸಿದರೆ ಸೂಕ್ತ ಕ್ರಮ: ದ.ಕ. ಡಿಸಿ ಸಸಿಕಾಂತ್ ಸೆಂಥಿಲ್

Update: 2019-04-15 08:48 GMT

ಮಂಗಳೂರು, ಎ.14: ಚುನಾವಣೆಗಳ ಸಮಯದಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಮತಕ್ಕಾಗಿ ಮತದಾರರಿಗೆ ಲಂಚ ನೀಡುವ ಪ್ರವೃತ್ತಿ ಸಾಮಾನ್ಯವಾಗಿ ಹರಡಿರುವ ಭ್ರಷ್ಟಾಚಾರ. ಆದರೆ ಇದರ ವಿರುದ್ಧ ಬಹಳ ವಿರಳವಾಗಿ ಅಧಿಕಾರಿಗಳಿಗೆ ದೂರು ನೀಡಲಾಗುತ್ತದೆ ಎಂದು ದಕ್ಷಿಣ ಕನ್ನಡದ ಚುನಾವಣಾ ರಿಟರ್ನಿಂಗ್ ಅಧಿಕಾರಿ ಮತ್ತು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿ ಪಡೆಯುವ ಉದ್ದೇಶದಿಂದ 'ವಾರ್ತಾಭಾರತಿ' ದಕ್ಷಿಣ ಕನ್ನಡದ ಚುನಾವಣಾ ರಿಟರ್ನಿಂಗ್ ಅಧಿಕಾರಿ ಮತ್ತು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ಜೊತೆ ಮಾತುಕತೆ ನಡೆಸಿತು.

ನಂತರ ಮಾತನಾಡಿದ ಸಸಿಕಾಂತ್ ಅವರು ಜನರು ತಮ್ಮ ಮತಗಳ ಬದಲಿಗೆ ಹಣವನ್ನು ಪಡೆದು ಸುಮ್ಮನಾಗುತ್ತಾರೆ. ಮತಕ್ಕಾಗಿ ಮತದಾರರಿಗೆ ಹಣ ನೀಡುವುದು ಕಾನೂನುಬಾಹಿರ ಎನ್ನುವುದು ಬಹುತೇಕ ಮತದಾರರಿಗೆ ತಿಳಿದಿದೆ. ಆದರೆ ತಮ್ಮ ಅಮೂಲ್ಯ ಮತದ ಬದಲಿಗೆ ಮತದಾರರು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಂದ ಲಂಚವನ್ನು ಸ್ವೀಕರಿಸುವುದೂ ಕಾನೂನು ಬಾಹಿರವಾಗಿದೆ ಎನ್ನುವುದು ಬಹಳಷ್ಟು ಜನರಿಗೆ ತಿಳಿದಿಲ್ಲ ಎಂದು ಹೇಳಿದರು.

ಕೇವಲ ಲಂಚ ನೀಡುವುದು ಮಾತ್ರವಲ್ಲ ಮತಕ್ಕಾಗಿ ಲಂಚ ಪಡೆಯುವುದೂ ಭಾರತದಲ್ಲಿ ಕ್ರಿಮಿನಲ್ ಅಪರಾಧವಾಗಿದೆ ಮತ್ತು ಇದನ್ನು ಉಲ್ಲಂಘಿಸಿದವರನ್ನು ಅಪರಾಧಿ ಕಾನೂನು ಪ್ರಕಾರ ದಂಡನೆಗೊಳಪಡಿಸಲಾಗುವುದು. ತಪ್ಪಿತಸ್ಥರಿಗೆ ಒಂದು ವರ್ಷದವರೆಗಿನ ಕಾರಾಗೃಹ ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುವುದು. ಚುನಾವಣೆಯ ಸಮಯದಲ್ಲಿ ಮತದಾರರಿಗೆ ಲಂಚ ನೀಡುವ ಬಗ್ಗೆ ಮಾತನಾಡಿದ ಅವರು, ಮತದಾನ ನಮ್ಮ ದೇಶದಲ್ಲಿ ಪ್ರಜಾಸತಾತ್ಮಕ ಹಕ್ಕಾಗಿದೆ ಮತ್ತು ಈ ಹಕ್ಕನ್ನು ಅತ್ಯಂತ ಹೊಣೆಗಾರಿಕೆಯಿಂದ ಬಳಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಯಾವುದೇ ರೀತಿಯ ಉಲ್ಲಂಘನೆ ಅಥವಾ ಲಂಚ (ನೀಡುವುದು ಅಥವಾ ಪಡೆದುಕೊಳ್ಳುವುದು) ಅಥವಾ ಮತದಾರರ ಮೇಲೆಪ್ರ ಭಾವ ಬೀರಲು ನಡೆಸುವ ಇತರ ಯಾವುದೇ ಪ್ರಯತ್ನಗಳು ಕ್ರಿಮಿನಲ್ ಅಪರಾಧವಾಗಿದೆ ಮತ್ತು ಇದರಲ್ಲಿ ಭಾಗಿಯಾಗುವ ಎರಡೂ ಕಡೆಯವರನ್ನೂ (ಲಂಚ ಪ್ರಕರಣದಲ್ಲಿ) ಭಾರತೀಯ ದಂಡ ಸಂಹಿತೆಯ 171(ಬಿ) ವಿಧಿ ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆಗೊಳಪಡಿಸಲಾಗುವುದು ಎಂದು ತಿಳಿಸಿದರು.

ಲಂಚದ ಆಮಿಷ ತೋರಿದಲ್ಲಿ ನೀವೇನು ಮಾಡಬೇಕು

ಮತದಾರರ ಮೇಲೆ ಪ್ರಭಾವ ಬೀರಲು ನಡೆಸುವ ಯಾವುದೇ ಪ್ರಯತ್ನಗಳು ಅಥವಾ ಆಮಿಷಗಳನ್ನು ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಿಳಿಸಿರುವ ಸಸಿಕಾಂತ್, ಏನೇ ಆದರೂ, ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿ ನಿಮಗೆ ಲಂಚದ ಆಮಿಷ ನೀಡಿದರೆ ಅಥವಾ ಯಾವುದೇ ರೀತಿಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದರೆ, ಮತದಾರರು ಕೂಡಲೇ ಈ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಬೇಕು. ಇದಕ್ಕಾಗಿ ನಾವು ಸಹಾಯವಾಣಿಯನ್ನು ಆರಂಭಿಸಿದ್ದು ಮತದಾರರು 1905 ದೂರವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ನಮ್ಮನ್ನು ತಲುಪ ಬಹುದಾಗಿದೆ ಎಂದು ತಿಳಿಸಿದರು.

ಭಾರತೀಯ ಚುನಾವಣಾ ಆಯೋಗದ ಸಿವಿಜಿಲ್ ಆ್ಯಪ್ ಮೂಲಕವೂ ಇಂತಹ ಘಟನೆಗಳನ್ನು ವರದಿ ಮಾಡಬಹುದಾಗಿದೆ. ಈ ಆ್ಯಪ್‌ನಲ್ಲಿ ಫೋಟೊಗಳನ್ನು ಅಪ್‌ಲೋಡ್ ಮಾಡುವ ಮೂಲಕವೂ ಜನರು ಇಂತಹ ಘಟನೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಮಾಡಬಹುದಾಗಿದೆ. ಹೀಗೆ ದೂರುಗಳನ್ನು ಪಡೆದ ನೂರು ಗಂಟೆಗಳ ಒಳಗೆ ಇದಕ್ಕೆ ಸಂಬಂಧಿಸಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಜೊತೆಗೆ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಯಲು ಅಧಿಕಾರಿಗಳ ಜೊತೆ ಕೈಜೋಡಿಸುವಂತೆ ಅವರು ಜನರಿಗೆ ಮನವಿ ಮಾಡಿದ್ದಾರೆ. ಮತಕ್ಕಾಗಿ ಲಂಚ ಪ್ರಕರಣಗಳ ಬಗ್ಗೆ ಆಯೋಗಕ್ಕೆ ಮಾಹಿತಿ ನೀಡುವಂತೆ ಭಾರತೀಯ ಚುನಾವಣಾ ಆಯೋಗ ಕೂಡಾ ಜನರಿಗೆ ಮನವಿ ಮಾಡಿಕೊಂಡಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News