ಬಂಟ್ವಾಳ: ರಿಕ್ರಿಯೇಷನ್ ಕ್ಲಬ್ ಗಳಿಗೆ ದಾಳಿ; 130ಕ್ಕೂ ಅಧಿಕ ಮಂದಿ ಸೆರೆ

Update: 2019-04-14 17:11 GMT

ಬಂಟ್ವಾಳ, ಎ. 14: ಬಿ.ಸಿ.ರೋಡಿನ ಹೃದಯ ಭಾಗದಲ್ಲಿರುವ ಎರಡು ರಿಕ್ರಿಯೇಷನ್ ಕ್ಲಬ್ ಗೆ ಬಂಟ್ವಾಳ ನಗರ ಪೊಲೀಸರು ದಾಳಿ ನಡೆಸಿ 130 ಕ್ಕೂ ಅಧಿಕ ಮಂದಿಯನ್ನು ಬಂಧಿಸಿರುವ ಘಟನೆ ರವಿವಾರ ರಾತ್ರಿ ನಡೆದಿದೆ.

ಜುಜಾಟ ಹಾಗೂ ಇನ್ನಿತರ ಪರವಾನಗಿ ರಹಿತ ವೀಡಿಯೊ ಗೇಮ್ ಗಳನ್ನು ಆಡುತ್ತಿರುವ ಶಂಕೆಯ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಬಂಟ್ವಾಳ ಎಎಸ್ಪಿ ಸೈದುಲ್ ಅಡಾವತ್ ಅವರ ನೇತೃತ್ವದಲ್ಲಿ ನಗರ ಠಾಣೆಯ ಎಸ್ಸೈ ಚಂದ್ರ ಶೇಖರ್ ಮತ್ತವರ ತಂಡ ಎರಡು ವಾಣಿಜ್ಯ ಸಂಕೀರ್ಣಗಳಿಗೆ ಏಕಕಾಲದಲ್ಲಿ ದಾಳಿ ನಡೆಸಿದೆ.

ಈ ಸಂದರ್ಭ ಎರಡು ಕ್ಲಬ್ ನಲ್ಲಿದ್ದ ಒಟ್ಟು ಸುಮಾರು 130ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ನಗದು, ಮೊಬೈಲ್, ಮತ್ತಿತರ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಪೊಲೀಸ್ ಠಾಣೆಯ ಅನತಿ ದೂರದಲ್ಲಿಯೇ ಈ ವಾಣಿಜ್ಯ ಸಂಕೀರ್ಣಗಳಿದ್ದು, ಈ ಎರಡರಲ್ಲಿ ಒಂದು ಅನಧಿಕೃತವಾಗಿ ನಡೆಯುತ್ತಿದೆ ಎಂದು ಹೇಳಲಾಗಿದೆ.  ದಾಳಿಯ ವೇಳೆ ಕ್ಲಬ್ ನಲ್ಲಿದ್ದ ಕೆಲವರು ತಮ್ಮ ಬಳಿಯಲ್ಲಿದ್ದ ನಗದು, ಚಿನ್ನಾಭರಣ, ಮೊಬೈಲ್ ಗಳನ್ನು ಮಹಡಿಯಿಂದ ಕೆಳಕ್ಕೆ ಎಸೆದಿದ್ದು, ಕೆಳ ಭಾಗದಲ್ಲಿ ಇದ್ದವರು ಇದನ್ನು ಹೆಕ್ಕಿ ಕೊಂಡ ಪ್ರಸಂಗವು ನಡೆಯಿತು.

ಈ ಸಂದರ್ಭ ವಾಣಿಜ್ಯ ಸಂಕೀರ್ಣದ ಹೊರಗೆ ಜನ ಜಮಾಯಿಸತೊಡಗಿದ್ದು, ಪೊಲೀಸ್ ಕಾರ್ಯಾಚರಣೆಯನ್ನು ಕುತೂಹಲದಿಂದ ವೀಕ್ಷಿಸುತ್ತಿರುವುದು ಕಂಡುಬಂತು. ರಾತ್ರಿವರೆಗೂ ಕಾರ್ಯಾಚರಣೆ ನಡೆದಿದ್ದು, ವಿಚಾರಣೆಯ ಬಳಿಕವಷ್ಟೇ ಸ್ಪಷ್ಟ ಮಾಹಿತಿ ನೀಡಲಾಗುತ್ತದೆ ಎಂದು ಪೊಲೀಸ್ ಠಾಣೆಯಿಂದ ಮಾಹಿತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News