ಬೇಗುಸರಾಯ್ ಗೆ ಹೋಗಿ ಕನ್ಹಯ್ಯರಿಗೆ ಶುಭ ಕೋರಿದ ಮಂಗಳೂರಿನ ಅಭಿಮಾನಿಗಳು

Update: 2019-04-15 05:30 GMT

ಬಿಹಾರದ ಬೇಗುಸರಾಯ್ ಲೋಕಸಭಾ ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಜೆ.ಎನ್.ಯು. ಮಾಜಿ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಈಗ ಇಡೀ ದೇಶದ ಪ್ರಮುಖ ಅಭ್ಯರ್ಥಿಗಳಲ್ಲಿ ಒಬ್ಬರಾಗಿ ಮೂಡಿಬಂದಿದ್ದಾರೆ. ಅವರ ಭಾಷಣಗಳು, ಹೇಳಿಕೆಗಳು, ಪ್ರಚಾರದ ವೀಡಿಯೋಗಳಿಗೆ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಅವರ ವೀಡಿಯೋಗಳಷ್ಟೇ ಪ್ರಾಮುಖ್ಯತೆ, ಬೇಡಿಕೆ ಬಂದಿದೆ. ಹಾಗಾಗಿ ಅವರಿಗೆ ದೇಶಾದ್ಯಂತ ಅಭಿಮಾನಿಗಳು, ಟೀಕಾಕಾರರೂ ಇದ್ದಾರೆ.  

ಕನ್ಹಯ್ಯ ಕುಮಾರ್ ಅವರನ್ನು ಭೇಟಿಯಾಗಿ ಅವರ ಚುನಾವಣಾ ಪ್ರಚಾರವನ್ನು ಸಮೀಪದಿಂದ ನೋಡಲೆಂದೇ ಮಂಗಳೂರಿನಿಂದ ತೆರಳಿದ್ದ ಉದ್ಯಮಿ ಅಬ್ದುಲ್ ಹಮೀದ್ ಪಚ್ಚೆ ಹಾಗೂ ಅವರ ಮಿತ್ರ ನವಾಝ್ ಜೆಪ್ಪು ಸೋಮವಾರ ಬೆಳಗ್ಗೆ ಕನ್ಹಯ್ಯ ಕುಮಾರ್ ಅವರನ್ನು ಭೇಟಿಯಾಗಿ, ಮಾತನಾಡಿ, ಶುಭ ಹಾರೈಸಿದ್ದಾರೆ.  

"ರವಿವಾರ ಪ್ರಚಾರ ಮುಗಿಸಿ ಕನ್ಹಯ್ಯ ಮನೆಗೆ ತಲುಪುವಾಗ ಮುಂಜಾನೆ ಮೂರು ಗಂಟೆಯಾಗಿತ್ತು. ಆದರೆ ಬೆಳಗ್ಗೆ ಆರು ಗಂಟೆಗೆ ಮತ್ತೆ ಎದ್ದು ಪ್ರಚಾರಕ್ಕೆ ಹೊರಟಿದ್ದರು. ನಾವು ಅವರನ್ನು ಬೆಳಗ್ಗೆ ಏಳೂವರೆಗೆ ಭೇಟಿಯಾಗುವಾಗ ಅವರು ಮನೆಯಿಂದ ಸುಮಾರು ಅರವತ್ತು ಕಿ.ಮೀ. ದೂರ ಕ್ರಮಿಸಿ ಪ್ರಚಾರ ಮಾಡುತ್ತಿದ್ದರು. ಅವರಿಗೆ ಒಂದು ನಿಮಿಷದ ಪುರುಸೊತ್ತಿಲ್ಲ. ಆದರೂ ನಾವು ಮಂಗಳೂರಿನಿಂದ ಬಂದಿದ್ದೇವೆ ಎಂದಾಗ ಕೆಲವು ನಿಮಿಷ ಮಾತನಾಡಿದರು. ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ದೇಶದ ವಿವಿಧೆಡೆಗಳಿಂದ ಜನರು ಸ್ವಂತ ಖರ್ಚಿನಲ್ಲಿ ಅಲ್ಲಿಗೆ ಬಂದು ಅವರಿಗಾಗಿ ಪ್ರಚಾರ ಮಾಡುತ್ತಿದ್ದಾರೆ. ನಾವು ಅವರಿಗೆ ಶುಭ ಕೋರಿದೆವು. ಮಂಗಳೂರಿನ ಗೇರುಬೀಜ ಕೊಟ್ಟೆವು. 'ವಾರ್ತಾಭಾರತಿ'ಯಲ್ಲಿ ಇತ್ತೀಚಿಗೆ ಪ್ರಕಟವಾಗಿದ್ದ ಅವರ ಸಂದರ್ಶನ, ಲೇಖನಗಳನ್ನು ತೋರಿಸಿದೆವು"  ಎಂದು ಅಬ್ದುಲ್ ಹಮೀದ್ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News