ಉಡುಪಿ ಜಿಲ್ಲಾದ್ಯಂತ ಅರೆಸೇನಾ ಪಡೆಗಳಿಂದ ಪಥ ಸಂಚಲನ

Update: 2019-04-15 10:11 GMT

ಉಡುಪಿ, ಎ.15: ಲೋಕಸಭಾ ಚುನಾವಣಾ ಸಂಬಂಧ ಮತದಾರರಲ್ಲಿ ಧೈರ್ಯ ತುಂಬುವ ನಿಟ್ಟಿನಲ್ಲಿ ಎ.15ರಂದು ಉಡುಪಿ ಜಿಲ್ಲಾದ್ಯಂತ ಕೆಎಸ್ ಆರ್‌ಪಿ, ಡಿಎಆರ್, ಅರೆ ಸೇನಾ ಪಡೆಗಳಿಂದ ಪಥಸಂಚಲನ ನಡೆಯಿತು.

ಮಲ್ಪೆ ಠಾಣಾ ವ್ಯಾಪ್ಯಿಯ ಕೆಮ್ಮಣ್ಣು ಹೂಡೆ ಹಾಗೂ ಗುಜ್ಜರಬೆಟ್ಟುವಿನಲ್ಲಿ ನಡೆದ ರೂಟ್ ಮಾರ್ಚ್‌ನಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್, ಹೆಚ್ಚುವರಿ ಎಸ್ಪಿಕುಮಾರಚಂದ್ರ, ಉಡುಪಿ ಡಿವೈಎಸ್ಪಿ ಟಿ.ಆರ್.ಜೈಶಂಕರ್, ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ, ಮಹಿಳಾ ಠಾಣಾ ನಿರೀಕ್ಷಕ ಸಂಪತ್ ಕುಮಾರ್, ಮಣಿಪಾಲ ಠಾಣಾ ನಿರೀಕ್ಷಕ ಸುನೀಲ್ ಕುಮಾರ್, ಡಿಎಆರ್‌ನ ಆರ್‌ಪಿಐ ಆನಂದ ಕುಮಾರ್, ತಾಲೂಕು ದಂಡಾಧಿಕಾರಿ ಪ್ರದೀಪ್ ಕುರುಡೇಕರ್ ಭಾಗವಹಿಸಿದ್ದರು.

ಅದೇರೀತಿ ಉಡುಪಿ ನಗರದ ಜೋಡುಕಟ್ಟೆಯಿಂದ ಕೋರ್ಟ್ ರಸ್ತೆ, ಕೆಎಂ ಮಾರ್ಗ, ಸರ್ವಿಸ್, ಸಿಟಿ ಬಸ್ ನಿಲ್ದಾಣ, ಕಲ್ಸಂಕ ಮಾರ್ಗವಾಗಿ ಕಡಿಯಾಳಿ, ಕುಂಜಿಬೆಟ್ಟು ಎಂಜಿಎಂ ಕಾಲೇಜಿನವರೆಗೆ ಪಥ ಸಂಚಲನ ನಡೆಯಿತು. ಈ ಸಂದರ್ಭದಲ್ಲೂ ಹಿರಿಯ ಪೊಲೀಸ್ ಅಧಿಕಾರಿ, ಉಡುಪಿ ಉಪವಿಭಾಗದ ಪಿಎಸ್ಸೈ ಹಾಗೂ ಸಿಬ್ಬಂದಿ, ಡಿಎಆರ್ ಬ್ಯಾಂಡ್ ತಂಡ, ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಮತ್ತು ಸಿಬ್ಬಂದಿ ಹಾಜರಿದ್ದರು.

ಅಲ್ಲದೆ ಕುಂದಾಪುರ ಉಪವಿಭಾಗದ ಎಂಕೋಡಿ, ಕಂಡ್ಲೂರು, ಕಾರ್ಕಳ ಉಪವಿಭಾಗದ ಕಾಪು ಪೊಲಿಪು, ಮೂಳೂರು, ಪಡುಬಿದ್ರೆ, ಕನ್ನಂಗಾರ್, ಹೆಬ್ರಿ ಪೇಟೆ, ಬೈಲೂರಿನಿಂದ ಕುಕ್ಕಂದೂರು ವರಗೆ ಅರೆಸೇನಾ ಪಡೆ ಹಾಗೂ ಪೊಲೀಸ್ ಪಡೆಯ ಪಥ ಸಂಚಲನ ನಡೆಯಲಿದೆ.

‘ಉಡುಪಿ ಜಿಲ್ಲೆಯ ಕಾರ್ಕಳ ಹಾಗೂ ಉಡುಪಿ ಉಪವಿಭಾಗಕ್ಕೆ ಎರಡು ಅರೆ ಸೇನಾ ಪಡೆಯ ಎರಡು ತುಕಡಿಗಳು ಆಗಮಿಸಿದ್ದು, ಒಂದು ತುಕಡಿಯಲ್ಲಿ 80 ಸಿಬ್ಬಂದಿಯಿರುತ್ತಾರೆ. ಉಡುಪಿಯ ತುಕಡಿಯಲ್ಲಿ ಕುಂದಾಪುರಕ್ಕೆ ವಿಭಾಗ ಮಾಡಿ ಸಿಬ್ಬಂದಿಯನ್ನು ಕಳುಹಿಸಿಕೊಡಲಾಗುವುದು. ಅರೆ ಸೇನಾ ಪಡೆಯ ಸಿಬ್ಬಂದಿ ಸೂಕ್ಷ್ಮ ಮತಗಟ್ಟೆ ಹಾಗೂ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಿಸಲಿರುವರು’ ಎಂದು ಜಿಲ್ಲಾ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News