ದ್ವಿತೀಯ ಪಿಯು ಪರೀಕ್ಷೆ: ವಿಜ್ಞಾನ ವಿಭಾಗದಲ್ಲಿ ಉಡುಪಿಯ ಸ್ವಾತಿ ರಾಜ್ಯಕ್ಕೆ ತೃತೀಯ ರ್ಯಾಂಕ್

Update: 2019-04-15 10:48 GMT

ಉಡುಪಿ, ಎ.15: ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿ ಸ್ವಾತಿ 592(ಶೇ.98.66) ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಮೂರನೆ ಸ್ಥಾನ ಗಳಿಸಿದ್ದಾರೆ.

ಅಂಬಾಗಿಲು ಮಹಾಲಕ್ಷ್ಮೀ ನಗರದ ಉದಯ ಶಂಕರ್ ನಾಯಕ್ ಹಾಗೂ ಗಿರಿಜಾ ನಾಯಕ್ ದಂಪತಿ ಪುತ್ರಿ ಸ್ವಾತಿ, ಇಂಗ್ಲಿಷ್‌ನಲ್ಲಿ 96, ಹಿಂದಿಯಲ್ಲಿ 98, ಭೌತಶಾಸ್ತ್ರದಲ್ಲಿ 99, ಗಣಿತದಲ್ಲಿ 100, ರಾಸಾಯನಶಾಸ್ತ್ರದಲ್ಲಿ 100, ಕಂಪ್ಯೂಟರ್ ಸೈಯನ್ಸ್‌ನಲ್ಲಿ 99 ಅಂಕಗಳನ್ನು ಪಡೆದಿದ್ದಾರೆ.

ಉಡುಪಿ ಸಂತೆಕಟ್ಟೆಯ ವೌಂಟ್ ರೊಸಾರಿಯೋ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದು, ಎಸೆಸೆಲ್ಸಿಯಲ್ಲಿ 618(ಶೇ.98.88) ಅಂಕಗಳನ್ನು ಗಳಿಸಿದ್ದರು.

ಉದಯ ಶಂಕರ್ ಬೆಂಗಳೂರಿನ ಗಾಂಧಿ ನಗರ ಸಿಂಡಿಕೇಟ್ ಬ್ಯಾಂಕಿನಲ್ಲಿ ಮೆನೇಜರ್ ಆಗಿದ್ದು, ತಾಯಿ ಗಿರಿಜಾ, ಕುಂಜಿಬೆಟ್ಟು ಯುಪಿ ಎಂಸಿ ಕಾಲೇಜಿನಲ್ಲಿ ಕ್ಲಾರ್ಕ್ ಆಗಿ ದುಡಿಯುತ್ತಿದ್ದಾರೆ. ಸ್ವಾತಿಯ ಅಕ್ಕ ಶ್ವೇತಾ ಬಂಟಕಲ್ ಶ್ರೀಮಧ್ವ ವಾದಿರಾಜ ಇಂಜಿನಿಯರ್ ಕಾಲೇಜಿನಲ್ಲಿ ಮೂರನೆ ವರ್ಷದ ಕಂಪ್ಯೂಟರ್ ಸೈಯನ್ಸ್ ಕಲಿಯುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸ್ವಾತಿ, ದೇವರ ದಯೆ, ತಂದೆ ತಾಯಿ, ಅಕ್ಕ, ಗೆಳೆಯರು, ಉಪನ್ಯಾಸಕರುಗಳ ಪ್ರೋತ್ಸಾಹದಿಂದ ನನಗೆ ಈ ಸಾಧನೆ ಮಾಡಲು ಸಾಧ್ಯವಾಯಿತು. ಮುಂದೆ ಸಿಇಟಿ ಪರೀಕ್ಷೆ ಬರೆದು ಕಂಪ್ಯೂಟರ್ ಸೈಯನ್ಸ್‌ನಲ್ಲಿ ಇಂಜಿನಿಯರ್ ಕಲಿಯಬೇಕೆಂಬ ಆಸೆ ಹೊಂದಿದ್ದೇನೆ. ಮುಂದೆ ಇಂಜಿನಿಯರ್ ಆಗಬೇಕೆಂಬುದೇ ನನ್ನ ಕನಸು ಎಂದು ತಿಳಿಸಿದರು.

ಓದುವ ಮಧ್ಯೆ ಚಿತ್ರಕಲೆ

ಪಿಯುಸಿ ಫಲಿತಾಂಶ ಬೇಗನೆ ಪ್ರಕಟಗೊಂಡಿರುವುದರಿಂದ ಸಿಇಟಿ ಪರೀಕ್ಷೆ ಬರೆಯಲು ನನ್ನ ಆತ್ಮವಿಶ್ವಾಸ ಹೆಚ್ಚಾಗಿದೆ. ಪೂರ್ವ ತಯಾರಿಗೂ ಅನುಕೂಲ ವಾಗಿದೆ. ಗಣಿತ ನಾನು ತುಂಬಾ ಇಷ್ಟ ಪಡುವ ಸಬ್ಜೆಕ್ಟ್. ಚಿತ್ರಕಲೆ ನನ್ನ ಹವ್ಯಾಸವಾಗಿದ್ದು, ನಿರಂತರ ಓದುವಾಗ ಬೋರ್ ಆದರೆ ಅದರ ಮಧ್ಯೆ ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಇದರಿಂದ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ನಂತರ ಮತ್ತೆ ಓದು ಮುಂದುವರಿಸುತ್ತೇನೆ. ಪಠ್ಯದ ಜೊತೆ ಮ್ಯಾಗಝಿನ್, ದಿನಪತ್ರಿಕೆ ಕೂಡ ಓದುತ್ತೇನೆ ಎಂದು ಸ್ವಾತಿ ತಿಳಿಸಿದರು.

595ಕ್ಕಿಂತ ಹೆಚ್ಚು ಅಂಕ ಪಡೆಯುವ ನಿರೀಕ್ಷೆ ಹೊಂದಿದ್ದೆ. ಆರಂಭದಲ್ಲಿ ದಿನಕ್ಕೆ ಒಂದು ಗಂಟೆ, ಮಧ್ಯಾವಧಿಯ ಬಳಿಕ ಪ್ರತಿದಿನ ಮೂರು ಗಂಟೆ, ಪೂರ್ವಸಿದ್ಧತಾ ಪರೀಕ್ಷೆಯ ಬಳಿಕ ದಿನಪೂರ್ತಿ ಓದುತ್ತಿದ್ದೆ. ಇದರ ಜೊತೆ ಕೋಚಿಂಗ್ ತರಗತಿಗೂ ಹೋಗುತ್ತಿದ್ದೆ. ರಾಸಾಯನಶಾಸ್ತ್ರ ಪರೀಕ್ಷೆ ತುಂಬಾ ಕಷ್ಟವಿದ್ದರೂ ತುಂಬಾ ಓದಿದ ಪರಿಣಾಮವಾಗಿ ಯಾವುದೇ ತೊಂದರೆ ಆಗಿಲ್ಲ. ಈ ರೀತಿ ಓದಿರುವುದರಿಂದ ನನಗೆ ಇಷ್ಟು ಅಂಕ ಗಳಿಸಲು ಸಾಧ್ಯವಾಗಿದೆ ಎಂದರು.

ದಿನಕ್ಕೆ ಒಂದು ಗಂಟೆ ಮಾತ್ರ ಟಿವಿ ನೋಡುತ್ತಿದ್ದೆ. ಫೇಸ್‌ಬುಕ್‌ನಲ್ಲಿ ನಾನು ಈವರೆಗೆ ಖಾತೆ ತೆರೆದಿಲ್ಲ. ಆದರೆ ವಾಟ್ಸ್ ಆ್ಯಪ್ ಬಳಕೆ ಮಾಡುತ್ತಿದ್ದೇನೆ. ಪರೀಕ್ಷೆ ಸಮಯದಲ್ಲಿ ಅಧ್ಯಯನಕ್ಕೆ ಸಂಬಂಧಿಸಿ ಮಾತ್ರ ವಾಟ್ಸ್ ಆ್ಯಪ್ ಉಪಯೋಗಿಸುತ್ತಿದ್ದೆ. ಅದು ಬಿಟ್ಟು ಗೆಳೆಯರ ಜೊತೆ ಹರಟೆ ಮಾಡುತ್ತಿರಲಿಲ್ಲ. ಪ್ರತಿದಿನ ಮನೆಯಲ್ಲಿ ದೇವರ ಭಜನೆ ಮಾಡುತ್ತೇನೆ ಎಂದು ಅವರು ಹೇಳಿದರು.

ಕಠಿಣ ಶ್ರಮ ಹಾಗೂ ಟೈಮ್‌ಟೇಬಲ್ ಪ್ರಕಾರ ಪ್ರತಿದಿನ ನಾನು ಓದುತ್ತಿದ್ದೆ. ಪರೀಕ್ಷೆ ಸಂದರ್ಭದಲ್ಲೂ ಯಾವುದೇ ಒತ್ತಡ ಇಲ್ಲದೆ ಕೂಲ್ ಆಗಿ ಇರುತ್ತೇನೆ. ಅದಕ್ಕೆ ತಕ್ಕ ಪ್ರತಿಫಲ ಪರೀಕ್ಷೆಯಲ್ಲಿ ನನಗೆ ಸಿಕ್ಕಿದೆ. ದೇವರ ದಯೆಯಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಅವರು ತಿಳಿಸಿದರು.


‘ನಾವು ಪುಣ್ಯವಂತರು’
‘ಮಗಳ ಈ ಸಾಧನೆ ಕೇಳಿ ತುಂಬಾ ಸಂತೋಷವಾಗಿದೆ. ಇಂತಹ ಮಗಳನ್ನು ಪಡೆದ ನಾವು ನಿಜವಾಗಿಯೂ ಪುಣ್ಯವಂತರು. ನಾನು, ನನ್ನ ಪತಿ ಹಾಗೂ ಮಗಳು ಅವಳಿಗೆ ತುಂಬಾ ಪ್ರೋತ್ಸಾಹ ನೀಡಿದ್ದೇವು. ನಾವು ಯಾರು ಕೂಡ ಅವಳಿಗೆ ಓದುವಂತೆ ಒತ್ತಡ ಹಾಕಿಲ್ಲ. ಅವಳ ಇಷ್ಟದಂತೆ ಓದಿ, ಅವಳ ಪ್ರಯತ್ನ ಫಲದಿಂದಲೇ ಈ ಸಾಧನೆ ಮಾಡಲು ಸಾಧ್ಯವಾಗಿದೆ’ ಎಂದು ಸ್ವಾತಿ ತಾಯಿ ಗಿರಿಜಾ ನಾಯಕ್ ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News