ಅಮೆರಿಕ: ಮುಸ್ಲಿಮ್ ಸಂಸದೆಗೆ ಹೆಚ್ಚಿನ ಭದ್ರತೆಗೆ ಹೌಸ್ ಸ್ಪೀಕರ್ ಆದೇಶ

Update: 2019-04-15 16:16 GMT

ವಾಶಿಂಗ್ಟನ್, ಎ. 15: ಮುಸ್ಲಿಮ್ ಸಂಸದೆ ಇಲ್ಹಾನ್ ಉಮರ್ ಮತ್ತು ಅವರ ಕುಟುಂಬ ಸದಸ್ಯರ ಭದ್ರತೆಯನ್ನು ಮರುಪರಿಶೀಲಿಸುವಂತೆ ಅಮೆರಿಕ ಸಂಸತ್ತಿನ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಆದೇಶ ನೀಡಿದ್ದಾರೆ.

ಇಲ್ಹಾನ್ ಉಮರ್ ಮಾತನಾಡುವ ವೀಡಿಯೊ ಮತ್ತು 9/11 ದಾಳಿಯ ವೀಡಿಯೊ ತುಣುಕುಗಳನ್ನು ಜೊತೆಯಾಗಿ ಟ್ವೀಟ್ ಮಾಡುವ ಮೂಲಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಸ್ಲಿಮ್ ಸಂಸದೆಯ ಪ್ರಾಣವನ್ನು ಅಪಾಯಕ್ಕೆ ಗುರಿಪಡಿಸಿದ್ದಾರೆ ಎಂಬುದಾಗಿ ಅವರು ಆರೋಪಿಸಿದ್ದಾರೆ.

ಮಿನಸೋಟವನ್ನು ಪ್ರತಿನಿಧಿಸುವ ಡೆಮಾಕ್ರಟಿಕ್ ಸಂಸದೆಯ ವೀಡಿಯೊ ತುಣುಕನ್ನು ಟ್ವಿಟರ್‌ನಿಂದ ತೆಗೆಯುವಂತೆ ಪ್ರಬಲ ಹೇಳಿಕೆಯೊಂದರಲ್ಲಿ ಪೆಲೋಸಿ, ಟ್ರಂಪ್‌ನ್ನು ಒತ್ತಾಯಿಸಿದ್ದಾರೆ.

''ಅಧ್ಯಕ್ಷರ ಟ್ವೀಟ್ ಬಳಿಕ, ಸಂಸದೆ ಉಮರ್, ಅವರ ಕುಟುಂಬ ಮತ್ತು ಅವರ ಸಿಬ್ಬಂದಿಯ ಭದ್ರತೆಯ ಮರುಪರಿಶೀಲನೆ ನಡೆಸುವಂತೆ ಸಾರ್ಜಂಟ್ ಎಟ್ ಆರ್ಮ್ಸ್‌ಗೆ ಸೂಚಿಸಿದ್ದೇನೆ'' ಎಂದು ಪೆಲೋಸಿ ತಿಳಿಸಿದರು.

''ಅಧ್ಯಕ್ಷರ ಮಾತುಗಳಿಗೆ ಮಹತ್ವವಿರುತ್ತದೆ. ಅವರ ದ್ವೇಷಪೂರಿತ ಹಾಗೂ ಉದ್ರೇಕಕಾರಿ ಮಾತುಗಳು ನಿಜವಾದ ಬೆದರಿಕೆಯನ್ನು ಸೃಷ್ಟಿಸುತ್ತವೆ. ಅಧ್ಯಕ್ಷ ಟ್ರಂಪ್ ತನ್ನ ಅಗೌರವಯುತ ಹಾಗೂ ಅಪಾಯಕಾರಿ ವೀಡಿಯೊವನ್ನು ತೆಗೆಯಬೇಕು'' ಎಂದರು.

ಇತ್ತೀಚೆಗೆ ಜನರ ಗುಂಪೊಂದನ್ನು ಉದ್ದೇಶಿಸಿ ಮಾತನಾಡಿದ್ದ ಇಲ್ಹಾನ್ ಉಮರ್, 2001 ಸೆಪ್ಟಂಬರ್ 11ರಂದು ಅಮೆರಿಕದ ಮೇಲೆ ನಡೆದ ಭಯೋತ್ಪಾದನಾ ದಾಳಿಯನ್ನು ಉಲ್ಲೇಖಿಸುತ್ತಾ, 'ಕೆಲವು ಜನರು ಏನನ್ನೋ ಮಾಡಿದ್ದಾರೆ' ಎಂದು ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ತನಗೆ ಬೆದರಿಕೆಗಳನ್ನು ಹಾಕುವ ಜನರು, ನೇರವಾಗಿ ಟ್ರಂಪ್‌ರ ವೀಡಿಯೊಗಳನ್ನು ಉಲ್ಲೇಖಿಸುತ್ತಿದ್ದಾರೆ ಅಥವಾ ಅವುಗಳಿಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ಇಲ್ಹಾನ್ ಆರೋಪಿಸಿದ್ದಾರೆ.

ಹಿಂಸೆಗೆ ಪ್ರಚೋದನೆ ಆರೋಪ ನಿರಾಕರಿಸಿದ ಟ್ರಂಪ್

ಸಂಸದೆ ಇಲ್ಹಾನ್ ಉಮರ್ ವಿರುದ್ಧ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ ಎಂಬ ಆರೋಪಗಳನ್ನು ಟ್ರಂಪ್‌ರ ವಕ್ತಾರೆ ಸಾರಾ ಸ್ಯಾಂಡರ್ಸ್ ರವಿವಾರ ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News