ಅಂಬೇಡ್ಕರ್ ಸತ್ಯಾಗ್ರಹ ಆರಂಭಿಸಿದ ಗ್ರಾಮದಲ್ಲಿ ದಲಿತರ ವಿರುದ್ಧ ತಾರತಮ್ಯ ಇನ್ನೂ ಜೀವಂತ !

Update: 2019-04-15 17:28 GMT

 ಮುಂಬೈ, ಎ.15: ಮಹಾರಾಷ್ಟ್ರದ ರಾಯ್‌ಗಢ ಜಿಲ್ಲೆಯ ಮಹಾಡ್ ಎಂಬ ಗ್ರಾಮದಲ್ಲಿ 1927ರಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಮೇಲ್ವರ್ಗದ ಜನತೆ ಬಳಸುವ ಬಾವಿಯ ನೀರನ್ನು ದಲಿತರೂ ಉಪಯೋಗಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಸತ್ಯಾಗ್ರಹ ಆರಂಭಿಸಿದ್ದರು.

ಇದೀಗ 91 ವರ್ಷದ ಬಳಿಕವೂ ಮಹಾಡ್ ಗ್ರಾಮದಲ್ಲಿ ದಲಿತರ ಪರಿಸ್ಥಿತಿಯಲ್ಲಿ ಹೆಚ್ಚೇನೂ ಬದಲಾವಣೆ ಆಗಿಲ್ಲ ಎಂದು ಈ ಗ್ರಾಮಕ್ಕೆ ಭೇಟಿ ನೀಡಿದ ‘ಇಂಡಿಯಾ ಟುಡೆ ಟಿವಿ’ ತಂಡ ವರದಿ ಮಾಡಿದೆ. ಮಹಾದ್ ಗ್ರಾಮದ ಸಮೀಪದ ಮುಗ್ವಾಲಿ ಎಂಬ ಹಳ್ಳಿಯಲ್ಲಿ ಮೂರು ದಲಿತ ಕುಟುಂಬಗಳಿವೆ. ಈ ಕುಟುಂಬದವರು ವಾಸಿಸುತ್ತಿರುವ ಸ್ಥಳದ ಸಮೀಪದಲ್ಲೇ ನೀರಿನ ಸಂಪರ್ಕ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಕುಟುಂಬದ ಸದಸ್ಯೆ ಅಂಜನಾ ಮಹಾದೇವ್ ಗಾಯಕ್‌ವಾಡ್‌ರನ್ನು ಪ್ರಶ್ನಿಸಿದಾಗ, ಸುಮಾರು 30 ವರ್ಷಗಳ ಹಿಂದೆ ನಾವು ಅನುಭವಿಸಿದ್ದ ಕಷ್ಟ ಕಾರ್ಪಣ್ಯ ಈಗಿಲ್ಲ. ಆದರೂ ಪರಿಸ್ಥಿತಿಯಲ್ಲಿ ಮಹತ್ತರ ಬದಲಾವಣೆಯಾಗಿಲ್ಲ. ಈಗ ನೀರಿನ ವ್ಯವಸ್ಥೆ ಮಾಡಲಾಗಿದೆ. ಆದರೂ ತಾರತಮ್ಯದ ಧೋರಣೆ ಹಾಗೆಯೇ ಇದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಹಬ್ಬ, ಜಾತ್ರೆ ಅಥವಾ ದಲಿತರ ಮನೆಯಲ್ಲಿ ಶುಭಕಾರ್ಯ ನಡೆದಾಗ ಮೇಲ್ವರ್ಗದ ಜನರ್ಯಾರೂ ತಮ್ಮೊಂದಿಗೆ ಸೇರಿಕೊಳ್ಳುವುದಿಲ್ಲ ಅಥವಾ ಅವರ ಮನೆಯಲ್ಲಿ ನಡೆವ ಶುಭ ಕಾರ್ಯಗಳಿಗೆ ದಲಿತರನ್ನು ಆಹ್ವಾನಿಸುವುದಿಲ್ಲ. ತಮ್ಮೊಂದಿಗೆ ಊಟ ಮಾಡಲೂ ಅವರು ನಿರಾಕರಿಸುತ್ತಿದ್ದಾರೆ. ಆದರೆ ಇದರಿಂದ ತಮ್ಮ ಮೇಲೆ ಏನೂ ಪರಿಣಾಮ ಆಗುವುದಿಲ್ಲ . ನಿಮ್ಮಂತೆಯೇ ನಮ್ಮನ್ನೂ ದೇವರು ಸೃಷ್ಟಿಸಿದ್ದಾನೆ ಎಂದು ಅವರಿಗೆ ಹೇಳುತ್ತೇನೆ ಎಂಬ ಅಂಜನಾರ ಮಾತಿಗೆ ಆಕೆಯ ಎರಡು ಮಕ್ಕಳೂ ಧ್ವನಿಗೂಡಿಸುತ್ತಾರೆ.

ಹಥ್‌ಕೆಲಿ ಬುಧ್‌ವಾಡಿ ಎಂಬ ಪ್ರದೇಶದಲ್ಲಿ 11 ದಲಿತರ ಕುಟುಂಬಗಳಿವೆ. ಇಲ್ಲಿಗೂ ನೀರಿನ ಸಂಪರ್ಕದ ವ್ಯವಸ್ಥೆ ಮಾಡಲಾಗಿದೆ. ಹಿಂದಿನ ತಲೆಮಾರಿನವರು ತಮ್ಮೊಂದಿಗೆ ಬೆರೆಯಲು ನಿರಾಕರಿಸುತ್ತಾರೆ. ಆದರೆ ಈಗಿನ ತಲೆಮಾರಿನವರು ಈ ಕಟ್ಟುಪಾಡುಗಳನ್ನು ಮೀರಿ ನಮ್ಮೊಂದಿಗೆ ಬೆರೆಯುತ್ತಿದ್ದಾರೆ ಎನ್ನುತ್ತಾರೆ ವಿದ್ಯಾರ್ಥಿಗಳಾದ ಅದಿತಿ ಮತ್ತು ಸಾಕ್ಷಿ. ನಮ್ಮ ಹಿರಿಯರು ಬಹಳ ಕಷ್ಟದ ದಿನಗಳನ್ನು ಕಂಡಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಈಗ ಪರಿಸ್ಥಿತಿ ಬಹಳ ಬದಲಾಗಿದೆ. ನಮ್ಮ ಸ್ನೇಹಿತರಲ್ಲಿ ಭೇದಭಾವಕ್ಕೆ ಆಸ್ಪದವಿಲ್ಲ. ಶೇ.80ರಷ್ಟು ಬದಲಾವಣೆಯಾಗಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News