ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ

Update: 2019-04-15 18:12 GMT

ಭುವನೇಶ್ವರ, ಎ. 15: ಒಡಿಶಾ ಖುರ್ದಾ ಪಟ್ಟಣದಲ್ಲಿ ಅಪರಿಚಿತ ದುಷ್ಕರ್ಮಿಗಳು ಸ್ಥಳೀಯ ಬಿಜೆಪಿ ನಾಯಕರೊಬ್ಬರನ್ನು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಖುರ್ದಾ ರೆನ್-9ರ ಬಿಜೆಪಿ ಮಂಡಲ ಅಧ್ಯಕ್ಷ ಮಂಗುಲಿ ಜೇನಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಈ ಘಟನೆ ರವಿವಾರ ಮಧ್ಯರಾತ್ರಿ ನಡೆದಿದೆ. ಖುರ್ದಾ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾಲು ಚರಣ್ ಖಂಡ್ಯಾತ್ ಅವರ ನಿವಾಸದ ಸಮೀಪ ನಿಂತುಕೊಂಡು ಬಿಜೆಪಿ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಬೈಕ್‌ನಲ್ಲಿ ಆಗಮಿಸಿದ ದುಷ್ಕರ್ಮಿಗಳು ಜೇನಾ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿದರು. ಇದರಲ್ಲಿ ಎರಡು ಗುಂಡುಗಳು ಜೇನಾ ಅವರಿಗೆ ತಗುಲಿ ಗಂಭೀರ ಗಾಯಗೊಂಡರು. ಕೂಡಲೇ ಅವರನ್ನು ಖುರ್ದಾ ಜಿಲ್ಲೆ ಕೇಂದ್ರ ಕಚೇರಿಯಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಕೂಡಲೇ ಪ್ರಕರಣ ದಾಖಲಿಸಿ ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಯ ಹಿಂದಿನ ಕಾರಣ ಇದುವರೆಗೆ ತಿಳಿದುಬಂದಿಲ್ಲ. ಈ ನಡುವೆ ಜಿಲ್ಲಾ ಬಿಜೆಪಿ ಘಟಕ ಜೇನಾ ಅವರ ಹತ್ಯೆ ವಿರೋಧಿಸಿ ಬೆಳಗ್ಗೆ 8 ಗಂಟೆಯಿಂದ ಅಪರಾಹ್ನ 2ರ ವರೆಗೆ ಖುರ್ದಾ ಬಂದ್‌ಗೆ ಕರೆ ನೀಡಿತ್ತು. ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸುವಂತೆ ಹಾಗೂ ಶಾಂತಿ ಕಾಪಾಡುವಂತೆ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರಲ್ಲಿ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News