ಎಪ್ರಿಲ್ 26ರಂದು ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ ?

Update: 2019-04-15 18:19 GMT

ಲಕ್ನೊ, ಎ.15: ವಾರಾಣಸಿ ಸಂಸದೀಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಪ್ರಧಾನಿ ನರೇಂದ್ರ ಮೋದಿ ಎಪ್ರಿಲ್ 26ರಂದು ನಾಮಪತ್ರ ಸಲ್ಲಿಸುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ನಾಮಪತ್ರ ಸಲ್ಲಿಕೆಗೂ ಮುನ್ನ ಕ್ಷೇತ್ರದಲ್ಲಿ ಮೋದಿ ಎರಡು ರೋಡ್ ಶೋಗಳಲ್ಲಿ ಪಾಲ್ಗೊಳ್ಳಿದ್ದಾರೆ. ಎರಡು ದಿನ ವಾರಾಣಸಿಯಲ್ಲಿರುವ ಮೋದಿ ಬೃಹತ್ ಚುನಾವಣಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಗರಕ್ಕೆ ಎಪ್ರಿಲ್ 25ರಂದು ಆಗಮಿಸುವ ಅವರು ಬಳಿಕ ಬನಾರಸ್ ಹಿಂದು ವಿವಿಯಿಂದ ದಶಾಶ್ವಮೇಧ್ ಘಾಟ್‌ವರೆಗೆ ನಡೆಯಲಿರುವ ರೋಡ್‌ಶೋದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಕಾಲಭೈರವ ದೇವಸ್ಥಾನಕ್ಕೆ ತೆರಳಿ ಅಲ್ಲಿ ಗಂಗಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ನಂತರ ಪಕ್ಷದ ಕಾರ್ಯಕರ್ತರು ಹಾಗೂ ಬುದ್ಧಿಜೀವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಮರುದಿನ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮತ್ತೊಂದು ರೋಡ್‌ಶೋನಲ್ಲಿ ಭಾಗವಹಿಸಿ ನಂತರ ನಾಮಪತ್ರ ಸಲ್ಲಿಸುವ ನಿರೀಕ್ಷೆಯಿದೆ. ವಾರಾಣಸಿಯಲ್ಲಿ ಮೇ 19ರಂದು ಮತದಾನ ನಡೆಯಲಿದೆ. 2014ರಲ್ಲಿ ಗುಜರಾತ್‌ನ ವಡೋದರ ಹಾಗೂ ಉತ್ತರಪ್ರದೇಶದ ವಾರಾಣಸಿಯಲ್ಲಿ ಸ್ಪರ್ಧಿಸಿದ್ದ ಮೋದಿ ಎರಡೂ ಕ್ಷೇತ್ರದಲ್ಲಿ ಗೆದ್ದ ಬಳಿಕ ವಡೋದರ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ವಾರಾಣಸಿಯಲ್ಲಿ ಮೋದಿಯೆದುರು ಸ್ಪರ್ಧಿಸಿದ್ದ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ ಕೇಜ್ರೀವಾಲ್ 3.37 ಲಕ್ಷ ಮತಗಳ ಬೃಹತ್ ಅಂತರದಿಂದ ಸೋಲುಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News