ಜಿಲ್ಲೆಯಲ್ಲಿ ಅಭಿವೃದ್ಧಿ, ನೆಮ್ಮದಿಯ ಜೀವನಕ್ಕಾಗಿ ಮಿಥುನ್ ರೈ ಆಯ್ಕೆ ಅನಿವಾರ್ಯ: ಫಾರೂಕ್ ಉಳ್ಳಾಲ್

Update: 2019-04-16 05:36 GMT
ಮಿಥುನ್ ರೈ

ಮಂಗಳೂರು, ಎ.16: ಕಳೆದ ಹತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ದ.ಕ. ಜಿಲ್ಲೆಯ ಸರ್ವತ್ತೋಮುಖ ಅಭಿವೃದ್ಧಿ ಮತ್ತು ಮರೀಚಿಕೆಯಾಗಿರುವ ಶಾಂತಿ -ಸಾಮರಸ್ಯದ ಜನ ಜೀವನವನ್ನು ತುಳುನಾಡಿನಲ್ಲಿ ಜೀವನವನ್ನು ಮರಳಿ ಸ್ಥಾಪಿಸಲು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನಿಂದ ಮಾತ್ರ  ಸಾಧ್ಯ ಎಂಬ ಖಚಿತ ನಿರ್ಧಾರ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಬಲಗೊಳ್ಳುತ್ತಿದೆ. ದ.ಕ. ಜಿಲ್ಲೆಯ ಮುಂದಿನ ಸಂಸದರಾಗಿ ಮಿಥುನ್ ರೈ ಆಯ್ಕೆಗೊಳ್ಳುವುದು ಖಚಿತ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 ಜಿಲ್ಲೆಯಲ್ಲಿ ಆಗಾಗ ಉಂಟಾಗುತ್ತಿರುವ ಕೋಮುಗಲಭೆ ಮತ್ತು ಅಭಿವೃದ್ಧಿ ಬಗೆಗಿನ ನಿರ್ಲಕ್ಷ್ಯಕ್ಕೆ ಬಿಜೆಪಿ ಮತ್ತು ಸಂಸದ ನಳಿನ್ ಕುಮಾರ್ ಕಟೀಲು ನೇರ ಹೊಣೆ ಎಂಬ ವಾಸ್ತವಾಂಶ ಜಿಲ್ಲೆಯ ಬಹುಜನರಿಗೆ ಅರಿವಾಗಿದೆ. ಲೋಕಸಭೆಯಲ್ಲಿ ಸುಶಿಕ್ಷಿತರಲ್ಲದ ಹಾಗೂ ಅಭಿವೃದ್ಧಿ ಪರ ಚಿಂತನೆಗಳಿಲ್ಲದ ಪ್ರತಿನಿಧಿಯಿಂದಾಗಿಯೇ ಒಂದು ಕಾಲದಲ್ಲಿ ಬೆಂಗಳೂರಿಗೆ ಸರಿಸಮಾನವಾಗಿ ಬೆಳವಣಿಗೆ ಕಂಡಿದ್ದ ಮಂಗಳೂರು ಇಂದು ದೇಶದ ಹಿಂದುಳಿದ ಪ್ರದೇಶಗಳ ಸಾಲಿಗೆ ಸೇರುವಂತಾಗಿವೆ. ವ್ಯಾಪಕ ಉದ್ಯೋಗ ಅವಕಾಶ ಕೊಡ ಬಲ್ಲ ಬೃಹತ್ ಕಂಪೆನಿಗಳು ಜಿಲ್ಲೆಗೆ ಬರಲು ಹಿಂದೇಟು ಹಾಕುತ್ತಿವೆ. ಸುಲಿಗೆ- ವಂಚನೆ, ಹಲ್ಲೆ- ಕೊಲೆಗಳು ಇಲ್ಲದ, ಸಾಮರಸ್ಯ ತುಂಬಿದ  ಪ್ರಶಾಂತ ವಾತಾವರಣವನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗದ ದಕ್ಷಿಣ ಕನ್ನಡದ ಇಂದಿನ ವಿದ್ಯಾಮಾನಗಳಿಗೆ ಜನವಿರೋಧಿ, ಕೋಮುವಾದಿ ಹಾಗೂ ಪೂರ್ವಾಗ್ರಹ ಪೀಡಿತ ಬಿಜೆಪಿ ನಿಲುವು ಗಳೇ ಕಾರಣ ಎಂದು ಫಾರೂಕ್ ಉಳ್ಳಾಲ್  ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 ಕಾಂಗ್ರೆಸ್ ಪಕ್ಷದ  ಸಂಸದರಾಗಿದ್ದ ಉಳ್ಳಾಲ ಶ್ರೀನಿವಾಸ ಮಲ್ಯ, ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿಯವರು ತುಳುನಾಡಿಗೆ ನೀಡಿದ ಮಹತ್ತರ ಕೊಡುಗೆಗಳಂತಹ ಒಂದೇ ಒಂದು ದೀರ್ಘ ಕಾಲೀನ ಫಲಪ್ರದ ಯೋಜನೆಗಳನ್ನು ಕೊಡಲು ಸಾಧ್ಯವಾಗದ ಪ್ರಧಾನಿ ನರೇಂದ್ರ ಮೋದಿಯವರ ಬಿಜೆಪಿ ಆಡಳಿತ, ಜಿಲ್ಲೆಯ ಅಭಿಮಾನದ ಹೆಗ್ಗುರುತಾಗಿರುವ ಮಂಗಳೂರು ವಿಮಾನ ನಿಲ್ದಾಣ, ಮಂಗಳೂರು ಸರ್ವ ಋತು ಬಂದರು,ಗಳನ್ನು ಖಾಸಗಿ ಸಂಸ್ಥೆಗಳಿಗೆ ನೀಡಿರುವುದು,  'ವಿಜಯ ಬ್ಯಾಂಕ್ ' ನ್ನು ಗುಜರಾತ್ ಮೂಲದ 'ಬರೋಡ ಬ್ಯಾಂಕ್'ನೊಂದಿಗೆ ವಿಲೀನಗೊಳಿಸಿ 'ತೌಳವ ಹಿರಿಮೆ'ಯನ್ನೇ ಇಲ್ಲವಾಗಿಸಿರುವ ಮೋದಿ ಸರಕಾರದ ಕ್ರಮ ಮತ್ತು ಇದನ್ನು ತಡೆಯಲಾಗದ ನಳಿನ್ ಕುಮಾರ್ ಕಟೀಲ್ ರ ಅಸಹಾಯಕತೆಯ ಕುರಿತು ಜಿಲ್ಲೆಯ ಮೂಲೆ ಮೂಲೆಗಳಲ್ಲೂ ಜನ ಆಕ್ರೋಶ ವ್ಯಕ್ತ ಪಡಿಸುವುದು ಕಂಡುಬರುತ್ತಿವೆ. ಆದ್ದರಿಂದ ವಿದ್ಯಾವಂತ -ಪ್ರಗತಿಪರ ಚಿಂತನೆಯುಳ್ಳ, ಸ್ವಧರ್ಮ ವನ್ನು ಪಾಲಿಸಿ, ಇತರ ಮತಗಳನ್ನು  ಗೌರವಿಸುವ  ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಯವರಿಗೆ ಜಿಲ್ಲೆಯ ಬಹು ಜನರು ಮತದಾನ ಮಾಡಲಿದ್ದಾರೆ ಎಂದೂ ಫಾರೂಕ್ ಉಳ್ಳಾಲ್ ಪತ್ರಿಕಾ ಹೇಳಿಕೆಯಲ್ಲಿ  ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News