ಮೋದಿ, ರಾಹುಲ್ ವಿರುದ್ಧ ಪಕ್ಷೇತರನಾಗಿ ಸ್ಪರ್ಧೆ: ಸುದ್ದಿ ಬಿಡುಗಡೆಯ ಸಂಪಾದಕ ಡಾ.ಯು.ಪಿ.ಶಿವಾನಂದ ಘೋಷಣೆ

Update: 2019-04-16 07:08 GMT

ಮಂಗಳೂರು, ಎ.16: ಆಡಳಿತವು ‘ದಿಲ್ಲಿಯಿಂದ ಹಳ್ಳಿಗಲ್ಲ, ಹಳ್ಳಿಯಿಂದ ದಿಲ್ಲಿಗೆ’ ಎಂಬುದನ್ನು ಪ್ರತಿಪಾದಿಸುವ ಸಲುವಾಗಿ ರಾಷ್ಟ್ರದ ಪ್ರಮುಖ ನಾಯಕರಾದ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯ ವಿರುದ್ಧ ಸ್ಪರ್ಧಿಸುವುದಾಗಿ ಸುಳ್ಯ ಮೂಲದ ‘ಸುದ್ದಿ ಬಿಡುಗಡೆ’ ಪತ್ರಿಕೆಯ ಪ್ರಧಾನ ಸಂಪಾದಕ ಡಾ.ಯು.ಪಿ.ಶಿವಾನಂದ ಘೋಷಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿಯ ಗ್ರಾಮ ಸ್ವರಾಜ್ಯ ಮತ್ತು ರಾಮರಾಜ್ಯದ ಕನಸನ್ನು ನನಸು ಮಾಡುವ ಸಲುವಾಗಿ ತಾನು ಜನಜಾಗೃತಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಬಲತ್ಕಾರದ ಭಾರತ್ ಬಂದ್ ಮತ್ತು ನೇತ್ರಾವತಿ ನದಿ ತಿರುವು ಯೋಜನೆಯ ವಿರುದ್ಧವೂ ಗ್ರಾಮೀಣ ಭಾಗದಲ್ಲಿ ತನ್ನದೇ ಆದ ರೀತಿಯಲ್ಲಿ ಹೋರಾಟ ಮಾಡುತ್ತಾ ಬಂದಿದ್ದೇನೆ. ವಸ್ತುಸ್ಥಿತಿಯ ಅರಿವು ಇದ್ದರೂ ಕೂಡ ಸ್ಥಳೀಯ ನಾಯಕರು ದಿಲ್ಲಿ ರಾಜಕಾರಣದ ವಿರುದ್ಧ ಸೊಲ್ಲೆತ್ತಲಾಗದೆ ಪರಿತಪಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿಯಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ನಾಯಕರಿಗಿಂತಲೂ ರಾಷ್ಟ್ರಮಟ್ಟದ ನಾಯಕರ ಗಮನಸೆಳೆಯುವ ಸಲುವಾಗಿ ತಾನು ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಪಕ್ಷೇತರನಾಗಿ ಸ್ಪರ್ಧೆ ಮಾಡುವುದಾಗಿ ತಿಳಿಸಿದರು.

ಈ ಬಗ್ಗೆ ತಾನು ಈಗಾಗಲೆ ಸಮಾನಮನಸ್ಕರು, ಚಿಂತಕರ ಜೊತೆ ಸಮಾಲೊಚನೆ ಮಾಡಿದ್ದೇನೆ. ಅಮೇಠಿಗೆ ತೆರಳಿ ಅಲ್ಲಿನ ಜನರೊಂದಿಗೆ ಚರ್ಚೆ ನಡೆಸಿದ್ದೇನೆ. ಮುಂದೆ ವಾರಣಾಸಿಗೂ ತೆರಳುವೆ. ಈ ಎರಡೂ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿ ಬಳಿಕ ಅಲ್ಲೇ ಪ್ರಚಾರ ಕಾರ್ಯ ಮಾಡಲಿದ್ದೇನೆ ಎಂದು ಡಾ.ಯು.ಪಿ.ಶಿವಾನಂದ ಹೇಳಿದರು.

ದೇಶಕ್ಕೆ ಸ್ವಾತಂತ್ರ ಬಂದು 70 ವರ್ಷಗಳಾದರೂ ಬ್ರಿಟಿಷರ ಕಾಲದ ಆಡಳಿತದ ದಾಸ್ಯದಿಂದ ನಾವು ಮುಕ್ತವಾಗಿಲ್ಲ. ಬಹುತೇಕ ಕಾನೂನುಗಳಲ್ಲೂ ಬ್ರಿಟಿಷರ ಕಾಲದ ಆಡಳಿತ ಛಾಯೆ ಇದೆ. ಇಲ್ಲಿ ಪ್ರಜೆಗಳೇ ಪ್ರಭುಗಳಾಗಿಲ್ಲ. ನಮ್ಮ ಧ್ವನಿಯಾಗಲು ನಾವು ಆಯ್ಕೆ ಮಾಡಿದ ಜನಪ್ರತಿನಿಧಿಯು ದಿಲ್ಲಿಯ ಆದೇಶಗಳಿಗೆ ಕಾಯುವಂತಹ ಪರಿಸ್ಥಿತಿ ಇದೆ. ಇದನ್ನು ಹೋಗಲಾಡಿಸಬೇಕಿದೆ. ಈ ನಿಟ್ಟಿನಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿರುವೆ. ದೇಶದ ರಾಜಧಾನಿ ಹೊಸದಿಲ್ಲಿಯಿಂದ ನಮ್ಮ ಬಳಗದ ಪರವಾಗಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಡಾ.ಯು.ಪಿ.ಶಿವಾನಂದ ನುಡಿದರು.

ಸುದ್ದಿಗೋಷ್ಠಿಯಲ್ಲಿ ‘ಸುದ್ದಿ ಬಿಡುಗಡೆ’ ಬಳಗದ ಸಂತೋಷ್ ಕುಮಾರ್ ಶಾಂತಿನಗರ, ಉಮೇಶ್ ಮಿತ್ತಡ್ಕ, ಹರೀಶ್ ಬಂಟ್ವಾಳ್, ಭಾಸ್ಕರ ರೈ, ಸನ್ಮಾನ್ ಮಾಧವ ಭಾಗಮಂಡಲ, ಸಿಂಚನ್ ಉರಿಬೈಲ್, ಸೃಜನ್ ಉರಿಬೈಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News