ಎಸ್‌ಡಿಪಿಐ ನಾಯಕರ ಬಹಿರಂಗ ಕ್ಷಮೆಗೆ ಎಸ್ಕೆಎಸ್ಸೆಸ್ಸೆಫ್ ಆಗ್ರಹ

Update: 2019-04-16 07:47 GMT

ಮಂಗಳೂರು, ಎ.16: ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಪಂಡಿತರನ್ನು ಅವಹೇಳನಗೈದ ಎಸ್‌ಡಿಪಿಐ ನಾಯಕರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿ ಆಗ್ರಹಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಕೆಎಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಸಿದ್ದೀಕ್ ಅಬ್ದುಲ್ ಖಾದರ್, ಎಸ್ಕೆಎಸ್ಸೆಸ್ಸೆಫ್ ಧಾರ್ಮಿಕ ಸಂಘಟನೆಯಾಗಿದ್ದು, ರಾಜಕೀಯದಿಂದ ಅಂತರವನ್ನು ಕಾಯ್ದುಕೊಂಡು ಬಂದಿವೆ. ಇತ್ತೀಚೆಗೆ ಜಾತಿ ಧ್ರುವೀಕರಣ ಮಾಡಲು ಹೊರಟಿರುವ ಎಸ್‌ಡಿಪಿಐ ತನ್ನ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮುಸ್ಲಿಮ್ ಧಾರ್ಮಿಕ ಪಂಡಿತರನ್ನು ಅವಹೇಳನಕಾರಿಯಾಗಿ ಚಿತ್ರೀಕರಿಸಿ ಶರೀಅತ್ ವಿಷಯದಲ್ಲೂ ಕೀಳಾಗಿ ಹೇಳಿಕೆ ನೀಡಿದೆ. ಕೋಮು ಸೌಹಾರ್ದಕ್ಕಾಗಿ ಪ್ರಯತ್ನಿಸುವ ಎಸ್ಕೆಎಸ್ಸೆಸ್ಸೆಫ್ ಜಾತಿ ಆಧಾರಿತ ಧ್ರುವೀಕರಣ ಮತ್ತು ಕೋಮು ಪ್ರಚೋದಿತ ರಾಜಕಾರಣವನ್ನು ತೀವ್ರವಾಗಿ ವಿರೋಧಿಸುತ್ತದೆ. ಸಮುದಾಯವನ್ನು ಗುತ್ತಿಗೆ ಪಡೆದವರಂತೆ ಮಾತನಾಡುವ ಎಸ್‌ಡಿಪಿಐ ಧಾರ್ಮಿಕ ಪಂಡಿತರನ್ನು ಅವಹೇಳಿಸಿದ್ದು ಖಂಡನೀಯ ಎಂದರು.

ಮತ ಪಂಡಿತರ ನೇತೃತ್ವದಲ್ಲೇ ಕಾಲಕಾಲಕ್ಕೆ ಧಾರ್ಮಿಕ ತೀರ್ಮಾನಗಳನ್ನು ಕೈಗೊಳ್ಳುವ ಮೂಲಕ ಧರ್ಮದ ಸಂರಕ್ಷಣೆ ಮತ್ತು ನಾಡಿನ ಸೌಹಾರ್ದ ಕಾಪಾಡಿಕೊಂಡು ಬರಲಾಗಿದೆ. ಇದನ್ನು ಅಪಹರಿಸಿಕೊಂಡು ಧರ್ಮವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಯತ್ನಿಸುವ ಕುಹಕಿಗಳ ಪ್ರಯತ್ನ ಫಲಿಸದು. ಶರೀಅತ್ ಎಂಬುದು ಯಾರಿಗೋ ಬೇಕಾದ ಹಾಗೆ, ಚುನಾವಣೆಗಾಗಿ ಎಳೆದು ತರುವ ವಸ್ತುವಲ್ಲ. ರಾಜಕೀಯ ಮಾಡುವವರು ರಾಜಕೀಯ ಮಾಡಲಿ. ಧರ್ಮದ ಕಾರ್ಯ ನೋಡಿಕೊಳ್ಳಲು ಪಂಡಿತರಿದ್ದಾರೆ. ಧರ್ಮದ ವಿಷಯದಲ್ಲಿ ಮೂಗು ತೂರಿಸಲು ಪ್ರಯತ್ನಿಸಿದರೆ ಇಂತಹವರನ್ನು ಎಲ್ಲಿ ಕೂರಿಸಬೇಕೋ ಅಲ್ಲಿ ಕೂರಿಸಲು ಈ ಸಮುದಾಯಕ್ಕೆ ಸಾಧ್ಯವಿದೆ. ಹಾಗಾಗಿ ಎಸ್‌ಡಿಪಿಐ ನಾಯಕರು ಬಹಿರಂಗ ಕ್ಷಮೆ ಯಾಚಿಸದಿದ್ದರೆ ಮುಂದೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಶೀಘ್ರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿದ್ದೀಕ್ ಅಬ್ದುಲ್ ಖಾದರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಖಾಸಿಂ ದಾರಿಮಿ, ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ, ಆರಿಫ್ ಬಡಕಬೈಲು, ಸೈಯದ್ ಬಾಷಾ ತಂಙಳ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News