ಮಿಥುನ್ ರೈಗೆ 1 ಲಕ್ಷ ಮತಗಳ ಅಂತರದಿಂದ ಗೆಲುವು: ಐವನ್ ಡಿಸೋಜ

Update: 2019-04-16 14:46 GMT

ಮಂಗಳೂರು, ಎ.16: ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ 1 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ. 28 ವರ್ಷಗಳ ಬಳಿಕ ಕಾಂಗ್ರೆಸ್ ಮಂಗಳೂರಿನಲ್ಲಿ ಮತ್ತೆ ಅಧಿಪತ್ಯ ಸ್ಥಾಪಿಸಲಿದೆ ಎಂದು ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸಿದೆ. ಯುವ ಅಭ್ಯರ್ಥಿಯಾಗಿರುವುದರಿಂದ ಕ್ಷೇತ್ರಾದ್ಯಂತ ಯುವ ಜನತೆಯು ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಆಶಾದಾಯಕ ವಾತಾವರಣ ಕಂಡುಬಂದಿವೆ. ಸಂಸದ ನಳಿನ್ ಕುಮಾರ್ 10 ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ ಎಂದರು.

ಈ ಹಿಂದಿನಂತೆ ಸಿದ್ದರಾಮಯ್ಯ ಸರಕಾರವನ್ನು ಸೋಲಿಸಬಾರದಿತ್ತು ಎಂಬ ಭಾವನೆ ಜನರಲ್ಲಿ ಮೂಡಿದೆ. ಅದರ ಕನಿಕರ ಕೂಡ ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಪೂರಕವಾಗಲಿದೆ. ಶೂನ್ಯ ಸಾಧಕ ಸಂಸದರನ್ನು ಖಂಡಿತಾ ಮತದಾರರು ಸೋಲಿಸಲಿದ್ದಾರೆ ಎಂದು ಐವನ್ ಡಿಸೋಜ ನುಡಿದರು.

*ಬಿಜೆಪಿಗೆ ಸುಳ್ಳೇ ಮನೆ ದೇವರು: ಬಿಜೆಪಿಗರು ಸುಳ್ಳೇ ತಮ್ಮ ಮನೆ ದೇವರು ಎಂಬಂತೆ ಪ್ರಚಾರ ಮಾಡಿದ್ದಾರೆ. 2014ರ ಚುನಾವಣೆಯ ಸಂದರ್ಭ ನೀಡಿದ ಆಶ್ವಾಸನೆಗಳನ್ನು ಈಡೇರಿಸಿಲ್ಲ. ನರೇಂದ್ರ ಮೋದಿ 5 ಸಲ ಬಂದು ಹೋದದ್ದೇ ದೊಡ್ಡ ಸಾಧನೆ ಎಂಬಂತೆ ಮಾತನಾಡುತ್ತಿದ್ದಾರೆ. ಮಂಗಳೂರಿಗೆ ಆಗಮಿಸಿದ ಮೋದಿ ಜಿಲ್ಲೆಯ ಯಾವುದೇ ಯೋಜನೆ ಕುರಿತು ಮಾತನಾಡಿಲ್ಲ. ಜಿಲ್ಲೆಗೆ ತಾವು ನೀಡಿದ ಕೊಡುಗೆಗಳನ್ನು ಹೇಳಲಿಲ್ಲ. ಕೇವಲ ಭಾವನಾತ್ಮಕವಾಗಿ ಮತ ಕೇಳಿದ್ದು ಅಭಿವೃದ್ಧಿ ಬಯಸುವ ಜಿಲ್ಲೆಯ ಜನರಿಗೆ ನಿರಾಸೆಯಾಗಿದೆ ಎಂದರು.

ವಿಜಯ ಬ್ಯಾಂಕ್ ಹೆಸರು ಉಳಿಸಲೂ ಸಾಧ್ಯವಾಗದ ಬಿಜೆಪಿ ಸಂಸದರಿಗೆ ಜಿಲ್ಲೆಯ ಬಗ್ಗೆ ಅಭಿಮಾನ ಇಲ್ಲ ಎಂಬುದು ಜನರಿಗೆ ಗೊತ್ತಾಗಿದೆ. ಹಾಗಾಗಿ ಯುವ ನಾಯಕ ಮಿಥುನ್ ರೈಗೆ ಈ ಬಾರಿ ಅವಕಾಶ ಮಾಡಿಕೊಡಲಿದ್ದಾರೆ ಎಂದು ಐವನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಸದಾಶಿವ ಉಳ್ಳಾಲ್, ವಿಶ್ವಾಸ್‌ದಾಸ್ ಮತ್ತಿತರರಿದ್ದರು.


‘ಈ ಚುನಾವಣೆ ಲೋಟಸ್ ವರ್ಸಸ್ ಲೂಟ್ ಅಸ್’ ಎಂದಿರುವ ಶಾಸಕ ಸಿ.ಟಿ. ರವಿ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಚಿವ ರಮಾನಾಥ ರೈ, ಲೋಟಸ್ಸೇ (ಕಮಲ) ಲೂಟರ್ಸ್. ಜನರನ್ನು ಮೋಸ ಮಾಡುವ ಪಕ್ಷ ಎಂದು ಟೀಕಿಸಿದ್ದಾರೆ. ಅವರು ಸಿ.ಟಿ. ರವಿ ಯಾನೆ ಕೋಟಿ ರವಿ ಎಂದೂ ವ್ಯಂಗ್ಯವಾಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News