ಬಿಜೆಪಿಗೆ 2 ಲಕ್ಷಕ್ಕೂ ಅಧಿಕ ಅಂತರದ ಮತಗಳ ಗೆಲುವು-ಸಂಜೀವ ಮಠಂದೂರು

Update: 2019-04-16 14:39 GMT

ಪುತ್ತೂರು: ಜಿಲ್ಲೆಯ 1861 ಬೂತ್‍ಗಳಲ್ಲಿಯೂ ಬಿಜೆಪಿ ಉತ್ತಮ ರೀತಿಯಲ್ಲಿ ಪ್ರಚಾರ ಕಾರ್ಯ ನಡೆಸಿದ್ದು, ಈ ಬಾರಿ ದ.ಕ.ಜಿಲ್ಲೆಯಲ್ಲಿ ಬಿಜೆಪಿ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ. 

ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರ ಮಂಗಳೂರು ಕಾರ್ಯಕ್ರಮದ ಯಶಸ್ಸನ್ನು ನೋಡಿ ಕಾಂಗ್ರೆಸಿಗರು ನಿರಾಶರಾಗಿದ್ದು, ಅವರಲ್ಲಿ ಆತಂಕ ಉಂಟಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಲೋಕಸಭಾ ಚುನಾವಣೆಯಲಿ ಬಿಜೆಪಿ 29 ಸಾವಿರ ಮತಗಳ ಅಂತರ ಸಾಧಿಸಿದ್ದು, ಈ ಬಾರಿ 40 ಸಾವಿರ ಮತಗಳ ಅಂತರವನ್ನು ಪಡೆಯಲಿದೆ. ಈ ಗುರಿಯನ್ನು ಹೊಂದಿ ಕಾರ್ಯಕರ್ತರು ಕೆಲಸ ಮಾಡಿದ್ದಾರೆ ಎಂದರು. 

ದ.ಕ.ಜಿಲ್ಲೆಯ ಜನರು ಬುದ್ದಿವಂತರಾದರೂ ತಿಳುವಳಿಕೆ ಇಲ್ಲದವರು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆ ಖಂಡನೀಯವಾಗಿದೆ. ಇದಕ್ಕೆ ಜಿಲ್ಲೆಯ ಮತದಾರರು ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ. ಕಾಂಗ್ರೆಸ್‍ನ ಡಿ.ಕೆ. ಶಿವಕುಮಾರ್ ಜಿಲ್ಲೆಗೆ ಬಂದರೂ ಯಾವುದೇ ಜಾದೂ ಮಾಡಲು ಸಾಧ್ಯವಿಲ್ಲ. ಇಲ್ಲಿ ಬಿಜೆಪಿಯನ್ನು ಸೋಲಿಸಲು ಅವರಿಂದ ಸಾಧ್ಯವಾಗದು ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮತ್ತು ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News