​ತಾಯಿಗಂಡ ಸಂಸ್ಕೃತಿ ಸಿ.ಟಿ.ರವಿಯದ್ದು: ಸಚಿವೆ ಜಯಮಾಲಾ

Update: 2019-04-16 15:00 GMT

ಮಂಗಳೂರು, ಎ.16: ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಚಿಕ್ಕಮಗಳೂರಿನಲ್ಲಿ ‘ಯಾರು ಜಾತಿ, ಧರ್ಮರಾಜಕಾರಣಕ್ಕೆ ಚುನಾವಣೆಯಲ್ಲಿ ಮತ ಹಾಕಲ್ಲವೋ ಅವರು ತಾಯಿಗಂಡ’ ಎಂದು ಕೀಳುಮಟ್ಟದ ಪದ ಬಳಸಿದ್ದಾರೆ. ಇದು ಖಂಡನೀಯ. ಇಂತಹ ಸಂಸ್ಕೃತಿಯು ಸಿ.ಟಿ.ರವಿ ಅವರ ಸಂತತಿಯನ್ನು ತೋರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೀಳುಮಟ್ಟದ ಹೇಳಿಕೆ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ನೀಡುತ್ತೇವೆ. ಸಿ.ಟಿ.ರವಿ ತನ್ನ ಕ್ಷೇತ್ರದಲ್ಲಿ ಮೂರುಕಾಸಿನ ಕೆಲಸ ಮಾಡದ್ದಕ್ಕೆ ಮತ ನೀಡಬೇಕಾ ? ಕೀಳುಮಟ್ಟದ ಪದ ಬಳಸುವುದಿದ್ದರೆ ಅಪ್ಪಂದಿರನ್ನಿಟ್ಟುಕೊಂಡು ನಿಂದಿಸಲಿ. ಹೆಣ್ಣುಮಕ್ಕಳ ಬಗ್ಗೆ ಯಾವುದೇ ಹೇಳಿಕೆ ನೀಡಬಾರದು. ಮಹಿಳೆಯರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದಿರಬೇಕು ಎಂದರು.

ಅಸಲಿ-ನಕಲಿ ನಡುವಿನ ಚುನಾವಣೆ

ಈ ಬಾರಿಯ ಲೋಕಸಭಾ ಚುನಾವಣೆಯು ಅಸಲಿ-ನಕಲಿ ನಡುವೆ ನಡೆಯುವ ಚುನಾವಣೆಯಾಗಿದೆ. ಕಳೆದ ಐದು ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಸರಕಾರವು ಕೇವಲ ಆಶ್ವಾಸನೆಗಳನ್ನು ಮಾತ್ರ ನೀಡಿದ್ದು, ಚುನಾವಣಾ ಪ್ರಣಾಳಿಕೆಯಲ್ಲಿದ್ದ ಅಂಶಗಳನ್ನು ಈಡೇರಿಸಲಿಲ್ಲ, ಆದರೆ ಜಾಹೀರಾತಿಗಾಗಿ ಲಕ್ಷಾಂತರ ರೂ. ವ್ಯಯಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ ಆಕ್ರೋಶ ವ್ಯಕ್ತಪಡಿಸಿರು.

ಕಾಂಗ್ರೆಸ್ ಮುಖಂಡರ ಮೇಲೆ ಐಟಿ ಅಸ್ತ್ರ ಪ್ರಯೋಗಿಸುತ್ತಿದೆ. ಆದರೆ, ಇತ್ತೀಚೆಗೆ ನರೇಂದ್ರ ಮೋದಿ ಅವರು ಚಿತ್ರದುರ್ಗಕ್ಕೆ ಬಂದಿದ್ದ ಹೆಲಿಕಾಪ್ಟರ್‌ನಿಂದ ನಾಲ್ಕು ಅಡಿ ಎತ್ತರದ ಬಾಕ್ಸ್ ವೊಂದನ್ನು ಕಾರಿನಲ್ಲಿ ಸಾಗಿಸಿದ್ದು, ಅದರಲ್ಲಿ ಏನಿತ್ತು ಎಂಬುವುದರ ಬಗ್ಗೆ ತನಿಖೆಯಾಗಬೇಕಿದೆ ಎಂದು ಆಗ್ರಹಿಸಿದರು.

ದ.ಕ. ಮತ್ತು ಉಡುಪಿ ಲೋಕಸಭಾ ಕ್ಷೇತ್ರದ ಸಂಸದರು ಕಿಂಚಿತ್ತೂ ಅಭಿವೃದ್ಧಿ ಕೆಲಸ ಮಾಡಿಲ್ಲ. ಎರಡೂ ಕ್ಷೇತ್ರಗಳಲ್ಲಿ ಹಲವು ಯೋಜನೆಗಳು ನನೆಗುದಿಗೆ ಬಿದ್ದಿವೆ. ಸಂಸದರಾದವರಿಗೆ ಭಾಷಾ ಜ್ಞಾನ ಅತಿಮುಖ್ಯ. ಯಾವುದೇ ಸಮಸ್ಯೆಗಳನ್ನು ಚರ್ಚೆ ಮಾಡುವಾಗ ಇಲ್ಲಿನ ಸಂಸದರಿಗೆ ಭಾಷಾ ಸಮಸ್ಯೆ ಎದುರಾಗುತ್ತದೆ. ಈ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಯುವ ನಾಯಕ ಮಿಥುನ್ ರೈ ಅವರನ್ನು ಜನ ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.

ಸಿ.ಟಿ. ರವಿಗೆ ಪುಸ್ತಕಗಳ ಪಾರ್ಸೆಲ್

ಬಿಜೆಪಿ ನಾಯಕ ಸಿ.ಟಿ. ರವಿ ಇತ್ತೀಚೆಗೆ ಸಭೆಯೊಂದರಲ್ಲಿ ಹೆಣ್ಣಿನ ಬಗ್ಗೆ ಅತ್ಯಂತ ಕೀಳುಮಟ್ಟದ ಪದ ಬಳಕೆ ಮಾಡಿದ್ದು ಖಂಡನೀಯ. ಹೆಣ್ಣನ್ನು ಲಘುವಾಗಿ ಕಾಣುವ ಅವರನ್ನು ಕ್ಷಮಿಸಲು ಸಾಧ್ಯವಿಲ್ಲ. ಮಕ್ಕಳಿಗೆ ತಾಯಿ ಹೇಳುವ ನೀತಿ ಕಥೆ ಮತ್ತು ಮಾತೃತ್ವ ಹೊಂದಿದ ‘ಅಮ್ಮ ಹೇಳಿದ ಎಂಟು ಸುಳ್ಳುಗಳು’, ‘ನಮ್ಮಮ್ಮ ಅಂದ್ರೆ ನಂಗಿಷ್ಟ’ ಎಂಬ ಎರಡು ಪುಸ್ತಕಗಳನ್ನು ಸಿ.ಟಿ. ರವಿ ಅವರಿಗೆ ಪಾರ್ಸೆಲ್ ಮಾಡುತ್ತೇವೆ ಎಂದು ಸಚಿವೆ ಜಯಮಾಲಾ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News