ಕೇಂದ್ರ ಸರಕಾರದಿಂದ ಜನತೆಗೆ ಬೆಲೆ ಏರಿಕೆಯ ಕೊಡುಗೆ: ಕಾಂಗ್ರೆಸ್

Update: 2019-04-16 15:22 GMT

ಉಡುಪಿ, ಎ.16: ಬಿಜೆಪಿ 2014ರ ಲೋಕಸಭಾ ಚುನಾವಣೆಯ ಮುನ್ನ ತಾವು ಅಧಿಕಾರಕ್ಕೆ ಬಂದಲ್ಲಿ ದಿನಬಳಕೆಯ ವಸ್ತುಗಳ ಬೆಲೆ ಇಳಿಸುತ್ತೇವೆ ಎಂಬ ಭರವಸೆ ನೀಡಿದ್ದರು. 2014ರಿಂದ 2018ರವರೆಗಿನ ನಾಲ್ಕು ವರ್ಷಗಳಲ್ಲಿ ಅಕ್ಕಿ, ಗೋದಿ, ಧಾನ್ಯಗಳು ಸಕ್ಕರೆ, ಖಾದ್ಯ ತೈಲ ಹಾಗೂ ಅಡುಗೆ ಅನಿಲದ ಬೆಲೆಗಳು ಕನಿಷ್ಠ ಶೇ.7ರಿಂದ ಗರಿಷ್ಠ ಶೇ.25ರಷ್ಟು ಏರಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹಾಗೂ ಕೇಂದ್ರ ಕೃಷಿ ಸಚಿವಾಲಯಗಳು ಅಂಕಿ ಅಂಶಗಳನ್ನು ಪ್ರಕಟಿಸಿವೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಆರೋಪಿಸಿದ್ದಾರೆ.

ಬೈಲೂರು, ಚಿಟ್ಪಾಡಿ, ಕಡಿಯಾಳಿ ವಾರ್ಡ್‌ಗಳ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡುತಿದ್ದರು. ಮೋದಿಯ ಆಡಳಿತ ಅವಧಿಯಲ್ಲಿ ಕಚ್ಚಾತೈಲದ ಬೆಲೆ ಭಾರಿ ಪ್ರಮಾಣದಲ್ಲಿ ಕಡಿಮೆ ಆದರೂ ದಿನ ಬಳಕೆಗಳ ವಸ್ತುಗಳ ಬೆಲೆ ಹೆಚ್ಚುತ್ತಲೇ ಇತ್ತು. 2011ರಲ್ಲಿ ಬ್ಯಾರಲ್‌ಗೆ 120 ಡಾಲರ್ ಇದ್ದ ಕಚ್ಚಾತೈಲ ಬೆಲೆಯು 2016ರಲ್ಲಿ ಬ್ಯಾರಲ್‌ಗೆ 40 ಡಾಲರ್‌ಗೆ ಇಳಿದಿತ್ತು. ಆದರೆ ಕೇಂದ್ರ ತೈಲ ಬೆಲೆಯನ್ನು ಕಡಿಮೆ ಮಾಡದೆ ತೈಲ ಇಳಿಕೆಯ ಲಾಭವನ್ನು ಜನತೆಗೆ ವಿತರಿಸದೆ ವಂಚನೆ ಮಾಡಿತ್ತು. ಆದ್ದರಿಂದ ಈ ಜನ ವಿರೋಧಿ ಕೇಂದ್ರ ಸರಕಾರವನ್ನು ಕಿತ್ತೊಗೆಯುವ ಕಾಲ ಸನ್ನಿಹಿತವಾಗಿದೆ ಎಂದರು.

ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಅಶೋಕ್ ಕೊಡವೂರು, ದಿನೇಶ್ ಪುತ್ರನ್, ಬಿ.ನರಸಿಂಹಮೂರ್ತಿ, ಸತೀಶ್ ಅಮೀನ್ ಪಡುಕೆರೆ, ರಮೇಶ್ ಕಾಂಚನ್, ಲಕ್ಷ್ಮಣ ಶೆಣೈ, ಸದಾಶಿವ ಕಟ್ಟೆಗುಡ್ಡೆ, ಆಕಾಶ್ ರಾವ್, ಜನಾರ್ದನ ಭಂಡಾರ್ಕಾರ್, ಪ್ರಶಾಂತ್ ಪೂಜಾರಿ, ನಾರಾಯಣ ಕುಂದರ್, ಗಣೇಶ್ ನೆರ್ಗಿ, ಹರೀಶ್ ಶೆಟ್ಟಿ ಪಾಂಗಳ, ಹಬೀಬ್ ಅಲಿ, ಶೇಖರ್ ಜಿ. ಕೋಟ್ಯಾನ್, ಸುರೇಂದ್ರ ಆಚಾರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News