ಉಡುಪಿ: ಪಿಯುಸಿ ಫಲಿತಾಂಶದಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಮೇಲುಗೈ

Update: 2019-04-16 16:30 GMT

ಉಡುಪಿ, ಎ.16: ಸೋಮವಾರ ಪ್ರಕಟಗೊಂಡ ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಮತ್ತೊಮ್ಮೆ ರಾಜ್ಯದಲ್ಲೇ ಅಗ್ರಸ್ಥಾನ ಪಡೆಯುವುದರೊಂದಿಗೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಉತ್ತೀರ್ಣತೆಯಲ್ಲಿ ನಗರವಾಸಿ ವಿದ್ಯಾರ್ಥಿಗಳನ್ನು ಹಿಂದಿಕ್ಕುವಲ್ಲಿ ಯಶಸ್ವಿ ಯಾಗಿದ್ದಾರೆ.

 ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶೇ.92.66ರಷ್ಟು ಉತ್ತೀರ್ಣರಾಗಿದ್ದರೆ, ನಗರಪ್ರದೇಶದ ವಿದ್ಯಾರ್ಥಿಗಳು ಶೇ.91.65ರಷ್ಟು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಭಾಗದಿಂದ 7579 ಮಂದಿ ಪರೀಕ್ಷೆ ಬರೆದಿದ್ದು ಇವರಲ್ಲಿ 7023 ಮಂದಿ ತೇರ್ಗಡೆಯಾಗಿದ್ದರೆ, ಅದೇ ನಗರವಾಸಿ 6446 ವಿದ್ಯಾರ್ಥಿಗಳು ಪರೀಕ್ಷೆ ಬರೆದು ಅವರಲ್ಲಿ 5908 ಮಂದಿ ಉತ್ತೀರ್ಣರಾಗಿದ್ದಾರೆ.

ಶೇ.92.2 ತೇರ್ಗಡೆ: ಜಿಲ್ಲೆಯಲ್ಲಿ ಹೊಸದಾಗಿ ಪರೀಕ್ಷೆ ಬರೆದ ಒಟ್ಟು 14,025 ವಿದ್ಯಾರ್ಥಿಗಳಲ್ಲಿ 12,931 ಮಂದಿ ತೇರ್ಗಡೆಗೊಂಡಿದ್ದು, ಈ ಮೂಲಕ ಉತ್ತೀರ್ಣತೆಯ ಪ್ರಮಾಣ ಶೇ.92.2 ಆಗಿದೆ. ಇದು ರಾಜ್ಯಕ್ಕೆ ಅತ್ಯುತ್ತಮವಾಗಿದೆ. ಆದರೆ ಮರು ಪರೀಕ್ಷೆ ಬರೆದವರು ಹಾಗೂ ಖಾಸಗಿಯಾಗಿ ಪರೀಕ್ಷೆ ಬರೆದವರು ಸೇರಿದಂತೆ ಒಟ್ಟಾರೆಯಾಗಿ 15397 ಮಂದಿ ಪರೀಕ್ಷೆ ಬರೆದಿದ್ದು, ಇವರಲ್ಲಿ 13485 ಮಂದಿ ತೇರ್ಗಡೆ (ಶೇ.87.58)ಗೊಂಡಿದ್ದಾರೆ.

ಜಿಲ್ಲೆಯಲ್ಲಿ ಬಾಲಕರಿಗಿಂತ ಬಾಲಕಿಯರೇ ಅಧಿಕ ಸಂಖ್ಯೆಯಲ್ಲಿ ಉತ್ತೀರ್ಣ ರಾಗಿದ್ದಾರೆ. 7464 ಮಂದಿ ಬಾಲಕರು ಈ ಬಾರಿ ಪರೀಕ್ಷೆ ಬರೆದಿದ್ದು ಇವರಲ್ಲಿ 6228 ಮಂದಿ ತೇರ್ಗಡೆಗೊಂಡಿದ್ದರೆ (ಒಟ್ಟಾರೆಯಾಗಿ ಶೇ.83.44), ಪರೀಕ್ಷೆ ಬರೆದ 7933 ಬಾಲಕಿಯರಲ್ಲಿ 7257 ಮಂದಿ (ಶೇ.91.48) ತೇರ್ಗಡೆ ಯಾಗಿದ್ದಾರೆ.

ಕನ್ನಡ ಮಾಧ್ಯಮದಲ್ಲಿ ಉತ್ತರ ಬರೆದ ಶೇ.78.2ರಷ್ಟು ವಿದ್ಯಾರ್ಥಿಗಳು ಪಾಸಾದರೆ, ಆಂಗ್ಲ ಮಾಧ್ಯಮದಲ್ಲಿ ಉತ್ತರ ಬರೆದ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಶೇ.90.4 ಆಗಿದೆ. ತೇರ್ಗಡೆಯಾದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಪ್ರಮಾಣ ಶೇ.78.85, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಪ್ರಮಾಣ ಶೇ.83.06 ಆಗಿದೆ. 2ಎ ವರ್ಗದ ಶೇ.87.88, 2ಬಿ ವರ್ಗದ ಶೇ.81.98, 3ಎ ವರ್ಗದ ಶೇ.90.89, 3ಬಿ ವರ್ಗದ ಶೇ.90.65 ಹಾಗೂ ಇತರರು ಶೇ.91.55ರಷ್ಟು ಉತ್ತೀರ್ಣರಾಗಿದ್ದಾರೆ.

 ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯ ವಿದ್ಯಾರ್ಥಿಗಳು ತೇರ್ಗಡೆಗೊಂಡಿರುವುದು ಕಾಮರ್ಸ್ ವಿಭಾಗದಲ್ಲಿ. ಇದರಲ್ಲಿ ಪರೀಕ್ಷೆ ಬರೆದ 7583 ವಿದ್ಯಾರ್ಥಿಗಳಲ್ಲಿ 7067 ಮಂದಿ ತೇರ್ಗಡೆಗೊಂಡಿದ್ದರೆ (ಶೇ.93.2), ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 5077 ಮಂದಿಯಲ್ಲಿ 4693 ಮಂದಿ (ಶೇ.92.44) ತೇರ್ಗಡೆಗೊಂಡಿದ್ದಾರೆ. ಕಲಾ ವಿಭಾಗದಲ್ಲಿ 1365ಮಂದಿ ಪರೀಕ್ಷೆಗೆ ಕುಳಿತು ಅವರಲ್ಲಿ 1171 ಮಂದಿ ತೇರ್ಗಡೆಗೊಂಡು ಶೇ.85.79 ಸಾಧನೆ ಮಾಡಲಾಗಿದೆ.

 ಸದ್ಯದ ಮಾಹಿತಿಯಂತೆ ಜಿಲ್ಲೆಯ ಮೂರು ಸರಕಾರಿ ಪದವಿ ಪೂರ್ವ ಕಾಲೇಜುಗಳು ಸೇರಿದಂತೆ ಒಟ್ಟು 11 ಕಾಲೇಜುಗಳು ಶೇ.100 ಉತ್ತೀರ್ಣತೆಯನ್ನು ದಾಖಲಿಸಿವೆ ಎಂದು ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುಬ್ರಹ್ಮಣ್ಯ ಜೋಶಿ ತಿಳಿಸಿದ್ದಾರೆ. ಇದರಲ್ಲಿ ಉಡುಪಿ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಿಂದ ಪರೀಕ್ಷೆಗೆ ಕುಳಿತ ಎಲ್ಲಾ 581 ವಿದ್ಯಾರ್ಥಿಗಳು ತೇರ್ಗಡೆಗೊಂಡಿರುವುದು ವಿಶೇಷ ಸಾಧನೆಯಾಗಿದೆ.

ಜಿಲ್ಲೆಯಲ್ಲಿ ಪ್ರತಿ ವಿಭಾಗದಲ್ಲಿ ಮೊದಲ 5 ಸ್ಥಾನ ಪಡೆದವರು

ವಿಜ್ಞಾನ ವಿಭಾಗ: 1.ರಈಸ, ಎಸ್.ಆರ್, ಪ.ಪೂ.ಕಾಲೇಜು ಹೆಬ್ರಿ (592), 2.ಸ್ವಾತಿ, ಎಂಜಿಎಂ ಪ.ಪೂ.ಕಾಲೇಜು ಉಡುಪಿ (592), 3.ಶಶಾಂಕ, ವಿವೇಕ ಪ.ಪೂ.ಕಾಲೇಜು ಕೋಟ (591), 4. ಶಮಂತ್ ಕೆ.ಎಂ. ಹಾಗೂ ಜೀವನ್ ಟಿ.ಎ., ಜ್ಞಾನಸುಧಾ ಪ.ಪೂ.ಕಾಲೇಜು ಕಾರ್ಕಳ (590), 5.ಶ್ರೇಯಸ್ ಕಾಮತ್, ಜ್ಞಾನಗಂಗಾ ಪ.ಪೂ.ಕಾಲೇಜು ಮೂಡಬೆಳ್ಳೆ (590).

ವಾಣಿಜ್ಯ ವಿಭಾಗ: 1.ಶ್ರೇಯ, ಪೂರ್ಣಪ್ರಜ್ಞ ಪ.ಪೂ.ಕಾಲೇಜು ಉಡುಪಿ (590), 2.ವೆನಿಸ್ಸಾ ವಿಯಾಲ ಬ್ರಿಟ್ಟೋ, ಜ್ಞಾನಸುಧಾ ಪ.ಪೂ.ಕಾಲೇಜು ಕಾರ್ಕಳ (589), 3.ಇನಾರಾಬಿನ್‌ಸನ್, ಪೂರ್ಣಪ್ರಜ್ಞ ಪ.ಪೂ.ಕಾಲೇಜು ಉಡುಪಿ (589), 4.ಅಂಕಿತಾ ಶೆಟ್ಟಿ, ಆರ್.ಎನ್.ಶೆಟ್ಟಿ ಪ.ಪೂ.ಕಾಲೇಜು ಕುಂದಾಪುರ (588), ನಿಶಾ ಜಿ.ಕುಂದರ್, ಪೂರ್ಣಪ್ರಜ್ಞ ಪ.ಪೂ.ಕಾಲೇಜು ಉಡುಪಿ (588).

ಕಲಾ ವಿಭಾಗ: 1.ಚಿನ್ಮಯಿ, ದುರ್ಗಾಪರಮೇಶ್ವರಿ ಪ.ಪೂ.ಕಾಲೇಜು ಕೊಲ್ಲೂರು(564), 2. ದಿವ್ಯಾನಂದಾ, ಸರಕಾರಿ ಪ.ಪೂ.ಕಾಲೇಜು ಗೋಳಿಯಂಗಡಿ (562), 3.ನಿವೇದಿತಾ, ವಿವೇಕ ಪ.ಪೂ.ಕಾಲೇಜು ಕೋಟ (562),4. ಪಲ್ಲವಿ ಎಚ್. ಮೂಕಾಂಬಿಕಾ ಪ.ಪೂ.ಕಾಲೇಜು ಕೊಲ್ಲೂರು (556), 5.ಆಸ್ಟನ್, ಸಂತ ಲಾರೆನ್ಸ್ ಪ.ಪೂ.ಕಾಲೇಜು ಮೂಡುಬೆಳ್ಳೆ (556).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News