ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಎಸ್‍ಡಿಪಿಐ ಗೆ ಮತ ನೀಡಿ: ಮಹಮ್ಮದ್ ಇಲ್ಯಾಸ್

Update: 2019-04-16 16:55 GMT

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿ, ಕೋಮುಸೌಹಾರ್ದತೆಗೆ, ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ, ನೆಲ, ಜಲ, ಪರಿಸರವನ್ನು ಮುಂದಿನ ತಲೆಮಾರಿಗೆ ಉಳಿಸಲು ಸರ್ವ ಪ್ರಯತ್ನ ಮಾಡುತ್ತೇನೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಎಸ್‍ಡಿಪಿಐ ಅಭ್ಯರ್ಥಿ ಮಹಮ್ಮದ್ ಇಲ್ಯಾಸ್ ಹೇಳಿದ್ದಾರೆ.

ನಿರುದ್ಯೋಗಿ ಯುವ ಜನರು ಉದ್ಯೋಗಕ್ಕಾಗಿ ಪರವೂರಿಗೆ ವಲಸೆ ಹೋಗುವುದನ್ನು ನಿಲ್ಲಿಸಿ ಸ್ಥಳೀಯವಾಗಿ ಉದ್ಯೋಗ ದೊರಕುವಂತೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯ ಮತದಾರರು ಬಿಜೆಪಿ-ಕಾಂಗ್ರೆಸ್ ಪಕ್ಷಗಳ ದುರಾಡಳಿತ, ಭ್ರಷ್ಟಾಚಾರ ಮತ್ತು ಕೋಮುವಾದಕ್ಕೆ ಪರ್ಯಾಯವಾಗಿ ಮೌಲ್ಯಾಧಾರಿತ ರಾಜಕೀಯ ವ್ಯವಸ್ಥೆಗಾಗಿ ಹುಡುಕಾಡುತ್ತಿದ್ದರು. ಎಸ್‍ಡಿಪಿಐ ಪಕ್ಷ ಸಮಗ್ರ ವ್ಯವಸ್ಥೆಯಲ್ಲಿ ಸುಧಾರಣೆ ತಂದು ನಾಡಿನ ಕಟ್ಟ ಕಡೆಯ ನಾಗರೀಕನಿಗೆ ಸರಕಾರಿ ಸೌಲಭ್ಯ ಸಿಗುವಂತೆ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಮಹಮ್ಮದ್ ಇಲ್ಯಾಸ್ ಹೇಳಿದ್ದಾರೆ. 

ಮೂರು ದಶಕಗಳಿಂದ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಪಕ್ಷವು ಸಂಪೂರ್ಣವಾಗಿ ವಿಫಲವಾಗಿದೆ. ಈ ಸವಾಲನ್ನು ಎಸ್‍ಡಿಪಿಐ ಸ್ವೀಕರಿಸಿ ಚುನಾವಣಾ ಕಣದಲ್ಲಿದೆ. ಕ್ಷೇತ್ರದ ದಲಿತರು, ಬಿಲ್ಲವರು, ಹಿಂದೂ ಸಹೋದರರು, ಕ್ರೈಸ್ತರು, ಮುಸ್ಲಿಮರು ಎಸ್‍ಡಿಪಿಐಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. 

ಬಿಜೆಪಿಯ ಸಂಸದ ಮತ್ತು ಕರಾವಳಿ ಭಾಗದ ಕಾಂಗ್ರೆಸ್‍ನ ರಾಜ್ಯ ಸಭಾ ಸದಸ್ಯರು ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಸ್ವಲ್ಪವೂ ಪ್ರಯತ್ನ ಮಾಡಲಿಲ್ಲ ಮತ್ತು ಇದರಲ್ಲೆಲ್ಲಾ ವಿಫಲರಾಗಿದ್ದಾರೆ ಎಂಬುವುದು ಜಿಲ್ಲೆಯ ಜನತೆಗೆ ತಿಳಿದಿರುವ ವಾಸ್ತವ. ಯಾವುದೇ ರೀತಿಯ ಅಪಪ್ರಚಾರಗಳಿಗೆ ಕಿವಿಕೊಡದೆ ನೆಮ್ಮದಿಯ ನಾಳೆಗಾಗಿ ಎಸ್‍ಡಿಪಿಐ ಪಕ್ಷದ ಕ್ರಮ ಸಂಖ್ಯೆ 4ರ ಗ್ಯಾಸ್ ಸಿಲಿಂಡರ್ ಚಿಹ್ನೆಗೆ ಮತ ನೀಡಿ ನಿಮ್ಮ ನ್ಯಾಯಯುತ ಧ್ವನಿಯಾಗಿ ಸಂಸತ್ತಿಗೆ ಕಳುಹಿಸಿಕೊಡುವಂತೆ ಈ ಮೂಲಕ ವಿನಂತಿಸುತ್ತೇನೆ ಎಂದು ಎಸ್‍ಡಿಪಿಐ ಅಭ್ಯರ್ಥಿ ಮಹಮ್ಮದ್ ಇಲ್ಯಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News