ಕಲ್ಲಾಪು, ಒಂಬತ್ತುಕೆರೆ: ಇವಿಎಂನಲ್ಲಿ ದೋಷ, ಮತಯಂತ್ರಗಳ ಬದಲಾವಣೆ

Update: 2019-04-18 10:06 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಎ.18: ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಲ್ಲಾಪು ಪಟ್ಲ ಮತ್ತು ಒಂಬತ್ತುಕೆರೆಯಲ್ಲಿ ‘ಡೆಮೋ’ ಮತದಾನದ ಸಂದರ್ಭ ಇವಿಎಂನಲ್ಲಿ ದೋಷ ಕಂಡುಬಂದ ಬಗ್ಗೆ ವರದಿಯಾಗಿದೆ.

ಒಂಬತ್ತುಕೆರೆಯಲ್ಲಿ ಮತದಾನಕ್ಕೆ ಮುನ್ನ ‘ಡೆಮೋ’ ಮತದಾನ ನಡೆದಾಗ ಕಾಂಗ್ರೆಸ್‌ಗೆ ಚಲಾಯಿಸಲ್ಪಟ್ಟ 42 ಮತಗಳು ಬಿಜೆಪಿಗೆ ವರ್ಗಾಯಿಸಲ್ಪಟ್ಟಿತು ಎಂದು ಮಾಜಿ ಕೌನ್ಸಿಲರ್ ದಿನೇಶ್ ರೈ ಆರೋಪಿಸಿದ್ದಾರೆ.

ಕಲ್ಲಾಪು ಪಟ್ಲದಲ್ಲಿ ಕೂಡ ‘ಡೆಮೋ’ ಮತದಾನ ಸಂದರ್ಭ ಕಾಂಗ್ರೆಸ್‌ಗೆ ಚಲಾಯಿಸಲ್ಪಟ್ಟ ಮತಗಳು ಬಿಜೆಪಿಗೆ ವರ್ಗಾಯಿಸಲ್ಪಟ್ಟಿತು. ಈ ಬಗ್ಗೆ ಪ್ರಶ್ನಿಸಿದಾಗ ಕರ್ತವ್ಯನಿರತ ಅಧಿಕಾರಿಗಳು ಉಡಾಫೆಯಿಂದ ವರ್ತಿಸಿದರು. ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದಾಗ ಹೆಚ್ಚುವರಿ ಪೊಲೀಸರನ್ನು ಕರೆಸಿ ಮತದಾರರನ್ನು ಚದುರಿಸತೊಡಗಿದರು. ಬಳಿಕ ಇವಿಎಂ ಬದಲಾಯಿಸಿ ಮತದಾನಕ್ಕೆ ಅವಕಾಶ ಮಾಡಿದರು ಎಂದು ಸ್ಥಳೀಯ ಮಾಜಿ ಕೌನ್ಸಿಲರ್ ಉಸ್ಮಾನ್ ಕಲ್ಲಾಪು ತಿಳಿಸಿದ್ದಾರೆ.

ಒಟ್ಟಿನಲ್ಲಿ ಇವಿಎಂನಲ್ಲಿ ಕಂಡು ಬಂದ ಈ ದೋಷದ ಹಿನ್ನೆಲೆಯಲ್ಲಿ ಕೆಲಕಾಲ ಮತಗಟ್ಟೆಯ ಸುತ್ತಮುತ್ತ ಕಾರ್ಯಕರ್ತರು ಆಕ್ರೋಶಿತರಾದರು. ಈ ಮಧ್ಯೆ ಎರಡೂ ಕಡೆ ನಡೆದ ಅವಾಂತರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಧ್ವನಿ ಸಂದೇಶ ರವಾನೆಯಾಗುತ್ತಿದ್ದು, ಕರ್ತವ್ಯ ನಿರತ ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News