ಲೋಕಸಭಾ ಚುನಾವಣೆ: ದ.ಕ. ಜಿಲ್ಲೆಯಲ್ಲಿ ಶಾಂತಿಯುತ ಮತದಾನ

Update: 2019-04-18 15:05 GMT

ಮಂಗಳೂರು, ಎ.18: ಕೆಲವೆಡೆ ಇವಿಎಂಗಳಲ್ಲಿ ದೋಷ, ಸಣ್ಣ ಪುಟ್ಟ ಮಾತಿನ ಚಕಮಕಿ, ವಿವಿ ಪ್ಯಾಟ್‌ಗಳಲ್ಲಿ ಪ್ರಿಂಟರ್ ಸಮಸ್ಯೆ ಹೊರತುಪಡಿಸಿದರೆ ದ.ಕ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಲೋಕಸಭಾ ಚುನಾವಣೆಯಲ್ಲಿ ಶಾಂತಿಯುತವಾಗಿ ಶೇ. 77.25 ಮತದಾನದ ಮೂಲಕ ಕಳೆದ ಸಾಲಿನ ದಾಖಲೆಯನ್ನು ಮುರಿದಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ 76.67 ಮತದಾನದೊಂದಿಗೆ ಸಾರ್ವಕಾಲಿಕ ಮತದಾನ ಎಂಬ ಹೆಗ್ಗಳಿಕೆ ಪಡೆದಿತ್ತು. 2009ರ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ.74.46 ಮತದಾನದೊಂದಿಗೆ ಕರ್ನಾಟಕದಲ್ಲೇ ಅತ್ಯಧಿಕ ಮತದಾನವಾದ ಜಿಲ್ಲೆ ಎಂಬ ಹೆಗ್ಗಳಿಕೆ ಕಾರಣ ವಾಗಿತ್ತು. 2018 ವಿಧಾನಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ ಶೇ.77.63ಮತದಾನವಾಗಿತ್ತು. 2013ರ ವಿಧಾನಸಭಾ ಚುನಾವಣೆಯಲ್ಲಿ ಶೇ. 74.78 ಮತದಾನವಾಗಿತ್ತು.

ವಿವಿಪ್ಯಾಟ್‌ನಲ್ಲಿ ಪ್ರಿಂಟರ್ ಸಮಸ್ಯೆ

ಮಾಣಿ ವ್ಯಾಪ್ತಿಯ ನಾಲ್ಕು ಮತಗಟ್ಟೆಗಳಲ್ಲಿ ಮತದಾನ ಆರಂಭದ ವೇಳೆ ವಿವಿ ಪ್ಯಾಂಟ್‌ಗಳಲ್ಲಿ ಪ್ರಿಂಟರ್ ಸಮಸ್ಯೆ ಕಂಡು ಬಂದಿದ್ದು, 15 ನಿಮಿಷಗಳಲ್ಲೇ ಅವುಗಳನ್ನು ಬದಲಾಯಿಸಿ ಮತದಾನ ಸುಸೂತ್ರವಾಗಿ ನೆರವೇರಿಸಲು ವ್ಯವಸ್ಥೆ ಮಾಡಲಾಯಿತು ಎಂದು ಸೆಕ್ಟರ್ ಅಧಿಕಾರಿ ಸಂಜಯ್ ಎಂಬವರು ಮಾಣಿಯ ಮತಗಟ್ಟೆಗಳಿಗೆ ಪತ್ರಕರ್ತರ ತಂಡ ಭೇಟಿ ನೀಡಿದ ಸಂದರ್ಭ ಮಾಹಿತಿ ನೀಡಿದರು.

ಮತಗಟ್ಟೆಗಳಲ್ಲಿ ಯುವಕರ ಉತ್ಸಾಹ: ಹಿರಿಯರಲ್ಲಿ ಕುಂದದ ಆಸಕ್ತಿ

ದ.ಕ. ಜಿಲ್ಲೆಯ ಗ್ರಾಮೀಣ ಪ್ರದೇಶಗಳನ್ನು ಒಳಗೊಂಡು ಈ ಬಾರಿ ಮತದಾನದ ಬಗ್ಗೆ ಅತ್ಯಧಿಕ ಉತ್ಸಾಹ ಕಂಡು ಬಂತು. ಇದೇ ವೇಳೆ ಹಿರಿಯ ಮತದಾರರು ಹಾಗೂ ಮಹಿಳೆಯರು ಕೂಡಾ ಅತ್ಯಧಿಕ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನದಲ್ಲಿ ಪಾಲ್ಗೊಂಡಿದ್ದರು.

ಬಿಸಿಲ ಧಗೆಯ ನಡುವೆಯೂ ಮತದಾನ

ಬೆಳಗ್ಗೆ ಏಳು ಗಂಟೆಯಿಂದ ಮಧ್ಯಾಹ್ನ 11 ಗಂಟೆಯವರೆಗೆ ಬಿರುಸಿನ ಮತದಾನವಾಗಿದ್ದರೆ, ಮಧ್ಯಾಹ್ನದ ಬಿರು ಬಿಸಿಲಿನ ಸಂದರ್ಭ ಮತಗಟ್ಟೆಗಳಲ್ಲಿ ಸರತಿಸಾಲು ಕಡಿಮೆಯಾಗಿ ಕಂಡು ಬಂದರೂ ಮಧ್ಯಾಹ್ನ 2 ಗಂಟೆಯನ ನಂತರ ಮತ್ತೆ ಬಿರುಸಿನ ಮತದಾನ ಕಂಡು ಬಂತು. ಗ್ರಾಮೀಣ ಪ್ರದೇಶದ ಮತಗಟ್ಟೆಗಳಲ್ಲಿ ಬಿರು ಬಿಸಿಲಿನ ನಡುವೆಯೂ ಮತದಾರರು ಮತಗಟ್ಟೆಗಳಿಗೆ ಬಂದು ಮತ ಚಾಯಿಸುತ್ತಿರುವುದು ಕಂಡು ಬಂತು.

ಕಳೆದ ಬಾರಿಯ ಚುನಾವಣೆಯಂತೆ ಈ ಬಾರಿಯೂಯುವ ಮತದಾರರನ್ನು ಗುರಿಯಾಗಿರಿಸಿಕೊಂಡು ಸ್ವೀಪ್ ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ಆದರೆ ವಿಶೇಷವೆಂದರೆ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿಯೇ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿರುವುದು ವಿಶೇಷ.
ನಕ್ಸಲ್ ಪೀಡಿತ ಕುತ್ಲೂರು, ನಾರಾವಿ ಸೇರಿದಂತೆ ದ.ಕ. ಜಿಲ್ಲೆಯಾದ್ಯಂತ ಬಹುತೇಕ ಮತಗಟ್ಟೆಗಳಲ್ಲಿ ಬೆಳಗ್ಗಿನ ಹೊತ್ತು ಮತದಾನ ಅತ್ಯಂತ ಚುರುಕು ಪಡೆದಿತ್ತು. ಸೂರ್ಯನ ಬಿಸಿಲ ತಾಪ ಏರಿಕೆಯಾಗುತ್ತಿದ್ದಂತೆಯೇ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆಯೂ ಬೆರಳೆಣಿಕೆಯಂತಿತ್ತು. ಮತ್ತೆ ಸಂಜೆಯ ಹೊತ್ತಿಗೆ ಮತದಾನ ವೇಗ ಪಡೆದಿತ್ತು. 

ಶಾಮಿಯಾನದ ನೆರಳು !

ಮತದಾನ ಕೇಂದ್ರದ ಎದುರು ಹಲವು ಕಡೆಗಳಲ್ಲಿ ಸರತಿ ಸಾಲಿನಲ್ಲಿ ನಿಂತ ಮತದಾರರಿಗೆ ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಶಾಮಿಯಾನ ಅಳವಡಿಕೆ ಮಾಡಲಾಗಿತ್ತು. ಇದು ಮಾತ್ರವಲ್ಲದೆ ನೀರಿನ ಡ್ರಮ್, ಬಿಸ್ಲರಿ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಪಕ್ಷಗಳ ಬೂತ್‌ಗಳಿಗೂ ಶಾಮಿಯಾನ ಹಾಕಿದ್ದು ದಣಿದು ಬಂದವರಿಗೆ ಕುಡಿಯು ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮತಗಟ್ಟೆಗಳಲ್ಲಿ ಮೊಬೈಲ್ ನಿಷೇಧ ನಾಮಕಾವಸ್ತೆ !

ಮತಗಟ್ಟೆಯೊಳಗೆ ಮತದಾರರು ಮೊಬೈಲ್ ಕೊಂಡೊಯ್ಯುವುದನ್ನು ಈ ಬಾರಿ ನಿಷೇಧಿಸಲಾಗಿತ್ತು. ಆದರೆ ಮತದಾರರು ಮಾತ್ರ ಮತಗಟ್ಟೆಯೊಳಗೆ ನಿರಾಂತಕವಾಗಿ ಮೊಬೈಲ್ ಕೊಂಡೊಯ್ಯುವ ಮೂಲಕ ಆದೇಶ ಕೇವಲ ನಾಮಕಾವಸ್ತೆ ಎಂಬಂತಾಗಿತ್ತು. ಕೆಲವು ಮತಗಟ್ಟೆಗಳಲ್ಲಿ ಮೊಬೈಲ್ ನೋಡಿದರೆ ಸ್ವಿಚ್ ಆ್ ನೀಡಿ ಎಂದು ಸಲಹೆ ನೀಡುತ್ತಿದ್ದರೆ, ಕೆಲವೇ ಕೆಲವು ಮತದಾನ ಕೇಂದ್ರಗಳಲ್ಲಿ ಮಾತ್ರ ಮೊಬೈಲ್ ಕೊಂಡೊಯ್ಯಲು ಅವಕಾಶ ನೀಡದೆ ಹಿಂದೆ ಕಳಿಸಿದ್ದರು. ಸುಶಿಕ್ಷತರೇ ಹೆಚ್ಚಾಗಿರುವ ನಗರ ಪ್ರದೇಶದಲ್ಲಂತೂ ಮೊಬೈಲ್‌ಗಳನ್ನು ಯಾವುದೇ ಮುಲಾಜಿಲ್ಲದೆ ಮತದಾನ ಕೇಂದ್ರಕ್ಕೆ ಕೊಂಡೊಯ್ಯುತ್ತಿದ್ದರು.

ಪ್ರತಿ ಮತದಾನ ಕೇಂದ್ರದಲ್ಲಿ ಮಹಿಳೆ, ಪುರುಷರಿಗೆ ಪ್ರತ್ಯೇಕ ಸರತಿ ಮಾಡಲಾಗಿದ್ದುಘಿ, ಇದು ಮಹಿಳಾ ಮತದಾರರಿಗೆ ಹೆಚ್ಚು ಅನುಕೂಲವೂ ಆಯಿತು. ಪ್ರತಿ ಮತದಾನ ಕೇಂದ್ರದಲ್ಲೂ ಗರ್ಭೀಣಿಯರು, ಬಾಣಂತಿಯರು, ವಿಶಿಷ್ಟಚೇತನರು, ರೋಗಿಗಳು, ಹಿರಿಯ ನಾಗರಿಕರು, ಮದುಮಕ್ಕಳಿಗೆ ಸರತಿ ಸಾಲಿನಿಂದ ವಿನಾಯಿತಿ ನೀಡಿ ಪ್ರತ್ಯೇಕ ಸಾಲಿನಲ್ಲಿ ನೇರ ಮತದಾನ ಕೇಂದ್ರಕ್ಕೆ ಹೋಗಲು ಅವಕಾಶ ಮಾಡಿಕೊಡಲಾಗಿತ್ತು.

ಮತದಾನ ನನ್ನ ಹಕ್ಕು!

72ರ ಹರೆಯದ ಬೆನ್ನುಬಾಗಿದ ಹಿರಿಯ ನಾಗರಿಕೆ ತಮ್ಮ ಕಿರಿಯ ಪುತ್ರನ ಕೈ ಹಿಡಿದು ಕುತ್ಲೂರು ದ.ಕ. ಜಿ.ಪಂ. ಹಿ.ಪ್ರಾ. ಶಾಲೆಯ ಮತಗಟ್ಟೆಗೆ ಮತ ಚಲಾಯಿಸಲು ಆಗಮಿಸಿದ್ದರು. ಅವರನ್ನು ಮಾತನಾಡಿದಾಗ, ನಾನು ಈವರೆಗೂ ಒಂದೂ ಚುನಾವಣೆಯಲ್ಲಿಯೂ ಮತದಾನ ಮಾಡುವುದನ್ನು ತಪ್ಪಿಸಿಲ್ಲ. ಮತದಾನ ನನ್ನ ಹಕ್ಕು ಎಂದು ಹೇಳುವ ಮೂಲಕ ಅಲ್ಲಿ್ದವರನ್ನು ಬೆರಗುಗೊಳಿಸಿದರು.

ನಾನು ಹಾಕಿದ ಅಭ್ಯರ್ಥಿಯ ಗೆಲುವು ಗ್ಯಾರಂಟಿ !

ನಾರಾವಿಯ ಸೈಂಟ್ ಆ್ಯಂಟನಿ ಕಾಲೇಜಿನಲ್ಲಿ ದ್ವಿತೀಯ ಬಿಕಾಂ ವಿದ್ಯಾರ್ಥಿನಿಯಾಗಿರುವ ಪ್ರಭಾ ಪ್ರಥಮ ಬಾರಿಗೆ ತಮ್ಮ ಹಕ್ಕನ್ನು ಚಲಾಯಿಸಿ ಹೊರಬರುವಾಗ ಸಂತಸ ವ್ಯಕ್ತಪಡಿಸಿದರಲ್ಲದೆ, ತಾನು ಮತ ಹಾಕಿದ ಅಭ್ಯರ್ಥಿ ಗೆಲುವು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುತ್ಲೂರಿನಲ್ಲಿ ಅಸಮಾಧಾನದ ಹೊಗೆ !

ನಕ್ಸಲ್ ಪೀಡಿತ ಪ್ರದೇಶವೆಂಬುದಾಗಿ ಗುರುತಿಸಲ್ಪಟ್ಟಿರುವ ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಹೊಂದಿರುವ ಕುತ್ಲೂರು ಗ್ರಾಮದಲ್ಲಿ ಅರಣ್ಯವಾಸಿ ಮತದಾರರ ಅಸಮಾಧಾನ ಗೋಚರಿಸಿದೆ. ಅಳಂಬ, ಪಂಜಾಲು, ನೆಲ್ಲಿತಡ್ಕದ ಕುದುರೆಮುಖ ಅರಣ್ಯ ವಾಸಿಗಳು ತಾವು ಈ ಬಾರಿ ಚುನಾವಣೆ ಬಹಿಷ್ಕರಿಸುವುದಾಗಿ ಹೇಳಿಕೊಂಡಿದ್ದರು. ಆದರೆ ಅಧಿಕಾರಿಗಳು ಅವರ ಮನವೊಲಿಸಲು ಕುತ್ಲೂರಿಗೆ ಭೇಟಿ ನೀಡಿದ್ದರೂ ತಮ್ಮ ಪ್ರದೇಶಗಳಿಗೆ ಬಂದು ತಮ್ಮ ಬೇಡಿಕೆಯನ್ನು ಆಲಿಸಿಲ್ಲ ಎಂಬ ನೋವು ಅಲ್ಲಿನವರದ್ದು. ಹಾಗಾಗಿ ಮಧ್ಯಾಹ್ನದವರೆಗೂ ಅಲ್ಲಿನ ಸುಮಾರು 150 ಮತದಾರರಲ್ಲಿ ಕೇವಲ 55 ಮಂದಿ ಮಾತ್ರವೇ ಮತ ಚಲಾಯಿಸಿದ್ದರು ಎಂಬುದಾಗಿ ಕುತ್ಲೂರು ಗ್ರಾ.ಪಂ.ನ ಉಪಾಧ್ಯಕ್ಷೆ ಯಶೋದಾ ಮಧ್ಯಾಹ್ನದ ವೇಳೆಗೆ ಕುತ್ಲೂರು ಪ್ರದೇಶಕ್ಕೆ ಭೇಟಿ ನೀಡಿದ ಪತ್ರಕರ್ತರ ತಂಡಕ್ಕೆ ಮಾಹಿತಿ ನೀಡಿದರು.

ಕಳೆದ ಬಾರಿ ಈ ಮತಗಟ್ಟೆಯಲ್ಲಿ ಕುತ್ಲೂರಿನ ಮತಗಟ್ಟೆಯಲ್ಲಿ ಶೇ. 81 ಮತದಾನವಾಗಿದ್ದರೆ ಈ ಬಾರಿ ಶೇ. 75ರಷ್ಟು ಮತದಾನವಾಗಿದೆ.

ಇಲ್ಲಿ ಸೆಖೆ ಬಿಟ್ಟರೆ ಎಲ್ಲವೂ ಉತ್ತಮ!

ಇಲ್ಲಿ ಸೆಖೆ ಒಂದನ್ನು ಬಿಟ್ಟರೆ ಮತ್ತೆಲ್ಲವೂ ಸುಸೂತ್ರವಾಗಿದೆ, ಉತ್ತಮವಾಗಿದೆ ಎಂದು ಮಾಣಿಯ ಮತಗಟ್ಟೆಯಲ್ಲಿ ಭದ್ರತೆಯನ್ನು ಒದಗಿಸುತ್ತಿದ್ದ ಇಂಡೋ ಟಿಬೆಟಿಯನ್ ಬಾರ್ಡರ್ ಫೋರ್ಸ್ (ಐಟಿಬಿಪಿ)ನ ಸಿಬ್ಬಂದಿ ಜ್ಞಾನೇಶ್ವರ್ ಅಭಿಪ್ರಾಯಿಸಿದ್ದಾರೆ.

ಹಿಮಾಚಲ ಪ್ರದೇಶದ ಐಟಿಬಿಪಿ ತಂಡದವರಾದ ಜ್ಞಾನೇಶ್ವರ್ ಮೂಲತ: ಮಹಾರಾಷ್ಟ್ರದವರು. ಕಳೆದ 15ರಂದು ಚುನಾವಣಾ ಕಾರ್ಯದ ನಿಮಿತ್ತ ದಕ್ಷಿಣ ಕನ್ನಡ ಜಿಲ್ಲೆಗೆ ತಂಡದ ಜತೆ ಆಗಮಿಸಿದ್ದಾಗಿ ತಿಳಿಸಿದ ಅವರು, ಇಲ್ಲಿನ ಊಟೋಪಚಾರ, ವಸತಿ ವ್ಯವಸ್ಥೆ ಎಲ್ಲವೂ ಉತ್ತಮವಾಗಿರುವುದಾಗಿ ಪ್ರತಿಕ್ರಿಯಿಸಿದರು.

ಈ ಬಾರಿಯೂ ಮತಗಟ್ಟೆಗಳಲ್ಲಿ ಮತದಾರರು ನಿರ್ಭೀತ ಮತದಾನಕ್ಕೆ ಬೇಕಾದ ಸಕಲ ವ್ಯವಸ್ಥೆಯನ್ನು ಜಿಲ್ಲಾಡಳಿತ ಕಲ್ಪಿಸಿತ್ತು. ನಗರದ ಮತಗಟ್ಟೆಗಳಲ್ಲಿ ಸ್ಥಳೀಯ ಪೊಲೀಸರ ಭದ್ರತೆಯ ಜತೆಗೆ ಗ್ರಾಮಾಂತರ ಹಾಗೂ ನಕ್ಸಲ್ ಪೀಡಿತ ಪ್ರದೇಶಗಳ ಮತಗಟ್ಟೆಗಳಲ್ಲಿ ಕರ್ನಾಟಕ ಪೊಲೀಸರ ಭದ್ರತೆಯ ಜತೆ ಯಲ್ಲೇ ಐಟಿಬಿಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News