ಉದ್ಯಾವರ ದೈವಗಳಿಂದ ಐತಿಹಾಸಿಕ ಸಾವಿರ ಜಮಾಅತ್ ಮಸೀದಿ ಭೇಟಿ

Update: 2019-04-19 14:20 GMT

ಮಂಜೇಶ್ವರ: ಇತಿಹಾಸ ಪ್ರಸಿದ್ಧ ಉದ್ಯಾವರ ಶ್ರೀ ಮಾಡ ದೈವಕ್ಷೇತ್ರದ ಜಾತ್ರೆಯ ಪೂರ್ವಭಾವಿಯಾಗಿ ಉದ್ಯಾವರ ಸಾವಿರ ಜಮಾಅತ್ ಮಸೀದಿಗೆ ದೈವಗಳ ಭೇಟಿ ಕಾರ್ಯಕ್ರಮ ಶುಕ್ರವಾರ ನೆರವೇರಿತು.

ಹಿಂದೂ ಮುಸ್ಲಿಂ ಭಾವೈಕ್ಯದ ಸಂಕೇತದೊಂದಿಗೆ ವರ್ಷಗಳಿಂದ ವಾಡಿಕೆಯಲ್ಲಿರುವ ಉದ್ಯಾವರ ಶ್ರೀಅರಸು ದೈವಗಳು ವರ್ಷಂಪ್ರತಿಯ ಪದ್ದತಿಯಂತೆ ಶುಕ್ರವಾರ ಮಧ್ಯಾಹ್ನ ಅರಸು ದೈವ ಪಾತ್ರಿಗಳು ಮತ್ತು ದೇವಸ್ಥಾನದ ಪ್ರತಿನಿಧಿಗಳು ಹಾಗೂ ಸಹಸ್ರಾರು ಮಂದಿ ಜೊತೆಯಾಗಿ ಉದ್ಯಾವರ ಸಾವಿರ ಜಮಾಅತ್‍ಗೆ ಭೇಟಿ ನೀಡಿದರು.

ಮೇಷ ಸಂಕ್ರಮಣ ಕಳೆದು ಬರುವ ಮೊದಲ ಶುಕ್ರವಾರ ಈ ಸಾಂಪ್ರದಾಯಿಕ ಭೇಟಿ ನಡೆದು ಬರುತ್ತಿದೆ. ಮಧ್ಯಾಹ್ನ ಉದ್ಯಾವರ ಕ್ಷೇತ್ರದ ಭಂಡಾರ ಮನೆಯಿಂದ ಹೊರಟ ದೈವಗಳು 1.30ರ ಹೊತ್ತಿಗೆ ಜಮಾಅತ್‍ಗೆ ತಲುಪಿದವು. ಈ ವೇಳೆ ಜುಮಾ ನಮಾಝ್ ಮುಗಿಸಿ ಸಜ್ಜಾಗಿ ನಿಂತಿದ್ದ ಮಸೀದಿಯ ಆಡಳಿತ ಸಮಿತಿ ಪ್ರತಿನಿಧಿಗಳು ಪರಂಪರಾಗತ ರೀತಿಯಲ್ಲಿ ಉದ್ಯಾವರ ಅರಸು ದೈವ ಪಾತ್ರಿಗಳಿಗೆ ಅದ್ದೂರಿ ಸ್ವಾಗತ ನೀಡಿದರು. ಮೇ 9ರಿಂದ 15ರ ತನಕ ಮಾಡ ಕ್ಷೇತ್ರದ ಉತ್ಸವ ನಡೆಯಲಿದೆ.

ಜಮಾಅತ್ ಭೇಟಿಗೆ ಉದ್ಯಾವರ ಸಾವಿರ ಜಮಾಅತ್ ವತಿಯಿಂದ  ಸೂಫಿ ಹಾಜಿ, ಮೊಯ್ದಿನ್ ಕುಂಞಿ ಹಾಜಿ, ಖಾದರ್ ಫಾರೂಕ್, ಅಹ್ಮದ್ ಬಾವ ಹಾಜಿ, ಅಬೂಬಕರ್ ಮಾಹಿನ್ ಹಾಜಿ, ಹನೀಫ್ ಪಿ ಎ  ಮೊದಲಾದವರ ನೇತೃತ್ವದಲ್ಲಿ ಬರಮಾಡಿಕೊಳ್ಳಲಾಯಿತು. ಶ್ರೀಕ್ಷೇತ್ರ ಉದ್ಯಾವರ ಅರಸು ದೈವಗಳ ಮುಖ್ಯಸ್ಥರಾದ ಡಾ.ಜಯಪಾಲ ಶೆಟ್ಟಿ, ಮಂಜು ಭಂಡಾರಿ, ದುಗ್ಗ ಭಂಡಾರಿ, ತಿಮ್ಮ ಭಂಡಾರಿ ಮುಂಡ ಶೆಟ್ಟಿ, ಹಾಗೂ ಎರಡು ವರ್ಣ ಹಾಗೂ ನಾಲ್ಕು ಗ್ರಾಮದವರು ಸೇರಿದಂತೆ ಹಲವರು ಜಮಾಅತ್ ಭೇಟಿಯಲ್ಲಿ ಉಪಸ್ಥಿತರಿದ್ದರು.

ಯು.ಡಿ.ಎಫ್ ಅಭ್ಯರ್ಥಿ ಉಣ್ಣಿತ್ತಾನ್ ರಿಂದ ಮತ ಯಾಚನೆ :

ಉದ್ಯಾವರ ಅರಸು ದೈವಗಳ ಸಾವಿರ ಜಮಾಅತ್ ಮಸೀದಿ ಭೇಟಿ ನಡುವೆಯೇ ಯು.ಡಿ.ಎಫ್ ಅಭ್ಯರ್ಥಿ ರಾಜ್‍ಮೋಹನ್ ಉಣ್ಣಿತ್ತಾನ್ ಮಸೀದಿ ತಲುಪಿ ಮತ ಯಾಚಿಸಿದರು. ಈ ಸಂದರ್ಭ ಅವರೊಂದಿಗೆ ಯು.ಡಿ.ಎಫ್ ನಾಯಕರು ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News