ಉಡುಪಿ ಜಿಲ್ಲೆಯಲ್ಲಿ ಗುಡ್ ಫ್ರೈಡೆ ಆಚರಣೆ

Update: 2019-04-19 15:09 GMT

ಉಡುಪಿ, ಎ.19: ಕ್ರೈಸ್ತ ಸಮುದಾಯದ ಪವಿತ್ರ ದಿನವಾದ ಶುಭ ಶುಕ್ರವಾರ ವನ್ನು (ಗುಡ್ ಫ್ರೈಡೆ) ಉಡುಪಿ ಜಿಲ್ಲೆಯಾದ್ಯಂತ ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಇಂದು ಆಚರಿಸಲಾಯಿತು. ಜಿಲ್ಲೆಯ ಎಲ್ಲಾ ಚರ್ಚು ಗಳಲ್ಲೂ ಬೆಳಗ್ಗಿನಿಂದ ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆಯ ಹಾದಿಯ ವಾಚನ ಜರುಗಿತು.

ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಮತ್ತು ಮಾನವ ಪಾಪ ವಿಮೋಚನೆ ಗಾಗಿ ಶಿಲುಬೆಯಲ್ಲಿ ಕ್ರೂರ ಮರಣವನ್ನಪ್ಪಿದ ದೇವಪುತ್ರ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ಈ ಪವಿತ್ರ ದಿನವನ್ನು ನಾಡಿನಾದ್ಯಂತ ಭಕ್ತಿಯಿಂದ ಆಚರಿಚಲಾಗುತ್ತದೆ.

ಧರ್ಮಪ್ರಾಂತದ ಪ್ರಧಾನ ದೇವಾಲಯವಾದ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ. ಡಾ.ಜೆರಾಲ್ಢ್ ಐಸಾಕ್ ಲೋಬೊ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು.

ಏಸು ಸ್ವಾಮಿ ಅನುಭವಿಸಿದ ಕಷ್ಟಗಳ ಸ್ಮರಣೆಯು ನಮಗೆ ನಮ್ಮ ಸಂಕಷ್ಟಗಳನ್ನು ಸಹಿಸಲು ಹಾಗೂ ದ್ವೇಷ, ಅಸೂಯೆಗಳನ್ನು ತೊರೆದು ಸನ್ಮಾರ್ಗದಲ್ಲಿ ನಡೆಯಲು ಸ್ಪೂರ್ತಿ ನೀಡಲಿ ಎಂದವರು ಆಶಿಸಿದರು.

ಉಡುಪಿ ಜಿಲ್ಲೆಯ ಹಲವು ಚರ್ಚುಗಳಲ್ಲಿ ಯೇಸುಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನಪ್ಪುವ ತನಕದ ಘಟನೆಗಳನ್ನು ನಟನೆಯ ಮೂಲಕ ಪ್ರಸ್ತುತ ಪಡಿಸಲಾಯಿತು.

ಶುಕ್ರವಾರ ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ಧರ್ಮಗುರುಗಳು ರಕ್ತವರ್ಣದ ಪೂಜಾ ಬಟ್ಟೆಯನ್ನು ಧರಿಸಿ ಯೇಸು ಕ್ರಿಸ್ತನ ಕೊನೆಯ ಗಳಿಗೆಗಳ ವೃತ್ತಾಂತ ಓದಿದರು. ಬಳಿಕ ಶಿಲುಬೆಯನ್ನು ಮೆರವಣಿಗೆಯಲ್ಲಿ ತಂದು ಭಕ್ತರು ಮುತ್ತಿಟ್ಟು ತಮ್ಮ 40 ದಿನಗಳ ತ್ಯಾಗದ ಉಳಿಕೆಯ ಹಣವನ್ನು ಬಡಬಗ್ಗರಿಗಾಗಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News