ಉಡುಪಿ: ಎ.20ರಿಂದ ರಂಗಭೂಮಿ ಆನಂದೋತ್ಸವ

Update: 2019-04-19 15:12 GMT

ಉಡುಪಿ, ಎ.19: ರಾಜ್ಯದ ಪ್ರತಿಷ್ಠಿತ ನಾಟಕ ಸಂಸ್ಥೆಗಳಲ್ಲೊಂದಾಗ ಉಡುಪಿಯ ರಂಗಭೂಮಿ ಪ್ರತಿ ವರ್ಷದಂತೆ ಈ ವರ್ಷವೂ ಕುತ್ಪಾಡಿ ಆನಂದ ಗಾಣಿಗರ ನೆನಪಿನಲ್ಲಿ ಆಯೋಜಿಸುವ ‘ಆನಂದೋತ್ಸವ-2019’ನ್ನು ಎ.20ರಿಂದ 22ರವರೆಗೆ ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿ ಸಿದೆ ಎಂದು ರಂಗಭೂಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರೊಂದಿಗೆ ತಲ್ಲೂರು ಗಿರಿಜಾ-ಡಾ.ಶಿವರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ಸಮಾರಂಭಗಳೊಂದಿಗೆ ನಾಟಕೋತ್ಸವವೂ ನಡೆಯಲಿದೆ ಎಂದವರು ತಿಳಿಸಿದರು.

ಎ.20ರ  ಸಂಜೆ 5:45ಕ್ಕೆ ಆನಂದೋತ್ಸವದ ಉದ್ಘಾಟನೆ ನಡೆಯಲಿದೆ. ಮಂಗಳೂರು ಆಕಾಶವಾಣಿಯ ಸಹಾಯಕ ನಿಲಯ ನಿರ್ದೇಶಕಿ ಉಷಾಲತಾ ಎಸ್. ಅವರು ಇದನ್ನು ಉದ್ಘಾಟಿಸಲಿದ್ದಾರೆ. ಬಳಿಕ ರಂಗಭೂಮಿ ಉಡುಪಿಯ ಈ ವರ್ಷದ ಹೊಸ ನಾಟಕ ‘ಕಾಮ್ಯ ಕಲಾ ಪ್ರತಿಮಾ’ದ ಪ್ರಥಮ ಪ್ರದರ್ಶನ ನಡೆಯಲಿದೆ ಎಂದು ಶಿವರಾಮ ಶೆಟ್ಟಿ ತಿಳಿಸಿದರು.

‘ಕಾಮ್ಯ ಕಲಾ ಪ್ರತಿಮಾ’ ಎಂಬುದು ಕುಮಾರವ್ಯಾಸನ ‘ವಿರಾಟಪರ್ವ’, ದ.ರಾ.ಬೇಂದ್ರೆ ಮತ್ತು ಸೇಡಿಯಾಪು ಕೃಷ್ಣ ಭಟ್ಟರ ‘ಕೃಷ್ಣಕುಮಾರಿ’ ಹಾಗೂ ಕುವೆಂಪು ಅವರು ಶ್ರೀರಾಮಾಯಣ ದರ್ಶನಂ ಆಧರಿಸಿದ ‘ದಶಾನನ ಸ್ವಪ್ನಸಿದ್ಧಿ’ಯ ಮೂರು ಪ್ರೇಮ ಕಾವ್ಯಗಳನ್ನು ಆಧರಿಸಿದ ನಾಟಕವಾಗಿದೆ ಎಂದು ಅವರು ವಿವರಿಸಿದರು.

ನಾಟಕವನ್ನು ಗಣೇಶ್ ಎಂ.ಉಡುಪಿ ರಚಿಸಿ ನಿರ್ದೇಶಿಸಿದ್ದಾರೆ.ಇದಕ್ಕೆ ಶ್ರವಣ್ ಹೆಗ್ಗೋಡು ಅವರ ಸಹಾಯ, ಮುನ್ನ ಅವರ ಸಂಗೀತವಿದೆ. ಅಲ್ಲದೇ ಎ.21ರ ರವಿವಾರ ಸಂಜೆ ರಂಗಾಯಣ ಮೈಸೂರಿನಿಂದ ‘ರೆಕ್ಸ್ ಆವರ್ಸ್’ (ಡೈನೋ ಏಕಾಂಗಿ ಪಯಣ) ನಾಟಕ ಹಾಗೂ 22ರ ಸೋಮವಾರ ರಂಗಾಯಣ ಮೈಸೂರು ಇವರ ‘ಯಹೂದಿ ಹುಡುಗಿ’ ನಾಟಕಗಳು ಸಂಜೆ 5:45ಕ್ಕೆ ಪ್ರದರ್ಶನ ಗೊಳ್ಳಲಿವೆ ಎಂದರು.

ಎ.21ರ ಬೆಳಗ್ಗೆ 10:30ರಿಂದ ಸಂಜೆ 5:30ರವರೆಗೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಡಾ. ಎಚ್. ಶಾಂತಾರಾಮ್‌ರಿಗೆ ತಲ್ಲೂರು ಗಿರಿಜಾ-ಶಿವರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಅಲ್ಲದೇ ಡಾ.ಎಚ್.ಶಾಂತಾರಾಮ್‌ರ ಕುರಿತು ವಿಚಾರಗೋಷ್ಠಿ ಗಳು ನಡೆಯಲಿವೆ ಎಂದು ಶಿವರಾಮ ಶೆಟ್ಟಿ ತಿಳಿಸಿದರು.

ವಿಚಾರಗೋಷ್ಠಿಯನ್ನು ಬೆಳಗ್ಗೆ 10:30ಕ್ಕೆ ಹಂಪಿ ವಿವಿಯ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಂಬಾತನಯ ಮುದ್ರಾಡಿ, ನೀಲಾವರ ಸುರೇಂದ್ರ ಅಡಿಗ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ ಉಪಸ್ಥಿತರಿರುವರು.

11:30ರಿಂದ ಮಧೂರು ವಿಷ್ಣುಪ್ರಸಾದ್ ಕಲ್ಲೂರಾಯ ಹಾಗೂ ಮಧೂರು ಮೋಹನ ಕಲ್ಲೂರಾಯರಿಂದ ಗಮಕ ಪ್ರಾತ್ಯಕ್ಷಿಕೆ ಇರುತ್ತದೆ. ಅಪರಾಹ್ನ 12ರಿಂದ ಡಾ.ಶಾಂತಾರಾಮ್ ಒಂದು ನೋಟ ವಿಷಯದ ಕುರಿತು ಗೋಷ್ಠಿಗಳು ನಡೆಯಲಿವೆ. 1:35ರಿಂದ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ಗುರು ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದಲ್ಲಿ ‘ವೃಷಸೇನ’ ಯಕ್ಷಗಾನ ಪ್ರದರ್ಶನವಿದೆ. ಬಳಿಕ ಶಾಂತಾರಾಮರೊಂದಿಗೆ ಸಂವಾದ ನಡೆಯಲಿದೆ.

ಸಂಜೆ 4:20ರಿಂದ ರವಿರಾಜ್ ಎಚ್.ಪಿ. ಅವರು ಡಾ.ಎಚ್. ಶಾಂತಾರಾಮ್ ಕುರಿತು ನಿರ್ಮಿಸಿದ ‘ರಂಗಶಿಲ್ಪಿ’ ಸಾಕ್ಷಚಿತ್ರದ ಪ್ರದರ್ಶನವಿದೆ. ಸಂಜೆ 5:00ಕ್ಕೆ ಡಾ.ಶಾಂತಾರಾಮ್‌ರಿಗೆ ಡಾ.ಎಚ್.ಎಸ್.ಬಲ್ಲಾಳ್‌ರಿಂದ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಂಗಭೂಮಿಯ ಜೊತೆ ಕಾರ್ಯದರ್ಶಿ ರವಿರಾಜ್ ಎಚ್.ಪಿ., ಪಿ.ಭಾಸ್ಕರ ಕಿದಿಯೂರು, ಸದಸ್ಯರಾದ ಮೇಟಿ ಮುದಿಯಪ್ಪ, ಕೆ.ಗೋಪಾಲ್, ಗಿರೀಶ್ ತಂತ್ರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News