ಮಂಗಳೂರು: ಶುಭ ಶುಕ್ರವಾರ ಆಚರಣೆ

Update: 2019-04-19 15:31 GMT

ಮಂಗಳೂರು, ಎ. 19: ಏಸು ಕ್ರಿಸ್ತರು ಶಿಲುಬೆಯಲ್ಲಿ ಮರಣಿಸಿದ ದಿನದ ಸ್ಮರಣಾರ್ಥ ಕ್ರೈಸ್ತರು ಶುಕ್ರವಾರ ‘ಶುಭ ಶುಕ್ರವಾರ’ ಆಚರಿಸಿದರು. ಆ ಪ್ರಯುಕ್ತ ಚರ್ಚ್‌ಗಳಲ್ಲಿ ದಿನವಿಡೀ ವಿಶೇಷ ಪ್ರಾರ್ಥನೆ, ಶಿಲುಬೆಯ ಆರಾಧನೆ ಮತ್ತಿತರ ಕಾರ್ಯಕ್ರಮಗಳು ಜರುಗಿತು.

ಏಸು ಕ್ರಿಸ್ತರಿಗೆ ಶಿಲುಬೆಯ ಮರಣ ಶಿಕ್ಷೆ ವಿಧಿಸಿದಲ್ಲಿಂದ ಆರಂಭಿಸಿ ಶಿಲುಬೆಯಲ್ಲಿ ಮರಣವನ್ನಪ್ಪಿ ಅವರ ಶರೀರವನ್ನು ಸಮಾಧಿ ಮಾಡುವವರೆಗಿನ 14 ಪ್ರಮುಖ ಘಟನಾವಳಿಗೆ ಸಂಬಂಧಿಸಿದ ‘ಶಿಲುಬೆಯ ಹಾದಿ’ ಆಚರಣೆಯನ್ನು ಚರ್ಚ್ ಮತ್ತು ಚರ್ಚ್ ಆವರಣದಲ್ಲಿ ನಡೆಸುವ ಮೂಲಕ ಏಸು ಕ್ರಿಸ್ತರು ಅನುಭವಿಸಿದ ಯಾತನೆಯನ್ನು ಸ್ಮರಿಸಿದರು. ಜತೆಗೆ ಈ ದಿನವನ್ನು ಧ್ಯಾನ ಮತ್ತು ಉಪವಾಸದ ಮೂಲಕ ಕಳೆದರು. ಚರ್ಚ್‌ಗಳಲ್ಲಿ ನಡೆದ ಪ್ರಾರ್ಥನೆ, ಧ್ಯಾನ, ಶಿಲುಬೆಯ ಆರಾಧನೆ ಕಾರ್ಯಕ್ರಮಗಳಲ್ಲಿ ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಮಂಗಳೂರಿನ ಬಿಷಪ್ ರೆ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ನಗರದ ಕೊಡಿಯಾಲ್‌ಬೈಲ್‌ನ ಬಿಷಪ್ಸ್ ಹೌಸ್ ಚಾಪೆಲ್‌ನಲ್ಲಿ ಮಧ್ಯಾಹ್ನ ನಡೆದ ಶಿಲುಬೆಯ ಹಾದಿ ಮತ್ತು ಸಂಜೆ ನಡೆದ ಪ್ರಾರ್ಥನಾ ಕಾರ್ಯಕ್ರಮಗಳಲ್ಲಿ ನೇತೃತ್ವ ವಹಿಸಿದ್ದರು. ಶಿಲುಬೆಯ ಹಾದಿ ಕಾರ್ಯಕ್ರಮದಲ್ಲಿ ಧರ್ಮ ಪ್ರಾಂತದ ಪ್ರಧಾನ ಗುರು ಮೊ. ಮ್ಯಾಕ್ಸಿಂ ಎಲ್. ನೊರೋನ್ಹಾ, ಸಾರ್ವಜನಿಕ ಸಂಪರ್ಕ ಅಧಿಕಾರಿ ಫಾ. ವಿಕ್ಟರ್ ವಿಜಯ್ ಲೋಬೊ ಮತ್ತಿತರ ಗುರುಗಳು ಉಪಸ್ಥಿತರಿದ್ದರು.

ರೊಜಾರಿಯೊ ಕೆಥೆಡ್ರಲ್‌ನಲ್ಲಿ ಸಂಜೆ ನಡೆದ ಕಾರ್ಯಕ್ರಮದಲ್ಲಿ ಏಸು ಕ್ರಿಸ್ತರನ್ನು ಶಿಲುಬೆಗೇರಿಸಿದ ರೀತಿ ಮತ್ತು ಮೃತ ಶರೀರವನ್ನು ಶಿಲುಬೆಯಿಂದ ಕೆಳಗಿಳಿಸುವ ಪ್ರಕ್ರಿಯೆಯನ್ನು ಸಾಂಕೇತಿಕವಾಗಿ ನಡೆಸಲಾಯಿತು. ಬಳಿಕ ಮೆರವಣಿಗೆ ನೆರವೇರಿತು. ಧರ್ಮಪ್ರಾಂತದ ಪ್ರಧಾನ ಗುರು ಮೊ.ಮ್ಯಾಕ್ಸಿಂ ಎಲ್. ನೊರೋನ್ಹಾ ನೇತೃತ್ವ ವಹಿಸಿದ್ದರು. ಕೆಥೆಡ್ರಲ್‌ನ ರೆಕ್ಟರ್ ಫಾ. ಜೆ.ಬಿ. ಕ್ರಾಸ್ತಾ ಸಹಕರಿಸಿದರು. ಸಹಾಯಕ ಗುರು ಫಾ.ಫ್ಲೇವಿಯನ್ ಲೋಬೊ ಪ್ರವಚನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News