ಕರ್ಕರೆ ಪಾಕಿಸ್ತಾನಕ್ಕೆ ಕೆಲಸ ಮಾಡುತ್ತಿದ್ದರು ಎಂದ ಮಧುಕೀಶ್ವರ್ !

Update: 2019-04-20 14:02 GMT

ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ಕರ್ಕರೆ ವಿರುದ್ಧ ಮಾಲೇಗಾವ್ ಸ್ಫೋಟ ಆರೋಪಿ ಹಾಗು ಬಿಜೆಪಿ ಯ ಭೋಪಾಲ್ ಲೋಕಸಭಾ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್ ಕೀಳು ಮಟ್ಟದ ಹೇಳಿಕೆ ನೀಡಿದ ಬಗ್ಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಿಗೇ ಪ್ರಧಾನಿ ಮೋದಿಯ ಕಟ್ಟಾ ಬೆಂಬಲಿಗೆ , ಲೇಖಕಿ ಮಧುಕೀಶ್ವರ್ ಅವರು ಕರ್ಕರೆ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಟ್ವೀಟ್ ಮಾಡಿದ್ದಾರೆ. 

ಸ್ಫೋಟ ಆರೋಪಿ ಪ್ರಜ್ಞಾ ಸಿಂಗ್ ಗೆ ಬೆಂಬಲ ಸೂಚಿಸಿರುವ ಮಧುಕೀಶ್ವರ್ ಕರ್ತವ್ಯದಲ್ಲಿರುವಾಗಲೇ ಭಯೋತ್ಪಾದಕರ ಗುಂಡಿಗೆ ಬಲಿಯಾದ ಹೇಮಂತ್ ಕರ್ಕರೆ ವಿರುದ್ಧ ಅತ್ಯಂತ ಅವಹೇಳನಕಾರಿಯಾಗಿ ಬರೆದು ಅವರನ್ನು ಜರೆದಿದ್ದಾರೆ. " ಮುಂಬೈ ಮೇಲೆ ಭಯೋತ್ಪಾದಕ ದಾಳಿ ನಡೆದ ಮಾಹಿತಿ ಸಿಗುವಾಗ ಕರ್ಕರೆ ಮದ್ಯಪಾನ ಮಾಡಿ ಅಮಲಿನಲ್ಲಿದ್ದರು"  ಎಂದು ಟ್ವೀಟ್ ಮಾಡಿರುವ ಮಧು ಅವರಿಗೆ ಅವರ ಮೇಲೆ ನಿಯಂತ್ರಣವಿರಲಿಲ್ಲ, ಅವರು ಬುಲೆಟ್ ಪ್ರೂಫ್ ಜಾಕೆಟ್ ಹಾಕಿಕೊಳ್ಳಲು ಹೆಣಗಾಡುತ್ತಿದ್ದುದನ್ನು ಇಡೀ ದೇಶ ನೋಡಿದೆ , ಅವರು ಅಂದು ಒಂದೇ ಒಂದು ಬುಲೆಟ್ ಹಾರಿಸಿಲ್ಲ , ಮತ್ತೆ ಅದೇಗೆ ಅವರು ಭಯೋತ್ಪಾದಕರ ವಿರುದ್ಧ ಹೋರಾಟದಲ್ಲಿ ಬಲಿಯಾದರು ಎಂದು ಹೇಳಲಾಗುತ್ತಿದೆ ? " ಎಂದು ಅತ್ಯಂತ ಆಘಾತಕಾರಿ ಹೇಳಿಕೆ ನೀಡಿದ್ದಾರೆ. 

ಕರ್ಕರೆಯನ್ನು ಪರೋಕ್ಷವಾಗಿ rogue police officer ( ಕ್ರೂರ ಪ್ರವೃತ್ತಿಯ ಅಧಿಕಾರಿ) ಎಂದು ಬಣ್ಣಿಸಿರುವ ಮಧು ಅವಹೇಳನದ ಪರಮಾವಧಿಯಾಗಿ ಅವರು ಪಾಕಿಸ್ತಾನಕ್ಕೆ ಸೇವೆ ಸಲ್ಲಿಸುತ್ತಿದ್ದರು ಎಂದೂ ಆರೋಪಿಸಿದ್ದಾರೆ. ಕರ್ಕರೆ ಕುರಿತ ಪ್ರಜ್ಞಾ ಹೇಳಿಕೆಯನ್ನು ಖಂಡಿಸಿರುವ ಐಪಿಎಸ್ ಅಧಿಕಾರಿಗಳ ಸಂಘವನ್ನೇ ಖಂಡಿಸಿರುವ ಮಧು " ಕ್ರೂರ ಪೊಲೀಸ್ ಅಧಿಕಾರಿಗಳು ಜನರನ್ನು ಅಮಾನವೀಯವಾಗಿ ಹಿಂಸಿಸಬಹುದು ಆದರೆ ಆದರೆ ಜನರಿಗೆ ಅವರಿಗೆ ಶಾಪ ಕೊಡುವ ಹಕ್ಕೂ ಇಲ್ಲವೇ ? ನಿಮಗೆ ನಾಚಿಕೆಯಾಗಬೇಕು" ಎಂದು ಹೇಳಿದ್ದಾರೆ. 

" ಸೋನಿಯಾ ಗಾಂಧಿ ಅಧಿಕಾರದಲ್ಲಿದ್ದಾಗ ಕರ್ಕರೆಯ ಆಪ್ತಮಿತ್ರ ದಿಗ್ವಿಜಯ್ ಸಿಂಗ್ ಅವರಿಂದ ಗಂಟೆ ಗಂಟೆಗೆ ಅವರಿಗೆ ಆದೇಶ ಬರುತ್ತಿತ್ತು. ಇಸ್ಲಾಮಿಸ್ಟ್ ಗಳನ್ನು ಖುಷಿಪಡಿಸಲು ಹಿಂದೂ ಭಯೋತ್ಪಾದನೆಯನ್ನು ಸೃಷ್ಟಿಸಿದರು. ಇಂತಹವರಿಗೆ ಅಶೋಕ್ ಚಕ್ರ ಏನು, ಭಾರತ ರತ್ನವೂ ಸಿಗುತ್ತಿತ್ತು " ಎಂದು ಕರ್ಕರೆ ವಿರುದ್ಧ ಕಿಡಿಕಾರಿದ್ದಾರೆ  ಮಧು. 

2014ರ ಲೋಕಸಭಾ ಚುನಾವಣೆ ವೇಳೆ ಹಠಾತ್ತನೆ ಮೋದಿ ಬೆಂಬಲಿಗರಾಗಿ ಮಾರ್ಪಟ್ಟ ಮಧುಕಿಶ್ವರ್ ಆ ಬಳಿಕ ಟ್ವಿಟರ್ ನಲ್ಲಿ ಮೋದಿಯನ್ನು ಬೆಂಬಲಿಸುವ, ಉಳಿದವರನ್ನು ಅವಹೇಳನ ಮಾಡುವ ಒಂದು ಅವಕಾಶವನ್ನೂ ಬಿಡುವುದಿಲ್ಲ. ಹಿಂದೂ ಮುಸ್ಲಿಮರ ನಡುವೆ ದ್ವೇಷ , ಅಪನಂಬಿಕೆ ಹರಡುವ ಹಲವು ಟ್ವೀಟ್ ಗಳನ್ನೂ ಈಕೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News