‘ನಾಪತ್ತೆಯಾಗಿರುವ ಬಡ ಮೀನುಗಾರರನ್ನು ಪತ್ತೆಹಚ್ಚದ ಮೋದಿ ಬೇರೇನು ಮಾಡುತ್ತಾರೆ?’

Update: 2019-04-20 08:01 GMT

ಕುಂದಾಪುರ, ಎ.20: ‘‘ನಿಮ್ಮಲ್ಲಿ ದೊಡ್ಡ ದೊಡ್ಡ ಕ್ಷಿಪಣಿ ಎಲ್ಲ ಇದೆ ಮಾರ್ರೆ... ಆದರೆ ನಮ್ಮ ಏಳು ಮಂದಿ ಬಡ ಮೀನುಗಾರರನ್ನು ಪತ್ತೆ ಹಚ್ಚಲು ನಿಮಗೆ ಇದುವರೆಗೆ ಸಾಧ್ಯವಾಗಿಲ್ಲ ಅಂದರೆ ಏನು...ಏನು ಮಾಡುತ್ತಾರೆ ಮೋದಿ’’

ಎ.19ರಂದು ಮಧ್ಯಾಹ್ನ ಬಗ್ವಾಡಿ ಶ್ರೀಮಹಿಷಾಸುರ ಮರ್ದಿನಿ ದೇವಸ್ಥಾನದ ರಥೋತ್ಸವದ ಸಂದರ್ಭದಲ್ಲಿ ಮೀನುಗಾರರ ವಿವಿಧ ಬೇಡಿಕೆಗಳಿಗೆ ಸ್ಪಂದಿಸದ ಬಗ್ಗೆ ಬಿಜೆಪಿ ಸ್ಟಾರ್ ಪ್ರಚಾರಕಿ ನಟಿ ತಾರಾ ಹಾಗೂ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿಯವರನ್ನು ಮೀನುಗಾರ ಮುಖಂಡ, ಉದ್ಯಮಿ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ.ಶಂಕರ್ ತೀವ್ರ ತರಾಟೆಗೆ ತೆಗೆದುಕೊಂಡ ಪರಿ ಇದು. ಈ ಮಾತುಕತೆಯ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ದೇವಳದ ರಥೋತ್ಸವದ ಪ್ರಯುಕ್ತ ಆಯೋಜಿಸಲಾದ ಧಾರ್ಮಿಕ ಸಭೆ ಯಲ್ಲಿ ಭಾಗವಹಿಸಿದ್ದ ಜಿ.ಶಂಕರ್, ಅಲ್ಲಿಗೆ ಆಗಮಿಸಿದ ಚಿತ್ರನಟಿ ತಾರಾ ಹಾಗೂ ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರನ್ನು ವೇದಿಕೆಯಿಂದ ಇಳಿದು ಬಂದು ಗೌರಯುತವಾಗಿ ಸ್ವಾಗತಿಸಿಕೊಂಡರು. ಕಳೆದ ಹತ್ತು ವರ್ಷ ಗಳಿಂದ ಈಡೇರದ ಮೀನುಗಾರರ ಸಮಸ್ಯೆಗಳ ಕುರಿತು ಜಿ.ಶಂಕರ್ ಈ ಸಂದರ್ಭದಲ್ಲಿ ಅವರ ಮುಂದಿಟ್ಟರು. ಮೀನುಗಾರರನ್ನು ಎಸ್ಟಿಗೆ ಸೇರಿಸುವಂತೆ ಒತ್ತಾಯಿಸಿ ಎರಡು ಬಾರಿ ರಾಜ್ಯ ಸರಕಾರದ ಮೂಲಕ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಮನವಿಯನ್ನು ಕೇಂದ್ರ ತಿರಸ್ಕರಿಸಿದೆ. ಅದೇ ರೀತಿ ಮೀನುಗಾರರಿಗೆ ಡಿಸೆಲ್ ಸಬ್ಸಿಡಿಯನ್ನು ಕೇಂದ್ರ ಸರಕಾರ ನೀಡಿಲ್ಲ. ಕಳೆದ ಹಲವು ತಿಂಗಳುಗಳಿಂದ ನಾಪತ್ತೆಯಾಗಿರುವ ಏಳು ಮೀನುಗಾರರನ್ನು ಈವರೆಗೆ ಪತ್ತೆ ಮಾಡಲು ಸರಕಾರಕ್ಕೆ ಸಾಧ್ಯ ವಾಗಿಲ್ಲ. ಈ ಕಾರಣದಿಂದ ನಾನು ಈ ಬಾರಿಯ ಚುನಾವಣೆಯಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಫೀಲ್ಡ್‌ಗೆ ಇಳಿಯಬೇಕಾಯಿತು ಎಂದು ಜಿ.ಶಂಕರ್ ತಿಳಿಸಿದರು.

ಬೈಂದೂರು ಕ್ಷೇತ್ರದಲ್ಲಿ ನಾವು ಈವರೆಗೆ ಫೀಲ್ಡ್‌ಗೆ ಇಳಿದಿಲ್ಲ. ಮೀನುಗಾರರ ತಾಳ್ಮೆಯನ್ನು ಪರೀಕ್ಷೆ ಮಾಡಲು ಹೋಗಬೇಡಿ. ಸಾಕಷ್ಟು ಮೀನುಗಾರರು ಬಿಜೆಪಿಯಲ್ಲಿ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಕೂಡಾ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸಿಲ್ಲ. ಆದರೆ ಈ ಬಾರಿ ಮೀನುಗಾರರ ಹಿತ ರಕ್ಷಣೆಯ ಉದ್ದೇಶದಿಂದ ಫೀಲ್ಡ್‌ಗೆ ಇಳಿಯಲೇ ಬೇಕಾಯಿತು ಎಂದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನನಗೆ ಆತ್ಮೀಯರಾಗಿದ್ದಾರೆ. ಆದರೆ ಸಮಸ್ತ ಮೀನುಗಾರರ ವಿಚಾರ ಬಂದಾಗ ಅವರ ಹಿತ ಕಾಪಾಡುವುದು ನನ್ನ ಕರ್ತವ್ಯ. ನಮ್ಮ ಬೇಡಿಕೆಯನ್ನು ಯಡಿಯೂರಪ್ಪರಿಗೆ ತಿಳಿಸಿ, ಎರಡು ಮೂರು ದಿನದಲ್ಲಿ ನಮಗೆ ಭರವಸೆ ದೊರೆಯದಿದ್ದರೆ ಮೀನುಗಾರರು ಈ ಚುನಾವಣೆಯಲ್ಲಿ ಏನು ಮಾಡುತ್ತಾರೆ ನೋಡಿ ಎಂದು ಜಿ.ಶಂಕರ್ ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದರು.


ಶಾಸಕರ ಮಾತಿಗೆ ಜಿ.ಶಂಕರ್ ಗರಂ
‘ನಿಮ್ದು ಒಳ್ಳೆಯ ಕಥೆ ಆಯ್ತಲ್ಲ. ಉಡಾಫೆ ಮಾತನಾಡುವುದು ಬಿಡಿ. ಇದೆಲ್ಲ ಇನ್ನು ನಡೆಯುವುದಿಲ್ಲ. ನಾನು ಹೇಳಿದ್ದು ಮಾಡುತ್ತೇನೆ. ಕಾಂಗ್ರೆಸ್ ವಿಚಾರ ಬಿಡಿ... ನೀವು ಏನು ಮಾಡಿದ್ದೀರಿ ಹೇಳಿ. ಕಾಂಗ್ರೆಸ್‌ನವರತ್ತ ಕೇಳಿ ಅಂತ ಹೇಳುತ್ತೀರಿ. ಯಡಿಯೂರಪ್ಪ ಮಾಡಬೇಕಾಗಿತ್ತಲ್ಲ. ನಿಮಗೆ ಕರಾವಳಿ ಯವರ ಮತ ಬೇಡವೇ. ನೀವು ಬಂದು ಏನು ಮಾಡಿದ್ದೀರಿ ಅಂತ ಹೇಳಿ. ಮೀನುಗಾರರಿಗೆ ಡಿಸೇಲ್ ಸಬ್ಸಿಡಿ ನೀಡಿದ್ದೀರಾ ಅಥವಾ ಬಡ ಮೀನುಗಾರರನ್ನು ಹುಡುಕುವ ಕೆಲಸ ಮಾಡಿದ್ದೀರಾ?’ ಎಂದು ಜಿ.ಶಂಕರ್ ಶಾಸಕರ ಮಾತಿನಿಂದ ಸಿಟ್ಟಾಗಿ ತೀವ್ರ ತರಾಟೆಗೆ ತೆಗೆದುಕೊಳ್ಳುತ್ತ ಪ್ರಶ್ನಿಸಿದರು 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News