ಪ್ರಜ್ಞಾ ಸಿಂಗ್ ಹೇಳಿಕೆಯಿಂದ ಬಿಜೆಪಿಯ ಅಸಲಿ ಮುಖ ಬಯಲು: ಕಾಂಗ್ರೆಸ್

Update: 2019-04-20 13:40 GMT

ಮಂಗಳೂರು, ಎ.20: ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ, ಹುತಾತ್ಮ ಹೇಮಂತ್ ಕರ್ಕರೆ ಬಗ್ಗೆ ಮಾಲೆಗಾಂವ್ ಸ್ಫೋಟ ಪ್ರಕರಣದ ಮುಖ್ಯ ಆರೋಪಿ, ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಜ್ಞಾಸಿಂಗ್ ಠಾಕೂರ್ ಅವರು ನೀಡಿರುವ ಹೇಳಿಕೆಯಿಂದ ಬಿಜೆಪಿಯ ಅಸಲಿ ಮುಖ ಬಹಿರಂಗವಾಗಿದೆ ಎಂದು ರಾಜ್ಯ ಮಾಧ್ಯಮ ವಿಭಾಗ ಸಮನ್ವಯಕಾರ ಎ.ಸಿ. ವಿನಯರಾಜ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಕೆಪಿಸಿಸಿ ಮಾಧ್ಯಮ ವಿಭಾಗದ ಸಂಯೋಜಕ ಹಾಗೂ ಜಿಲ್ಲಾ ವಕ್ತಾರ ಎ.ಸಿ.ವಿನಯರಾಜ್, ಆರೋಪಿಯಾಗಿರುವ ಪ್ರಜ್ಞಾ ಸಿಂಗ್‌ಗೆ ಭೋಪಾಲ್ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನೀಡುವ ಮೂಲಕ ಹಾಗೂ ಹೇಳಿಕೆಯ ಬಗ್ಗೆ ಮೌನ ವಹಿಸಿ ಪಕ್ಷವು ಭಯೋತ್ಪಾದನೆ ಕುರಿತಾದ ತನ್ನ ನಿಲುವನ್ನು ವ್ಯಕ್ತಪಡಿಸಿದಂತಾಗಿದೆ ಎಂದು ಟೀಕಿಸಿದರು.

ಪಾಕಿಸ್ತಾನಿ ಆತಂಕವಾದಿ ಅಜ್ಮಲ್ ಕಸಬ್‌ನನ್ನು ಬಿಜೆಪಿಯು ಪ್ರಜ್ಞಾ ಸಿಂಗ್ ಹೇಳಿಕೆ ಮೂಲಕ ಸಮರ್ಥಿಸಿಕೊಂಡಿದೆ. ಎಟಿಎಸ್ ಮುಖ್ಯಸ್ಥರಾಗಿದ್ದ ಹುತಾತ್ಮ ಹೇಮಂತ್ ಕರ್ಕರೆ ಅವರು ಕರ್ತವ್ಯ ನಿರ್ವಹಣೆಗೆ ಸರಕಾರದಿಂದ ಅಶೋಕ ಚಕ್ರ ಪ್ರಶಸ್ತಿ ಪಡೆದವರು. 2008ರ ನವೆಂಬರ್ 26ರಂದು ನಡೆದ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಅಮಾಯಕರನ್ನು ರಕ್ಷಿಸಲು ಹೋರಾಟ ಮಾಡಿ ಆತಂಕವಾದಿ ಕಸಬ್‌ನನ್ನು ಜೀವಂತವಾಗಿ ಸೆರೆಹಿಡಿದ ಸಮರ್ಥ ಅಧಿಕಾರಿ. ಇಂತಹ ಹುತಾತ್ಮ ಅಧಿಕಾರಿಯನ್ನು ರಾವಣ/ ರಾಕ್ಷಸರಿಗೆ ಹೋಲಿಕೆ ಮಾಡಿ ಪ್ರಜ್ಞಾ ಸಿಂಗ್ ಹೇಳಿಕೆಗೆ ಪ್ರಧಾನ ಮಂತ್ರಿ ಸೇರಿದಂತೆ ಬಿಜೆಪಿಯ ನಾಯಕರು ಮೌನ ವಹಿಸಿರುವುದು ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಂತೆ. ಇದು ಬಿಜೆಪಿಯ ಅಸಲಿ ಮುಖವಾಡವನ್ನು ತೋರಿಸಿದೆ ಎಂದು ಹೇಳಿದರು.

ಹುತಾತ್ಮ ಹೇಮಂತ್ ಕರ್ಕರೆ ವಂಶವನ್ನು ನಾಶ ಮಾಡಬೇಕೆಂಬ ಪ್ರಜ್ಞಾ ಸಿಂಗ್ ಹೇಳಿಕೆ ಖಂಡನೀಯ. ಹುತಾತ್ಮರ ಬಗ್ಗೆ ಬಿಜೆಪಿ ಮುಖಂಡರಿಗೆ ಗೌರವವಿದ್ದಲ್ಲಿ ಪ್ರಜ್ಞಾ ಸಿಂಗ್ ವಿರುದ್ಧ ಕ್ರಮ ಜರುಗಿಸಬೇಕು. ಪಕ್ಷದಿಂದ ಅವರಿಗೆ ನೀಡಿರುವ ಟಿಕೆಟ್ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಭಯೋತ್ಪಾದನೆ ಆರೋಪಿಯನ್ನು ಸಂಸದರನ್ನಾಗಿ ಮಾಡಿದ್ದಲ್ಲಿ ಈ ದೇಶದಲ್ಲಿ ಭಯೋತ್ಪಾದನೆಯ ಸದ್ದಡಗಿಸಲು ಸಾಧ್ಯವೇ? ಉತ್ತಮ ಆಡಳಿತವನ್ನು ನಿರೀಕ್ಷಿಸಲು ಸಾಧ್ಯವೇ ? ದ್ವೇಷ ರಾಜಕಾರಣಕ್ಕೆ ಇದು ನಾಂದಿಯಾಗಲಾರದೇ ಎಂಬ ಪ್ರಶ್ನೆಗಳಿಗೆ ಬಿಜೆಪಿ ಉತ್ತರಿಸಬೇಕು ಎಂದು ವಿನಯರಾಜ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ಮಹಾಬಲ ಮಾರ್ಲ, ಸದಾಶಿವ ಉಳ್ಳಾಲ್, ಪೃಥ್ವಿರಾಜ್, ನಝೀರ್ ಬಜಾಲ್, ನೀರಜ್‌ಪಾಲ್, ಇಲ್ಯಾಸ್ ಕಡಬ ಉಪಸ್ಥಿತರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News