ದುಬೈ ವಿಮಾನ ನಿಲ್ದಾಣದಲ್ಲಿ ಭಾರತೀಯ ಮಹಿಳೆಗೆ ಹೆರಿಗೆ

Update: 2019-04-21 04:40 GMT

ದುಬೈ: ಭಾರತೀಯ ಮಹಿಳೆಯೊಬ್ಬರು ದುಬೈ ವಿಮಾನ ನಿಲ್ದಾಣದಲ್ಲಿ ಮಹಿಳಾ ನಿರೀಕ್ಷಕಿ ಸಹಾಯದಿಂದ ಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆ ವರದಿಯಾಗಿದೆ.

ದುಬೈ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್‌ನಲ್ಲಿ ಭಾರತೀಯ ಮಹಿಳೆಯೊಬ್ಬರು ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಈ ಹಂತದಲ್ಲಿ ಏನು ಮಾಡಬೇಕು ಎಂದು ತೋಚದೆ ಅಕ್ಕಪಕ್ಕದಲ್ಲಿದ್ದ ಜನ ಮೂಕ ಪ್ರೇಕ್ಷಕರಾಗಬೇಕಾಯಿತು ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.

ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ವಿಮಾನ ನಿಲ್ದಾಣದ ನಿರೀಕ್ಷಕರಾಗಿದ್ದ ಹನನ್ ಹುಸೈನ್ ಮುಹಮ್ಮದ್ ಎಂಬವರು ಮಹಿಳೆಯ ನೆರವಿಗೆ ಬಂದು, ಈ ತುರ್ತು ಸನ್ನಿವೇಶವನ್ನು ನಿಭಾಯಿಸಿದರು. ತಕ್ಷಣ ತಪಾಸಣಾ ಕೊಠಡಿಗೆ ಮಹಿಳೆಯನ್ನು ಕರೆದೊಯ್ದು, ಮಗುವಿಗೆ ಜನ್ಮ ನೀಡಲು ನೆರವಾದರು. ಮಗು ಉಸಿರಾಡುತ್ತಿಲ್ಲ ಎನ್ನುವುದು ಗಮನಕ್ಕೆ ಬಂದ ತಕ್ಷಣ ನಿರೀಕ್ಷಕಿ, ನವಜಾತ ಶಿಶುವಿಗೆ ಕಾರ್ಡಿಯೊ ಪಲ್ಮನರಿ ರೆಸುಸಿಯೇಶನ್ (ಸಿಪಿಆರ್) ಮೂಲಕ ಉಸಿರಾಡಲು ನೆರವಾದರು. ಬಳಿಕ ತಕ್ಷಣ ತಾಯಿ ಹಾಗೂ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಈ ನಂಬಲಸಾಧ್ಯ ಸೇವೆಯ ಮೂಲಕ ತಾಯಿ- ಮಗುವಿನ ಪ್ರಾಣ ರಕ್ಷಣೆ ಮಾಡಿದ ಮಾನವೀಯ ಸೇವೆಗಾಗಿ ಹಾಗೂ ವೃತ್ತಿಯಲ್ಲಿ ಸಮಯ ಪ್ರಜ್ಞೆ ಮೆರೆದ ಕಾರಣಕ್ಕಾಗಿ ವಿಮಾನ ನಿಲ್ದಾಣದ ಭದ್ರತಾ ವಿಭಾಗದ ವತಿಯಿಂದ ಬ್ರಿಗೇಡಿಯರ್ ಅಲಿ ಅತೀಕ್ ಬಿನ್ ಲಹೇಝ್ ಅವರು ಮುಹಮ್ಮದ್ ರನ್ನು ಸನ್ಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News