ಶ್ರೀಲಂಕಾದ ಚರ್ಚ್, ಹೊಟೇಲ್ ಗಳಲ್ಲಿ ಸ್ಫೋಟ: ಮೃತರ ಸಂಖ್ಯೆ207ಕ್ಕೇರಿಕೆ

Update: 2019-04-21 15:14 GMT

ಕೊಲಂಬೋ,ಎ.21: ರವಿವಾರ ಈಸ್ಟರ್ ಸಂಭ್ರಮದಲ್ಲಿದ್ದ ಶ್ರೀಲಂಕಾದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ ವಿದೇಶಿಯರು ಸೇರಿದಂತೆ ಕನಿಷ್ಠ 207 ಜನರು ಸಾವನ್ನಪ್ಪಿದ್ದು, 450ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಸರಿಸುಮಾರು ಏಕಕಾಲದಲ್ಲಿ ನಡೆದ ಈ ಬಾಂಬ್ ದಾಳಿಗಳು ಮೂರು ಚರ್ಚ್‌ಗಳು ಮತ್ತು ವಿದೇಶಿಯರು ಹೆಚ್ಚಾಗಿ ತಂಗುವ ಪಂಚತಾರಾ ಹೋಟೆಲ್‌ಗಳನ್ನು ಗುರಿಯಾಗಿಸಿಕೊಂಡಿದ್ದವು. ಈ ಭೀಕರ ಹತ್ಯಾಕಾಂಡದಿಂದಾಗಿ ಎಲ್‌ಟಿಟಿಇ ಜೊತೆಗಿನ ಬರ್ಬರ ನಾಗರಿಕ ಯುದ್ಧದ ಬಳಿಕ ದಶಕದ ಕಾಲ ದೇಶದಲ್ಲಿ ನೆಲೆಸಿದ್ದ ಶಾಂತಿಯು ನುಚ್ಚುನೂರಾಗಿದೆ.

ದ್ವೀಪರಾಷ್ಟ್ರದ ಇತಿಹಾಸದಲ್ಲಿ ಅತ್ಯಂತ ಭೀಕರ ದಾಳಿಗಳ ಸಾಲಿಗೆ ಸೇರಿರುವ ಈ ಸ್ಫೋಟಗಳು ರವಿವಾರ ಬೆಳಿಗ್ಗೆ 8:45ರ ಸುಮಾರಿಗೆ ಕೊಲಂಬೋದ ಸೇಂಟ್ ಅಂಥೋನಿಸ್ ಚರ್ಚ್,ಪಶ್ಚಿಮ ಕರಾವಳಿಯಲ್ಲಿನ ನೆಗೊಂಬೋ ಪಟ್ಟಣದ ಸೇಂಟ್ ಸೆಬಾಸ್ಟಿಯನ್ಸ್ ಚರ್ಚ್ ಮತ್ತು ಪೂರ್ವದ ಬಟ್ಟಿಕಲೋವಾಪಟ್ಟಣದ ಸೇಂಟ್ ಮೈಕೇಲ್ ಚರ್ಚ್‌ನಲ್ಲಿ ಸಂಭವಿಸಿದವು. ಈವೇಳೆ ಈ ಚರ್ಚ್‌ಗಳಲ್ಲಿ ಈಸ್ಟರ್ ಪ್ರಾರ್ಥನೆಗಾಗಿ ಭಾರೀ ಸಂಖ್ಯೆಯಲ್ಲಿ ಕ್ರೈಸ್ತರು ಸಮಾವೇಶಗೊಂಡಿದ್ದರು ಎಂದು ಪೊಲೀಸ್ ವಕ್ತಾರ ರುವಾನ್ ಗುಣಶೇಖರ ತಿಳಿಸಿದರು.

ಕೊಲಂಬೋದ ಶಾಂಗ್ರಿಲಾ, ಸಿನಾಮನ್ ಗ್ರಾಂಡ್ ಮತ್ತು ಕಿಂಗ್ಸ್‌ಬರಿ ಪಂಚತಾರಾ ಹೋಟೆಲ್‌ಗಳಲ್ಲಿ ಮೂರು ಸ್ಫೋಟಗಳು ಸಂಭವಿಸಿವೆ.

ವಿದೇಶಿಯರು ಸೇರಿದಂತೆ ಭಾರೀ ಪ್ರಮಾಣದಲ್ಲಿ ಸಾವುನೋವುಗಳು ಸಂಭವಿಸಿವೆ ಎಂದು ಶ್ರೀಲಂಕಾದ ಆರ್ಥಿಕ ಸುಧಾರಣೆಗಳು ಮತ್ತು ನಾಗರಿಕ ವಿತರಣೆ ಸಚಿವ ಹರ್ಷ ಡಿ’ಸಿಲ್ವಾ ಅವರು ತಿಳಿಸಿದರು.

ಮೂರು ಹೋಟೆಲ್‌ಗಳು ಮತ್ತು ಒಂದು ಚರ್ಚ್ ದಾಳಿಗೆ ಗುರಿಯಾದ ಕೊಲಂಬೋದಲ್ಲಿ 45 ಜನರು ಮೃತಪಟ್ಟಿದ್ದಾರೆ. ನೆಗೊಂಬೋದಲ್ಲಿ 90ಕ್ಕೂ ಅಧಿಕ ಮತ್ತು ಬಟ್ಟಿಕಲೋವಾದಲ್ಲಿ 27 ಜನರು ಸಾವನ್ನಪ್ಪಿದ್ದಾರೆ. ಸ್ಫೋಟಗಳಿಂದಾಗಿ 450ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆ ಮೂಲಗಳುತಿಳಿಸಿದವು.

ಕೊಲಂಬೋ ನ್ಯಾಷನಲ್ ಆಸ್ಪತ್ರೆ(ಸಿಎನ್‌ಎಚ್)ಗೆ ತರಲಾಗಿರುವ 45 ಶವಗಳಲ್ಲಿ ಒಂಭತ್ತು ವಿದೇಶಿಯರದ್ದಾಗಿವೆ ಮತ್ತು ಮೃತರಲ್ಲಿ ಅಮೆರಿಕ್ ಹಾಗೂಬ್ರಿಟನ್ ಪ್ರಜೆಗಳು ಸೇರಿದ್ದಾರೆ ಎಂದು ಅವು ಹೇಳಿದವು.

300ಕ್ಕೂ ಅಧಿಕ ಗಾಯಾಳುಗಳನ್ನು ಒಳರೋಗಿಗಳನ್ನಾಗಿ ದಾಖಲಿಸಿಕೊಳ್ಳಲಾಗಿದೆ ಎಂದು ಸಿಎನ್‌ಎಚ್ ವಕ್ತಾರ ಡಾ.ಸಮಿಂದಿ ಸಮರಕೂನ್ ತಿಳಿಸಿದರು.

ಬಟ್ಟಿಕಲೋವಾ ಆಸ್ಪತ್ರೆಯಲ್ಲಿ 100 ಅಧಿಕ ಗಾಯಾಳುಗಳನ್ನು ದಾಖಲಿಸಲಾಗಿದೆ.

ಆರು ಸ್ಫೋಟಗಳ ಬಳಿಕ ಕೊಲಂಬೋ ಪ್ರಾಣಿ ಸಂಗ್ರಹಾಲಯದ ಬಳಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಕೊಲ್ಲಲ್ಪಟಿದ್ದಾರೆ.

ಕೊಲಂಬೋದ ಉಪನಗರ ಒರುಗುಡಾವಟ್ಟಾ ಎಂಬಲ್ಲಿ ಶೋಧ ಕಾರ್ಯಾಚರಣೆಗೆ ತೆರಳಿದ್ದ ಪೊಲೀಸ್ ತಂಡವೊಂದು ಮನೆಯೊಂದನ್ನು ಪ್ರವೇಶಿಸಿದಾಗಆತ್ಮಹತ್ಯಾ ಬಾಂಬರ್‌ನೋರ್ವ ಸ್ವಯಂ ಸ್ಫೋಟಿಸಿಕೊಂಡಾಗ ಎರಡಂತಸ್ತಿನ ಕಟ್ಟಡದ ಕಾಂಕ್ರೀಟ್ ಛಾವಣಿಯು ಕುಸಿದು ಬಿದ್ದ ಪರಿಣಾಮ ಮೂವರುಪೊಲೀಸರು ಮೃತಪಟ್ಟಿದ್ದು, ಇದು ಸರಣಿ ಸ್ಫೋಟಗಳಲ್ಲಿ ಎಂಟನೆಯದಾಗಿತ್ತು. ಈ ಸ್ಫೋಟ ಸಂಭವಿಸಿದ ಬೆನ್ನಿಗೇ ಸರಕಾರವು ಕರ್ಫ್ಯೂ ಹೇರಿದ್ದು,ಇದುಮುಂದಿನ ಸೂಚನೆಯವರೆಗೆ ಅನಿರ್ದಿಷ್ಟಾವಧಿಗೆ ಜಾರಿಯಲ್ಲಿರುತ್ತದೆ.

ಯಾವುದೇ ಗುಂಪು ಸರಣಿ ಸ್ಫೋಟಗಳ ಹೊಣೆಗಾರಿಕೆಯನ್ನು ವಹಿಸಿಕೊಂಡಿಲ್ಲ.

ಆದರೆ ಶ್ರೀಲಂಕಾದಲ್ಲಿ ಈ ಹಿಂದೆ ಹೆಚ್ಚಿನ ಮಾರಣಾಂತಿಕ ಸ್ಫೋಟಗಳನ್ನು ಪ್ರತ್ಯೇಕ ತಮಿಳು ರಾಷ್ಟ್ರಕ್ಕಾಗಿ ಸುಮಾರು 30 ವರ್ಷಗಳಿಂದಲೂ ಹೋರಾಟನಡೆಸುತ್ತಿದ್ದ ಎಲ್‌ಟಿಟಿಇ ನಡೆಸಿತ್ತು. 2009ರಲ್ಲಿ ಶ್ರೀಲಂಕಾ ಸೇನೆಯು ಎಲ್‌ಟಿಟಿಇ ಪರಮೋಚ್ಚ ನಾಯಕ ವಿ.ಪ್ರಭಾಕರನ್ ಹತ್ಯೆಗೈದ ಬಳಿಕ ಈಹೋರಾಟವು ಅಂತ್ಯಗೊಂಡಿತ್ತು.

ಶಾಂತಿಯನ್ನು ಕಾಯ್ದುಕೊಳ್ಳುವಂತೆ ಕರೆ ನೀಡಿರುವ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು,ಅತ್ಯಂತ ಅನಿರೀಕ್ಷಿತ ಘಟನೆಗಳಿಂದ ತನಗೆ ಆಘಾತವಾಗಿದೆ.ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಭದ್ರತಾ ಪಡೆಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಸ್ಫೋಟಗಳನ್ನು ‘ಹೇಡಿತನದ ದಾಳಿಗಳು’ ಎಂದು ಬಣ್ಣಿಸಿರುವ ಪ್ರಧಾನಿ ರನಿಲ್ ವಿಕ್ರಮಸಿಂಘೈ ಅವರು,ಪರಿಸ್ಥಿತಿಯನ್ನು ನಿಯಂತ್ರಿಸಲು ಸರಕಾರವುಶ್ರಮಿಸುತ್ತಿದೆ ಎಂದು ಹೇಳಿದರು.

ರಾಜಧಾನಿ ಕೊಲಂಬೋದಾದ್ಯಂತ ಧಾರ್ಮಿಕ ಸ್ಥಳಗಳ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸರಕಾರವು ಎಲ್ಲ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನುತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಸರಕಾರವು ಎಲ್ಲ ಅಗತ್ಯ ತುರ್ತು ಕ್ರಮಗಳನ್ನು ಕೈಗೊಂಡಿದೆ ಎಂದು ಡಿ’ಸಿಲ್ವಾ ತಿಳಿಸಿದರು.

ನಾವು ಪರಿಸ್ಥಿತಿಯ ಮೇಲೆ ನಿಕಟ ನಿಗಾ ಇರಿಸಿದ್ದೇವೆ ಎಂದು ಕೊಲಂಬೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಟ್ವೀಟಿಸಿದೆ.

ಮೊದಲ ಸ್ಫೋಟಗಳು ಕೊಲಂಬೋದ ಸೇಂಟ್ ಅಂಥೋನಿಸ್ ಮತ್ತು ನೆಗೊಂಬೋದ ಸೇಂಟ್ ಸೆಬಾಸ್ಟಿಯನ್ಸ್ ಚರ್ಚ್‌ಗಳಲ್ಲಿ ಸಂಭವಿಸಿದ್ದವು ಎನ್ನಲಾಗಿದೆ.ಇದಾದ ಬಳಿಕ ಕೊಲಂಬೋದಲ್ಲಿನ ಮೂರು ಹೋಟೆಲ್‌ಗಳು ಮತ್ತು ಬಟ್ಟಿಕಲೋವಾದ ಚರ್ಚ್‌ನಲ್ಲಿ ಸ್ಫೋಟಗಳು ಸಂಭವಿಸಿದ್ದವು.

ಇಲ್ಲಿಯ ಬಂಡಾರನಾಯಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ. ಸ್ಫೋಟಗಳ ಹಿನ್ನೆಲೆಯಲ್ಲಿ ಎಲ್ಲಪೊಲೀಸ್ ಸಿಬ್ಬಂದಿಗಳ ರಜೆಗಳನ್ನು ರದ್ದುಗೊಳಿಸಲಾಗಿದೆ. ರಜೆಯಲ್ಲಿದ್ದ ವೈದ್ಯರು,ನರ್ಸ್‌ಗಳು ಮತ್ತು ಆರೋಗ್ಯ ಅಧಿಕಾರಿಗಳನ್ನು ತಕ್ಷಣವೇ ಕರ್ತವ್ಯಕ್ಕೆಹಾಜರಾಗುವಂತೆ ಸೂಚಿಸಲಾಗಿದೆ. ಸೋಮವಾರ ಮತ್ತು ಮಂಗಳವಾರ ಸರಕಾರಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಕೊಲಂಬೋ ಜಿಲ್ಲೆಯಲ್ಲಿ ಎಲ್ಲ ಈಸ್ಟರ್ ಸಾಮೂಹಿಕ ಪ್ರಾರ್ಥನೆಗಳನ್ನು ರದ್ದುಗೊಳಿಸಲಾಗಿದೆ ಎಂದು ಕಾರ್ಡಿನಲ್ ಮ್ಯಾಲ್ಕಂ ರಂಜಿತ್ ತಿಳಿಸಿದರು.

ಇದೊಂದು ಅತ್ಯಂತ ಬರ್ಬರ ದಾಳಿ ಎಂದು ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸ ಹೇಳಿದರು. ಅವರ ನಾಯಕತ್ವದಲ್ಲಿ ಶ್ರೀಲಂಕಾ ಸೇನೆಯು ಎಲ್‌ಟಿಟಿಇಅನ್ನು ದಮನಿಸಿತ್ತು.

ನೆರವಿನ ಅಗತ್ಯದಲ್ಲಿರುವ ಅಥವಾ ಸ್ಪಷ್ಟನೆಯನ್ನು ಕೋರುವ ಭಾರತೀಯ ಪ್ರಜೆಗಳು ಕೊಲಂಬೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಈಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು

+94777903082,+94112422788,+94112422789,+94777902082,+94772234176

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News