ಲೋಕಸಭೆ ಚುನಾವಣೆ ಬಹಿಷ್ಕರಿಸಲು 72 ಗ್ರಾಮಗಳ ನಿರ್ಧಾರ: ಕಾರಣವೇನು ಗೊತ್ತಾ ?

Update: 2019-04-21 15:23 GMT

ಗುರ್ಗಾಂವ್, ಎ. 21: ಭೂಸ್ವಾಧೀನಪಡಿಸಿ ರೈತರಿಗೆ ನೀಡಲಾದ ಪರಿಹಾರ ಧನದಿಂದ 35 ಲಕ್ಷ ರೂಪಾಯಿ ಹಿಂದೆ ಪಡೆಯಲು ಹರ್ಯಾಣ ರಾಜ್ಯ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾರ್ಪೊರೇಶನ್ (ಎಚ್‌ಎಸ್‌ಐಐಡಿಸಿ) ನೋಟಿಸು ಜಾರಿ ಮಾಡಿದ ಬಳಿಕ ಗುರ್ಗಾಂವ್ ಐಎಂಟಿ ಮನೇಸರ್‌ನ 72 ಗ್ರಾಮಗಳ ಜನರು ಚುನಾವಣೆ ಬಹಿಷ್ಕರಿಸಿದ್ದಾರೆ.

2019 ಜೂನ್ 30ರ ಸಮಯ ಮಿತಿ ಒಳಗಡೆ ಪರಿಹಾರ ಮೊತ್ತದಿಂದ 35 ಲಕ್ಷ ರೂಪಾಯಿ ಹಿಂದಿರುಗಿಸುವಂತೆ ಸುಪ್ರೀಂ ಕೋರ್ಟ್ ಫೆಬ್ರವರಿ 8ರಂದು ನೀಡಿದ ಆದೇಶ ಅನುಸರಿಸಲು ಈ ನೋಟಿಸು ಜಾರಿ ಮಾಡಲಾಗಿದೆ. ಈ ವಿಷಯದ ಕುರಿತು ಎಪ್ರಿಲ್ 21ರಂದು ಧನಾ ಗ್ರಾಮದಲ್ಲಿ ‘ಮಹಾಪಂಚಾಯತ್’ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹಾಗೂ ಬಿಜೆಪಿಯ ಗುರ್ಗಾಂವ್‌ನ ಹಾಲಿ ಸಂಸದ ಇಂದ್ರಜಿತ್ ಸಿಂಗ್ ಪರಿಹರಿಸದೇ ಇದ್ದರೆ, ಲೋಕಸಭಾ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಮನೇಸರ್ ಪ್ರದೇಶದಲ್ಲಿರುವ 72 ಗ್ರಾಮಗಳ ನಿವಾಸಿಗಳು ಬೆದರಿಕೆ ಒಡ್ಡಿದ್ದಾರೆ.

 ಐಎಂಟಿ ಮನೇಸರ್‌ನ ಹಂತ 1ಕ್ಕಾಗಿ 2002-03ರಲ್ಲಿ 1700 ಎಕರೆ ಪ್ರದೇಶವನ್ನು ಎಚ್‌ಎಸ್‌ಐಐಡಿಸಿ ಸ್ವಾಧೀನಪಡಿಸಿಕೊಂಡಿತ್ತು. ಪ್ರತಿ ಎಕರಿಗೆ 75 ಲಕ್ಷ ರೂಪಾಯಿ ಪರಿಹಾರ ಧನ ನಿಗದಿಪಡಿಸಿತ್ತು ಎಂದು ಧಾನಾ ಗ್ರಾಮದ ಸರಪಂಚ್ ಮೂಲ್‌ಚಂದ್ ಹೇಳಿದ್ದಾರೆ. ಮಾರುಕಟ್ಟೆ ಬೆಲೆಗೆ ಹೋಲಿಸಿದರೆ ಈ ಪರಿಹಾರ ಧನ ತುಂಬಾ ಕಡಿಮೆಯಾಗಿರುವುದರಿಂದ ನಾವು ಎಚ್‌ಎಸ್‌ಐಐಡಿಸಿ ನಿರ್ಧಾರವನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸಿದೆವು. ನ್ಯಾಯಾಲಯ 2010 ಜನವರಿ 27ರಂದು ರೈತರ ಪರವಾಗಿ ತೀರ್ಪು ನೀಡಿತು. ಅದು ಪರಿಹಾರ ಧನ ಮೊತ್ತವನ್ನು ಪ್ರತಿ ಎಕರೆಗೆ 2.81 ಕೋ. ರೂ. ಹೆಚ್ಚಿಸಿತು ಎಂದು ಅವರು ತಿಳಿಸಿದರು.

ಆದರೆ, ಏಳು ವರ್ಷಗಳ ಬಳಿಕ 2003ರಲ್ಲಿ ಎಎಸ್‌ಐಐಡಿಸಿ ನಿರ್ಧಾರವನ್ನು ನಾವು ಮತ್ತೆ ಪ್ರಶ್ನಿಸಿದೆವು. ಈ ಸಂದರ್ಭ ಭೂಮಿಯ ಮಾರುಕಟ್ಟೆ ಬೆಲೆ ತೀವ್ರ ಏರಿಕೆಯಾಗಿತ್ತು. ರೈತರು ಪಂಜಾಬ್ ಹಾಗೂ ಹರ್ಯಾಣ ಉಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ನ್ಯಾಯಾಲಯ ಪ್ರತಿ ಎಕರೆಯ ಪರಿಹಾರ ಧನವನ್ನು 37.4 ಲಕ್ಷ ರೂಪಾಯಿ ಏರಿಕೆ ಮಾಡಿತು ಎಂದು ಮೂಲ್‌ ಚಂದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News